ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ 68 ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಕೆಲ ಮಾಹಿತಿ ಕೋರಿ ಸಿಬಿಐ ಹಾಗೂ ಇಂಟರ್‌ಪೋಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್, ‘ಬಾಂಬ್ ಬೆದರಿಕೆ ಇ–ಮೇಲ್ ಸಂಬಂಧ ಒಟ್ಟು 27 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಗೆ ಅಗತ್ಯವಿರುವ ಮಾಹಿತಿ ಕೋರಿ ಇಂಟರ್‌ಪೋಲ್ ಹಾಗೂ ಸಿಬಿಐಗೆ ಪತ್ರ ಬರೆಯಲಾಗಿದೆ’ ಎಂದರು.
‘2022ರ ಏಪ್ರಿಲ್ 8ರಂದು ನಗರದ 16 ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿತ್ತು. ಈ ಪ್ರಕರಣಗಳಿಗೂ ಇದೀಗ ಬೆದರಿಕೆ ಬಂದಿರುವ ಇ–ಮೇಲ್‌ಗಳಿಗೂ ಹೋಲಿಕೆ ಕಂಡುಬರುತ್ತಿದೆ. ಇದೇ ಮಾದರಿಯಲ್ಲಿ ಅಮೆರಿಕ, ಜರ್ಮನಿ, ಮಲೇಷ್ಯಾ ಶಾಲೆಗಳಿಗೂ ಬೆದರಿಕೆ ಬಂದಿರುವುದು ಗೊತ್ತಾಗಿದೆ’ ಎಂದು ಹೇಳಿದರು.
‘ಬೆದರಿಕೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆ ಅಗತ್ಯವಿದೆ. ಕೆಲವೇ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಸಿಬಿಐ ಹೇಳಿದೆ. ಮಾಹಿತಿ ಬಂದ ಕೂಡಲೇ ತನಿಖೆ ಮತ್ತಷ್ಟು ಚುರುಕುಗೊಳಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.