ಬೆಂಗಳೂರು: ನಗರದ 6 ರೌಡಿಗಳ ಬಳಿ ಪರವಾನಗಿ ಬಂದೂಕು ಇರುವುದು ಪತ್ತೆಯಾಗಿದ್ದು, ಕೆಲ ಪೊಲೀಸರು ಅಕ್ರಮವಾಗಿ ಪರವಾನಗಿ ನೀಡಿರುವ ಆರೋಪ ವ್ಯಕ್ತವಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ಠಾಣೆಗಳಲ್ಲಿ ಠೇವಣಿ ಇರಿಸಲಾಗುತ್ತಿದೆ. ಪರವಾನಗಿದಾರರು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ತಮ್ಮ ಶಸ್ತಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ.
‘ರೌಡಿ ಪಟ್ಟಿಯಲ್ಲಿ ಹೆಸರಿರುವ ಆರು ಮಂದಿ, ತಮ್ಮ ಬಂದೂಕುಗಳನ್ನು ಠಾಣೆಗೆ ನೀಡಿದ್ದಾರೆ. ರೌಡಿಗಳಿಗೆ ಪರವಾನಗಿ ನೀಡಲು ಅವಕಾಶವಿಲ್ಲ. ಅಷ್ಟಾದರೂ ರೌಡಿಗಳು ಅಕ್ರಮವಾಗಿ ಪರವಾನಗಿ ಪಡೆದಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ರೌಡಿಗಳಿಗೆ ಪರವಾನಗಿ ನೀಡಿರುವುದಕ್ಕೆ ಕಮಿಷನರ್ ಸಹ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನಿಖೆ ನಡೆಸಿ ವರದಿ ನೀಡುವಂತೆಯೂ ಸೂಚಿಸಿದ್ದಾರೆ. ರೌಡಿಗಳು ಹೇಗೆ ಅರ್ಜಿ ಸಲ್ಲಿಸಿದರು ? ಅವರಿಗೆ ಪರವಾನಗಿ ಮಂಜೂರು ಮಾಡಿದವರು ಯಾರು ? ಪರಿಶೀಲನಾ ಪ್ರಮಾಣ ಪತ್ರ ನೀಡಿದವರು ಯಾರು ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಮೂಲಗಳು ತಿಳಿಸಿವೆ.
439 ರೌಡಿ ಮನೆಗಳ ಮೇಲೆ ದಾಳಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡಿರುವ ಪೊಲೀಸರು, ನಗರದ 439 ರೌಡಿ ಮನೆಗಳ ಮೇಲೆ ಶನಿವಾರ ನಸುಕಿನಲ್ಲಿ ದಾಳಿ ಮಾಡಿದರು.
‘ಪಶ್ಚಿಮ ವಿಭಾಗ ವ್ಯಾಪ್ತಿಯ 326 ಹಾಗೂ ಕೇಂದ್ರ ವಿಭಾಗ ವ್ಯಾಪ್ತಿಯ 113 ರೌಡಿಗಳ ಮನೆಗಳ ಮೇಲೆ ದಾಳಿ ಮಾಡಲಾಯಿತು. ಮನೆಯಲ್ಲೆಲ್ಲ ಶೋಧ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.
‘ದಾಳಿ ಸಂದರ್ಭದಲ್ಲಿ ಹಲವು ರೌಡಿಗಳು ಮನೆಯಲ್ಲಿದ್ದರು. ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಅವರಿಗೂ ಎಚ್ಚರಿಕೆ ನೀಡಲಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.