ADVERTISEMENT

ಬೆಂಗಳೂರು | ರಸ್ತೆ ವಿಸ್ತರಣೆ: 40 ಮರ ತೆರವಿಗೆ ನಿರ್ಧಾರ

ಸ್ನೇಹಾ ರಮೇಶ್
Published 24 ಡಿಸೆಂಬರ್ 2022, 21:45 IST
Last Updated 24 ಡಿಸೆಂಬರ್ 2022, 21:45 IST
ಸ್ಯಾಂಕಿ ರಸ್ತೆ
ಸ್ಯಾಂಕಿ ರಸ್ತೆ   

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯಲ್ಲಿ ರಸ್ತೆ ವಿಸ್ತರಣೆ, ಮೇಲ್ಸೇತುವೆ ನಿರ್ಮಾಣಕ್ಕೆ ಮರಗಳಿಗೆ ಕೊಡಲಿ ಪೆಟ್ಟು ಬೀಳುವುದು ಮುಂದುವರಿದಿದೆ. ಈಗ ಮತ್ತೊಂದು ರಸ್ತೆಯಲ್ಲಿ ಮರ ಕಡಿಯಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಯಾರಿ ನಡೆಸಿದೆ.

ಸ್ಯಾಂಕಿ ರಸ್ತೆಯ ವಿಸ್ತರಣೆ ಹಾಗೂ ಟಿ.ಚೌಡಯ್ಯ ರಸ್ತೆಯಿಂದ 18ನೇ ಕ್ರಾಸ್‌ ತನಕ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದೆ. ಈ ಯೋಜನೆಗಾಗಿ ಮಲ್ಲೇಶ್ವರದಲ್ಲೇದಶಕಗಳಷ್ಟು ಹಳೆಯದಾದ 40 ಮರಗಳನ್ನು ತೆರವುಗೊಳಿಸಲು ಮುಂದಾಗಿದೆ. ಮರ ತೆರವುಗೊಳಿಸುವ ನಿರ್ಧಾರಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇದೇ ಕಾಮಗಾರಿ ಕೈಗೆತ್ತಿಕೊಂಡಿದ್ದ ಬಿಬಿಎಂಪಿ, ವಿರೋಧ ವ್ಯಕ್ತವಾದ ಮೇಲೆ ಕೈಬಿಟ್ಟಿತ್ತು.

ಈಗ ಮತ್ತೆ ಬಿಬಿಎಂಪಿ ಬಾಷ್ಯಂ ವೃತ್ತದಿಂದ ಮಲ್ಲೇಶ್ವರದ 18ನೇ ಕ್ರಾಸ್‌ವರೆಗೆ 1.1 ಕಿ.ಮೀ. ರಸ್ತೆ ವಿಸ್ತರಿಸಲು ಮುಂದಾಗಿದೆ. ಜತೆಗೆ, ನಗರದ ಕೇಂದ್ರ ಭಾಗದಿಂದ ಉತ್ತರಕ್ಕೆ ಸಂಪರ್ಕಿಸಲು 560 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಲಾಗಿದೆ.

ADVERTISEMENT

ಮರ ತೆರವುಗೊಳಿಸಿದರೆ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಜತೆಗೆ ಸ್ಯಾಂಕಿ ಕೆರೆಗೂ ಆಪತ್ತು ಎದುರಾಗುವ ಸಾಧ್ಯತೆ ಇದೆ ಎಂದು ಪರಿಸರ ಪ್ರೇಮಿಗಳು ಆತಂಕವ್ಯಕ್ತಪಡಿಸಿದ್ದಾರೆ.

‘ಪ್ರಸ್ತುತ ಈ ರಸ್ತೆ ಕೇವಲ 15–18 ಮೀಟರ್ ಇದೆ. ಏಕಕಾಲದಲ್ಲಿ ಎರಡು ಕಾರುಗಳು ತೆರಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ರಸ್ತೆಯನ್ನು 24 ಮೀಟರ್‌ವರೆಗೆ ವಿಸ್ತರಿಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

‘ಕೆರೆಯ ಬದುವಿನ ಮೇಲೆ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದೇ ಕಾನೂನು ಉಲ್ಲಂಘನೆಯಾಗಿದೆ. ಇದೀಗ ಮರ ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡಲು ಮುಂದಾಗಿರುವುದು ಪರಿಸರದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಆತಂಕವ್ಯಕ್ತಪಡಿಸುತ್ತಾರೆ.

‘ಸ್ಯಾಂಕಿ ಕೆರೆಯ ಬದಿಯಲ್ಲಿನ ಮರಗಳನ್ನು ತೆರವುಗೊಳಿಸಿದರೆ ಹಸಿರು ಹೊದಿಕೆ ನಾಶವಾಗಲಿದೆ. ಕೆರೆ ಬದುವಿನ ಮಣ್ಣು ಸಡಿಲಗೊಂಡು ಕೆರೆ ಏರಿ ದುರ್ಬಲಗೊಳ್ಳುತ್ತದೆ. ಈ ರಸ್ತೆ ವಿಸ್ತರಣೆಯಿಂದ ಹಾನಿಯೇ ಹೆಚ್ಚು’ ಎಂದು ಮಲ್ಲೇಶ್ವರದ ಸ್ವಾಭಿಮಾನ ಸಂಘಟನೆಯ ಅಧ್ಯಕ್ಷರಾದ ರೇಖಾ ಚಾರಿ ಎಚ್ಚರಿಸಿದ್ದಾರೆ.

‘ಈ ರಸ್ತೆಯು ನಗರದ ಬೇರೆ ರಸ್ತೆಗಳಂತೆ ಅಲ್ಲ. ಹಳೆಯದಾದ ರಸ್ತೆಯಲ್ಲಿ 80ರಿಂದ 100 ವರ್ಷದಷ್ಟು ಹಳೆಯ ಮರಗಳಿವೆ. ಈ ಯೋಜನೆಯಿಂದ ಹಸಿರು ಪರಂಪರೆಗೆ ಧಕ್ಕೆಯಾಗಲಿದೆ’ ಎಂದು ಡಾ.ರಾಜನ್‌ ಹೇಳಿದರು. ಇವರು 2011ರಲ್ಲೇ ಯೋಜನೆ ವಿರೋಧಿಸಿದ್ದರು. ಅಧಿಕಾರಿಗಳು ಪರ್ಯಾಯ ಮಾರ್ಗಗಳತ್ತ ಯೋಚಿಸಬೇಕಿದೆ ಎಂದು ಸ್ಥಳೀಯರು ಕೋರಿದ್ದಾರೆ.

2011ರಲ್ಲಿ ಈ ಯೋಜನೆ ಕೈಗೆತ್ತಿಕೊಂಡಾಗ ಸ್ಥಳೀಯರು ನಿರಂತರ ಪ್ರತಿಭಟನೆ ನಡೆಸಿದ್ದರು. ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬಿಬಿಎಂಪಿ ಪರವಾಗಿ ಆದೇಶ ಬಂದಿದ್ದು ಮತ್ತೆ ಬಿಬಿಎಂಪಿ ಅಧಿಕಾರಿಗಳು ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.