ADVERTISEMENT

ಜನಪ್ರತಿನಿಧಿಗಳ ನಿರ್ಲಕ್ಷ್ಕದಿಂದ ಕುಂಟುತ್ತಿರುವ ಉಪನಗರ ರೈಲು ಯೋಜನೆ

ಬಾಲಕೃಷ್ಣ ಪಿ.ಎಚ್‌
Published 1 ಏಪ್ರಿಲ್ 2024, 23:43 IST
Last Updated 1 ಏಪ್ರಿಲ್ 2024, 23:43 IST
ಉಪನಗರ ರೈಲು
ಉಪನಗರ ರೈಲು   

ಬೆಂಗಳೂರು: ‘ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು’ ಎನ್ನುವಂತೆ ಕೇಂದ್ರ, ರಾಜ್ಯ ಸರ್ಕಾರಗಳ ಹೊಯ್ದಾಟದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕುಂಟುತ್ತಾ ಸಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯೋಜನೆ ನಲುಗುತ್ತಿದೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಉಪನಗರ ರೈಲು ಯೋಜನೆಯ ನಾಲ್ಕು ಕಾರಿಡಾರ್‌ಗಳಿಗೆ ‘ಸಂಪಿಗೆ‘, ‘ಮಲ್ಲಿಗೆ‘, ‘ಪಾರಿಜಾತ’ ಮತ್ತು ‘ಕನಕ‘ ಎಂದು ಹೂವುಗಳ ಹೆಸರು ಇಟ್ಟಿದ್ದರೂ ಕಾಮಗಾರಿ ಮಾತ್ರ ಹೂವು ಎತ್ತಿದಷ್ಟು ಹಗುರವಾಗಿ ಸಾಗುತ್ತಿಲ್ಲ.

2018ರಲ್ಲಿ ಬಿಎಸ್‌ಆರ್‌ಪಿ ಘೋಷಣೆಯಾಯಿತು. 2020ಕ್ಕೆ ಮಂಜೂರಾಯಿತು. ಕೋವಿಡ್‌ ಮತ್ತಿತರ ಕಾರಣಗಳಿಂದ ಎರಡು ವರ್ಷ ಕಾಮಗಾರಿ ನಡೆಯಲಿಲ್ಲ. 2022ರಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರಮೋದಿ 2025ಕ್ಕೆ ಪೂರ್ಣಗೊಳಿಸಲು ಗಡುವು ನೀಡಿದ್ದರು. ಬಳಿಕ ಮಂಜೂರಾತಿ ಪತ್ರದಲ್ಲಿ 2026ಕ್ಕೆ ಗಡುವು ವಿಸ್ತರಿಸಿತು. ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ 2027ಕ್ಕೆ ಕಾಮಗಾರಿಗಳು ಮುಗಿಯುವುದಾಗಿ ಹೇಳಿದ್ದರು. ಹೀಗೆ ಗಡುವುಗಳು ಮುಂದಕ್ಕೆ ಹೋಗುತ್ತಿವೆಯೇ ಹೊರತು ಕಾರಿಡಾರ್‌ಗಳು ಮಾತ್ರ ಸಿದ್ಧಗೊಳ್ಳುತ್ತಿಲ್ಲ.

ADVERTISEMENT

ಸರ್ಕಾರಗಳ ಹೊಯ್ದಾಟ: ಹೀಲಲಿಗೆಯಿಂದ ರಾಜಾನುಕುಂಟೆ ಮಾರ್ಗದ (ಕನಕ ಮಾರ್ಗ) ಕಾರಿಡಾರ್‌–4 ನಿರ್ಮಾಣಕ್ಕಾಗಿ 193 ಎಕರೆ ಜಮೀನನ್ನು ನೈರುತ್ಯ ರೈಲ್ವೆಯು ಕರ್ನಾಟಕ ರೈಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್ ಕಂಪನಿಗೆ (ಕೆ–ರೈಡ್‌) ಹಸ್ತಾಂತರ ಮಾಡಬೇಕಿತ್ತು. ಉಳಿದ 34 ಎಕರೆಯನ್ನು ಖಾಸಗಿಯವರಿಂದ ಸ್ವಾಧೀನಪಡಿಸಿಕೊಳ್ಳಬೇಕಿತ್ತು. ರೈಲ್ವೆಯಿಂದ ಜಮೀನು ಹಸ್ತಾಂತರವಾಗದ ಕಾರಣ ಟೆಂಡರ್‌ ವಿಳಂಬವಾಗಿತ್ತು. ಷರತ್ತಿನ ಪ್ರಕಾರ 2023ರ ಡಿಸೆಂಬರ್‌ ಅಂತ್ಯದೊಳಗೆ ಟೆಂಡರ್‌ ಕರೆಯಬೇಕಿತ್ತು. ಈ ಬಗ್ಗೆ ರೈಲ್ವೆ ಅಧಿಕಾರಿಗಳೂ ಸ್ಪಂದಿಸಲಿಲ್ಲ. ಸಂಸದರೂ ಒತ್ತಡ ಹಾಕಲಿಲ್ಲ. ಕೊನೆಗೆ ‘ಶೀಘ್ರ ಜಮೀನು ಹಸ್ತಾಂತರಿಸಲಾಗುವುದು‘ ಎಂಬ ಭರವಸೆಯ ಆಧಾರದಲ್ಲಿ ಡಿಸೆಂಬರ್‌ ಒಳಗೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಆದರೆ, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.

ಇತ್ತ ರಾಜ್ಯ ಸರ್ಕಾರ ಕೂಡ, ಕಾಮಗಾರಿ ವಿಳಂಬಕ್ಕೆ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಕಾರಣ ಎಂದು ಬೊಟ್ಟು ಮಾಡಿ ಸುಮ್ಮನಾಗಿದೆ. 34 ಎಕರೆ ಜಮೀನನ್ನು ಖಾಸಗಿಯವರಿಂದ ಸ್ವಾಧೀನಪಡಿಸಿಕೊಂಡು ಕೆ–ರೈಡ್‌ಗೆ ನೀಡಬೇಕಿದ್ದು, ಈ ಬಗ್ಗೆ ಶಾಸಕರಾಗಲಿ, ಸಚಿವರಾಗಲಿ ಮಾತನಾಡುತ್ತಿಲ್ಲ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಬೆಂಗಳೂರಿನ ವಾಹನದಟ್ಟಣೆ ಕಡಿಮೆ ಮಾಡುವ ಈ ಯೋಜನೆಯು ಪ‍್ರಮುಖವಾಗಿ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿದೆ. ಈ ಮೂರೂ ಕ್ಷೇತ್ರಗಳ ಸಂಸದರು, ಶಾಸಕರು ಬಿಎಸ್‌ಆರ್‌ಪಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಸಾಲು ಬರೆದು ‘ಮೈಲೇಜ್‌’ ತೆಗೆದುಕೊಳ್ಳುವುದು ಬಿಟ್ಟರೆ ಅತ್ತ ಗಮನಹರಿಸಿದ್ದು ಕಡಿಮೆ. ಕೇಂದ್ರ ರೈಲ್ವೆ ಸಚಿವರು ವಹಿಸಿದಷ್ಟು ಮುತುವರ್ಜಿಯನ್ನೂ ಸ್ಥಳೀಯ ಸಂಸದರು ವಹಿಸಿಲ್ಲ ಎಂಬುದು ರೈಲ್ವೆ ಹೋರಾಟಗಾರರ ಆರೋಪ.

ಉಪ ನಗರ ರೈಲು ಯೋಜನೆಯಲ್ಲಿರುವ ನಾಲ್ಕು ಕಾರಿಡಾರ್‌ಗಳಲ್ಲಿ ‘ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಮಾರ್ಗದ(ಮಲ್ಲಿಗೆ) 2ನೇ ಕಾರಿಡಾರ್‌ ಕಾಮಗಾರಿಯನ್ನು ಕೆ–ರೈಡ್‌ ಮೊದಲು ಕೈಗೆತ್ತಿಕೊಂಡಿತು. ಸದ್ಯಕ್ಕೆ ಇದೊಂದೇ ಕಾಮಗಾರಿ ಪ್ರಗತಿಯಲ್ಲಿರುವುದು. ಬೆಂಗಳೂರು ನಗರ– ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕಾರಿಡಾರ್‌–1 (ಸಂಪಿಗೆ ಮಾರ್ಗ), ಕೆಂಗೇರಿ–ವೈಟ್‌ಫೀಲ್ಡ್ ಸಂಪರ್ಕದ ಕಾರಿಡಾರ್‌–3 (ಪಾರಿಜಾತ) ಕಾಮಗಾರಿ ಟೆಂಡರ್‌ ಹಂತಕ್ಕೂ ಬಂದಿಲ್ಲ.

ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್‌–2ರ ಕಾಮಗಾರಿ ನಡೆಯುತ್ತಿದೆ.
ಉಪನಗರ ರೈಲು ಯೋಜನೆಯ ನಕ್ಷೆ

ಜನ ಏನಂತಾರೆ?

ಸಂಸದರು ನಿಯಮಿತವಾಗಿ ಪ್ರಗತಿಪರಿಶೀಲನೆ ನಡೆಸಿದ್ದರೆ ಸಮಸ್ಯೆ ಅರ್ಥವಾಗುತ್ತಿತ್ತು. ಕರ್ತವ್ಯ ನಿರ್ವಹಿಸುವುದು ಬಿಟ್ಟು ಹೊರಗೆ ಟೀಕಿಸುತ್ತಾ ರಾಜಕಾರಣ ಮಾಡಿಕೊಂಡು ತಿರುಗಾಡಿದರು. ರಾಜ್ಯ ಸರ್ಕಾರವೂ ಪಟ್ಟು ಹಿಡಿದು ಕೆಲಸ ಮಾಡಿಸಿಲ್ಲ. ಮೂಲಸೌಕರ್ಯ ಅಭಿವೃದ್ಧಿ ಸಚಿವರು ಅಪರೂಪಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಿಟ್ಟರೆ ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಲಿಲ್ಲ. ಜನಪ್ರತಿನಿಧಿಗಳು ಚುರುಕಾದರೆ ಅಧಿಕಾರಿಗಳು ಕೆಲಸ ಮಾಡುತ್ತಾರೆ.
- ಸಂಜೀವ್‌ ದ್ಯಾಮಣ್ಣನವರ್‌, ರೈಲ್ವೆ ಹೋರಾಟಗಾರ
ಬಿಎಸ್‌ಆರ್‌ಪಿಯನ್ನು ಕೆ–ರೈಡ್‌ಗೆ ಒಪ್ಪಿಸಿದ ಬಳಿಕ ರಾಜ್ಯದಲ್ಲಿ ಮೂರು ವರ್ಷ ಬಿಜೆಪಿ ಆಡಳಿತವಿತ್ತು. ಆಗ ಯಾವುದೇ ಪ್ರಗತಿ ಕಂಡಿರಲಿಲ್ಲ. ಕೇಂದ್ರ ರೈಲ್ವೆ ಸಚಿವರ ಮುತುವರ್ಜಿಯಿಂದಾಗಿ ಕಾಮಗಾರಿಗೆ ಚಾಲನೆ ಸಿಕ್ಕಿತು. ನಿಧಾನವಾಗಿಯಾದರೂ ಕಾಮಗಾರಿ ಸಾಗುತ್ತಿದೆ. ಈ ಹಂತದಲ್ಲಿ ಕೆ–ರೈಡ್‌ ತಾಂತ್ರಿಕವಾಗಿ ಗಟ್ಟಿ ಇಲ್ಲ ಎಂದು ಸಂಸದರೊಬ್ಬರು ಹೇಳುತ್ತಾ ಕಾಮಗಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ತಾಂತ್ರಿಕ ನಿಪುಣರ ಕೊರತೆ ಇದ್ದರೆ ಅದನ್ನು ನೀಗಿಸಬೇಕಿರುವುದು ಸಂಸದರ ಕರ್ತವ್ಯ. ನಗರದ ಮೂವರು ಸಂಸದರೂ ಬಿಎಸ್‌ಆರ್‌ಪಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.
- ರಾಜಕುಮಾರ್ ದುಗಾರ್‌, ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಸ್ಥಾಪಕ
ಕೆ–ರೈಡ್‌ ಮತ್ತು ರೈಲ್ವೆ ನಡುವೆ ಸಂವಹನದ ಕೊರತೆಯಿದೆ. ರೈಲ್ವೆ ಇಲಾಖೆಯೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆ–ರೈಡ್‌ಗೆ ಕಾಯಂ ಎಂ.ಡಿ. ಕೂಡ ಇಲ್ಲ. ಒಂದೊಂದು ಸಹಿಗೂ ಕಡತ ಹಿಡಿದು ಅಲೆದಾಡಬೇಕು. ₹15 ಸಾವಿರ ಕೋಟಿಯ ಯೋಜನೆಯೊಂದು ಈ ಮಟ್ಟಿಗೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ ಎಂದರೆ ಅದಕ್ಕೆ ಕೇಂದ್ರ ರಾಜ್ಯದ ಜನಪ್ರತಿನಿಧಿಗಳೇ ನೇರ ಹೊಣೆ.
- ಕೆ.ಎನ್‌. ಕೃಷ್ಣ ಪ್ರಸಾದ್, ರೈಲ್ವೆ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.