ADVERTISEMENT

ನಿವೇಶನದ ನಕಲಿ ದಾಖಲೆ ಸೃಷ್ಟಿಸಿ ₹1 ಕೋಟಿ ಸಾಲ

ಆರೋಪಿ ಬಂಧಿಸಿದ ಜೆ.ಪಿ.ನಗರ ಠಾಣೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 15:52 IST
Last Updated 13 ಜನವರಿ 2024, 15:52 IST
ರಾಮಕೃಷ್ಣ ರೆಡ್ಡಿ
ರಾಮಕೃಷ್ಣ ರೆಡ್ಡಿ   

ಬೆಂಗಳೂರು: ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ಕ್ರಯಪತ್ರ ಮಾಡಿಕೊಟ್ಟು ಬ್ಯಾಂಕ್‌ನಿಂದ ₹ 1 ಕೋಟಿ ಸಾಲ ಪಡೆದಿದ್ದ ಪ್ರಕರಣದಲ್ಲಿ ಆರೋಪಿಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದ ಟಿ.ವಿ.ರಾಮಕೃಷ್ಣರೆಡ್ಡಿ ಬಂಧಿತ ಆರೋಪಿ. ಬನಶಂಕರಿ 2ನೇ ಹಂತದ ಟೀಚರ್ಸ್ ಕಾಲೊನಿಯ ಬಿ.ಪಿ. ಮೋಹನ್‌ ಚಂದ್‌ ಅವರು ನೀಡಿದ ದೂರು ಆಧರಿಸಿ ಆರೋಪಿ ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನಲ್ಲಿದ್ದಾರೆ ಎಂದು ಪೊಲೀಸರು ಹೇಳಿದರು.

‘2012ರಲ್ಲಿ ಎಸ್‌.ಕೆ.ರಮೇಶ್‌ ಎಂಬುವರ ಹೌಸ್‌ ಬಿಲ್ಡಿಂಗ್‌ ಕೋ–ಆಪರೇಟಿವ್‌ ಸೊಸೈಟಿ ಅಡಿ ಸಾರಕ್ಕಿ ಸರ್ವೆ ನಂ. 68ರಲ್ಲಿ ಅಭಿವೃದ್ಧಿಪಡಿಸಿದ್ದ ನಿವೇಶನಗಳ ಪೈಕಿ 23X40 ಅಡಿ ವಿಸ್ತೀರ್ಣದ ನಿವೇಶನ ಖರೀದಿಸಿದ್ದು, ನೋಂದಣಿ ಸಹ ಆಗಿತ್ತು. ಅದಾದ ಮೇಲೆ ರಾಮಕೃಷ್ಣರೆಡ್ಡಿ ಎಂಬಾತ ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೆ ಶಾಮೀಲಾಗಿ, ತನ್ನ ಹೆಸರಿಗೆ ನಿವೇಶನದ ಕ್ರಯಪತ್ರ ಸೃಷ್ಟಿಸಿಕೊಂಡಿದ್ದ. ಈ ಬಗ್ಗೆ ನೋಂದಣಿ ಇಲಾಖೆಯ ಜಂಟಿ ಆಯುಕ್ತರಿಗೆ ದೂರು ನೀಡಿದ್ದೆವು’ ಎಂದು ದೂರುದಾರರು ತಿಳಿಸಿದ್ದಾರೆ.

ADVERTISEMENT

ಜಂಟಿ ಆಯುಕ್ತರು ವಿಚಾರಣೆ ನಡೆಸಿ, 2013ರ ನವೆಂಬರ್‌ 26ರಂದು ರಾಮಕೃಷ್ಣರೆಡ್ಡಿ ಹೆಸರಿನಲ್ಲಿದ್ದ ಖಾತೆ ವಜಾಗಳಿಸಿದ್ದರು. ನಂತರ ನನ್ನ ಹಾಗೂ ಪತ್ನಿ ಹೆಸರಿಗೆ ಖಾತೆ ಮಾಡಿಸಿಕೊಂಡು ಆ ಜಾಗದಲ್ಲಿ ಮಳಿಗೆ ನಿರ್ಮಿಸಿದ್ದೆವು. ಕಂದಾಯ ಪಾವತಿಸುತ್ತಿದ್ದೇವೆ. ಕಟ್ಟಡದ ಮೇಲೆ ಸಾರಕ್ಕಿ ಕೆನರಾ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದು, ಮೂಲ ದಾಖಲೆಗಳು ಬ್ಯಾಂಕ್‌ನಲ್ಲಿವೆ ಎಂದು ವಿವರಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ನಿವೇಶನದ ದಾಖಲೆ ಪರಿಶೀಲನೆ ವೇಳೆ ಆರೋಪಿ ರಾಮಕೃಷ್ಣ ನಕಲಿ ದಾಖಲೆ ಸೃಷ್ಟಿಸಿಕೊಂಡು ಫಲಕೃತ ಪ್ರದೀಪ್‌ಕುಮಾರ್ ಅವರಿಗೆ 2023ರ ಮೇ 17ರಂದು ₹75 ಲಕ್ಷಕ್ಕೆ ಕ್ರಯಪತ್ರ ಮಾಡಿಸಿಕೊಟ್ಟು ಎಂ.ಜಿ.ರಸ್ತೆಯ ಡಿಸಿಬಿ ಬ್ಯಾಂಕ್‌ನಲ್ಲಿ ₹1 ಕೋಟಿ ಸಾಲ ಪಡೆದುಕೊಂಡಿದ್ದ. ಈ ಕೃತ್ಯಕ್ಕೆ ಶಾಮೀಲಾಗಿರುವ ನೋಂದಣಿ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ಫಲಕೃತ ಪ್ರದೀಪ್‌ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.