ಬೆಂಗಳೂರು: ನಗರದಲ್ಲಿ ಹಲವು ವಾಹನಗಳ ಚಕ್ರಗಳು ಇತ್ತೀಚಿನ ದಿನಗಳಲ್ಲಿ ‘ಮೊಳೆ’ಗಳಿಂದಾಗಿ ಪಂಕ್ಚರ್ ಆಗುತ್ತಿದ್ದು, ಇದರಿಂದ ಮಾಲೀಕರ ಜೇಬಿಗೆ ಕತ್ತರಿ ಬೀಳುತ್ತಿದೆ. ವಾಹನಗಳು ಹೆಚ್ಚು ಪಂಕ್ಚರ್ ಆಗುತ್ತಿರುವ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮೊಳೆಗಳು ಕಂಡುಬರುತ್ತಿದ್ದು, ಇದರ ಹಿಂದೆ ‘ಪಂಕ್ಚರ್ ಮಾಫಿಯಾ’ ಸಕ್ರಿಯವಾಗಿರುವ ಅನುಮಾನ ವ್ಯಕ್ತವಾಗಿದೆ.
ನಗರದ ಪ್ರಮುಖ ರಸ್ತೆ, ಒಳ ರಸ್ತೆ, ಹೊರವರ್ತುಲ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಸಾರ್ವಜನಿಕರು ವೈಯಕ್ತಿಕವಾಗಿ ಕಾರು ಹಾಗೂ ದ್ವಿಚಕ್ರ ವಾಹನ ಬಳಸುತ್ತಿದ್ದಾರೆ. ಸರಕು ಸಾಗಣೆಗೂ ಭಾರಿ ವಾಹನಗಳು ಓಡಾಡುತ್ತಿವೆ.
ಇದನ್ನೂ ಓದಿ: ಪಂಕ್ಚರ್ ಮಾಫಿಯಾ: 400 ಗ್ರಾಂ ಮೊಳೆ ಸಂಗ್ರಹಿಸಿದ ಪಿಎಸ್‌ಐ
ಹೊರವರ್ತುಲ ರಸ್ತೆ, ಮೇಲ್ಸೇತುವೆ ರಸ್ತೆಗಳು ಹಾಗೂ ಒಳ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮೊಳೆಗಳನ್ನು ಎಸೆಯಲಾಗುತ್ತಿದ್ದು, ‘ಪಂಕ್ಚರ್ ರಸ್ತೆ’ಗಳಾಗಿ ಮಾರ್ಪಡುತ್ತಿವೆ. ಇಂಥ ರಸ್ತೆಗಳಲ್ಲಿ ಓಡಾಡುವ ವಾಹನಗಳ ಚಕ್ರಗಳು, ಮೊಳೆ ಸಿಲುಕಿ ಪಂಕ್ಚರ್ ಆಗುತ್ತಿವೆ.
ನಗರದಲ್ಲಿ ನಿತ್ಯವೂ 30ಕ್ಕೂ ಹೆಚ್ಚು ವಾಹನಗಳು ಮೊಳೆಯಿಂದ ಪಂಕ್ಚರ್ ಆಗುತ್ತಿದ್ದು, ಈ ಸಂಬಂಧ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ರಸ್ತೆಯಲ್ಲಿ ಮೊಳೆ ಎಸೆದವರು ಯಾರು? ಉದ್ದೇಶವೇನು? ಎಂಬುದರ ಬಗ್ಗೆ ಇದುವರೆಗೂ ತನಿಖೆ ಆಗಿಲ್ಲ.
ತಿಂಗಳಿಗೆ 5 ಬಾರಿ ಪಂಕ್ಚರ್: ‘ಹೆಬ್ಬಾಳ, ನಾಗಾವರ ಮಾರ್ಗವಾಗಿ ನಿತ್ಯ ಕಾರಿನಲ್ಲಿ ಕಚೇರಿಗೆ ಹೋಗಿ ಬರುತ್ತೇನೆ. ಇತ್ತೀಚಿನ ದಿನಗಳಲ್ಲಿ ತಿಂಗಳಿಗೆ 5 ಬಾರಿ ಪಂಕ್ಚರ್ ಆಗಿದೆ. ಪರಿಶೀಲಿಸಿದಾಗ ಮೊಳೆಗಳು ಸಿಲುಕಿಕೊಂಡಿರುವುದು ಗೊತ್ತಾಗಿದೆ. ಪಂಕ್ಚರ್ ಹಾಕಿಸಲು ಅನಗತ್ಯ ವೆಚ್ಚವಾಗುತ್ತಿದೆ. ಕಚೇರಿಗೆ ತೆರಳಲು ಸಮಸ್ಯೆಯಾಗುತ್ತಿದೆ’ ಎಂದು ಹೊರವರ್ತುಲ ರಸ್ತೆ ಬಳಿಯ ಖಾಸಗಿ ಕಂಪನಿ ಉದ್ಯೋಗಿ ಎಂ.ಪ್ರಶಾಂತ್ ಅಳಲು ತೋಡಿಕೊಂಡರು.
ಇದನ್ನೂ ಓದಿ: ಮೊಳೆ ಮಾಫಿಯಾ ವಿರುದ್ಧ ಟೆಕಿ ಸೆಡ್ಡು
ಆಹಾರ ಡೆಲಿವರಿ ಬಾಯ್ ಹರೀಶ್, ‘ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಒಳರಸ್ತೆಗಳಲ್ಲಿ ಹೆಚ್ಚು ಸುತ್ತಾಡುತ್ತೇನೆ. 30 ದಿನಗಳಲ್ಲಿ 4 ಬಾರಿ ಬೈಕ್ ಪಂಕ್ಚರ್ ಆಗಿದೆ. ಯಾರೊ ರಸ್ತೆಯಲ್ಲಿ ಮೊಳೆ ಎಸೆದು ಹೋಗುತ್ತಿದ್ದಾರೆ’ ಎಂದರು.
ಉಬರ್ ಕ್ಯಾಬ್ ಚಾಲಕ ವಿಶಾಲ್‌ಕುಮಾರ್, ‘ಮೆಜೆಸ್ಟಿಕ್, ಕಾಟನ್‌ಪೇಟೆ, ಚಾಮರಾಜಪೇಟೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಹೆಚ್ಚಾಗಿ ಕ್ಯಾಬ್ ಓಡಿಸುತ್ತೇನೆ. ಈ ಭಾಗದ ರಸ್ತೆಗಳಲ್ಲಿ ಹಲವು ಬಾರಿ ಕಾರು ಪಂಕ್ಚರ್ ಆಗಿದ್ದು, ಪ್ರತಿ ಬಾರಿಯೂ ಮೊಳೆಯೇ ಕಾರಣವಾಗಿದೆ. ಒಮ್ಮೆ ಪಂಕ್ಚರ್ ಆದರೆ, ಸರಿಪಡಿಸಲು ₹ 100ರಿಂದ ₹ 200 ಖರ್ಚಾಗುತ್ತಿದೆ’ ಎಂದರು.
ಆಟೊದಲ್ಲಿ ಬಂದು ಮೊಳೆ ಎಸೆದಿದ್ದ: ‘ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಇತ್ತೀಚೆಗೆ ಆಟೊ ಚಾಲಕನೊಬ್ಬ, ರಸ್ತೆ ಮಧ್ಯೆ ಮೊಳೆ ಎಸೆಯುತ್ತಿದ್ದ. ಅದನ್ನು ಗಮನಿಸಿ ಆತನನ್ನು ವಿಚಾರಿಸಿದ್ದೆ. ಮಾರುಕಟ್ಟೆಯಿಂದ ತೆಗೆದುಕೊಂಡು ಹೊರಟಿದ್ದ ಮೊಳೆಗಳ ಚೀಲ ಆಟೊದಿಂದ ಕೆಳಗೆ ಬಿದ್ದಿರುವುದಾಗಿ ಹೇಳಿ ಆತ ಸ್ಥಳದಿಂದ ಹೊರಟು ಹೋದ’ ಎಂದು ಸಂಚಾರ ಠಾಣೆಯೊಂದರ ಕಾನ್‌ಸ್ಟೆಬಲ್ ಹೇಳಿದರು.
‘ಆಟೊ ಚಾಲಕನ ರೀತಿ ಹಲವರು ಸಂಚರಿಸುವ ಸಂದರ್ಭದಲ್ಲಿಯೇ ಮೊಳೆ ಎಸೆದು ಹೋಗುತ್ತಿದ್ದಾರೆ. ಹೀಗಾಗಿ, ಅವರ ಪತ್ತೆ ಸಾಧ್ಯವಾಗುತ್ತಿಲ್ಲ’ ಎಂದರು.
‘ಪಂಕ್ಚರ್ ಅಂಗಡಿಯವರ ಮೇಲೆ ಅನುಮಾನ’ ‘ನಗರದ ಕೆಲ ಪಂಕ್ಚರ್ ಅಂಗಡಿಯವರು ಮೊಳೆ ಎಸೆಯುತ್ತಿರುವ ಅನುಮಾನವಿದೆ. ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಪುರಾವೆ ಇಲ್ಲವೆಂದು ಸುಮ್ಮನಾಗುತ್ತಿದ್ದಾರೆ’ ಎಂದು ಚಾಲಕ ವಿಶಾಲ್‌ಕುಮಾರ್ ಹೇಳಿದರು. ‘ಕಾರು ಎಲ್ಲಿ ಪಂಕ್ಚರ್ ಆಗುತ್ತದೆಯೋ ಆ ಸ್ಥಳದ ಸಮೀಪದಲ್ಲಿಯೇ ಪಂಕ್ಚರ್ ಅಂಗಡಿ ಇರುತ್ತದೆ. ಅನಿವಾರ್ಯವಾಗಿ ಅದೇ ಅಂಗಡಿಗೆ ಹೋಗಿ ಪಂಕ್ಚರ್ ತಿದ್ದಿಸುತ್ತೇವೆ. ಅದೇ ಅಂಗಡಿಯವರ ಮೇಲೆ ಹೆಚ್ಚು ಅನುಮಾನ’ ಎಂದು ತಿಳಿಸಿದರು. ‘ತನಿಖೆಗೆ ಒತ್ತಾಯ’ ‘ಮೊಳೆ ಮುಂದಿಟ್ಟುಕೊಂಡು ಮೂಲಕ ಹಣ ಮಾಡುತ್ತಿರುವವರ ಪತ್ತೆ ಮಾಡಬೇಕು. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲ ರಸ್ತೆಗಳಲ್ಲಿ ಮೊಳೆಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಬೇಕು’ ಎಂದು ಬೈಕ್ ಸವಾರ ರವಿಕುಮಾರ್ ಒತ್ತಾಯಿಸಿದರು.
‘ರಸ್ತೆಯಲ್ಲಿ ಸಿಕ್ಕ ಮೊಳೆ ಕಾಂಪೌಂಡ್‌ಗೆ ಬಳಕೆ’ ಬೆಂಗಳೂರಿನಲ್ಲಿ ಹೆಚ್ಚಾಗಿದ್ದ ಪಂಕ್ಚರ್ ಮಾಫಿಯಾ ವಿರುದ್ಧ 2014ರಿಂದ 2016ರವರೆಗೆ ಅಭಿಯಾನ ಆರಂಭಿಸಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಬೆನಡಿಕ್ಟ್ ಜೆಬಕುಮಾರ್ 75 ಕೆ.ಜಿ ಮೊಳೆಗಳನ್ನು ಸಂಗ್ರಹಿಸಿದ್ದರು. ಬೆಂಗಳೂರು ತೊರೆದು ತಮ್ಮೂರಿಗೆ ಹೋಗಿದ್ದು ಮನೆಯ ಕಾಂಪೌಂಡ್‌ಗೆ ರಕ್ಷಣೆಗಾಗಿ ಅದೇ ಮೊಳೆಗಳನ್ನು ಅಳವಡಿಸಿದ್ದಾರೆ. ನಗರದ ಹೊರವರ್ತುಲ ರಸ್ತೆಯ ಕಂಪನಿಯಿಂದರಲ್ಲಿ ಕೆಲಸ ಮಾಡುತ್ತಿದ್ದ ಬೆನಡಿಕ್ಟ್ ನಿತ್ಯವೂ ಸೈಕಲ್‌ನಲ್ಲಿ ಕಚೇರಿಗೆ ಹೋಗಿ ಬರುತ್ತಿದ್ದರು. ಸೈಕಲ್‌ಗೆ 5 ಅಡಿ ಉದ್ದದ ಆಯಸ್ಕಾಂತ ಕೋಲು ಕಟ್ಟಿದ್ದರು. ಮೊಳೆ ಆಯಸ್ಕಾಂತಗೆ ಅಂಟಿಕೊಳ್ಳುತ್ತಿದ್ದವು. ಇದೇ ರೀತಿಯಲ್ಲಿ ಬೆನಡಿಕ್ಟ್ 75 ಕೆ.ಜಿ ಮೊಳೆ ಸಂಗ್ರಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.