ಬೆಂಗಳೂರು: ಉಪನಗರ ರೈಲು ಯೋಜನೆಯ ಕಾರಿಡಾರ್–4 ನಿರ್ಮಾಣ ಕಾಮಗಾರಿಯ ಟೆಂಡರ್ ಎಲ್ ಆ್ಯಂಡ್ ಟಿ ಕಂಪನಿ ಪಡೆದಿದೆ. ₹ 1040.51 ಕೋಟಿಗೆ ಗುತ್ತಿಗೆ ಪಡೆದಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿ ಪಡಿಸಲಾಗಿದೆ.
ಹೀಲಲಿಗೆಯಿಂದ ರಾಜಾನುಕುಂಟೆಗೆ (ಕನಕ ಮಾರ್ಗ) ಸಂಪರ್ಕಿಸುವ ಕಾರಿಡಾರ್–4 48 ಕಿ.ಮೀ. ಉದ್ದವಿದೆ. 8.960 ಕಿ.ಮೀ ಎತ್ತರಿಸಿದ ಮಾರ್ಗ ಹಾಗೂ 37.920 ಕಿ.ಮೀ. (ನಿಲ್ದಾಣ ಕಟ್ಟಡಗಳನ್ನು ಹೊರತುಪಡಿಸಿ) ಸಮತಲ ಮಾರ್ಗಗಳನ್ನು ಒಳಗೊಂಡಿದೆ. ಈ ನಿರ್ಮಾಣ ಕಾಮಗಾರಿಯ ಒಪ್ಪಂದವು ಯಲಹಂಕದ ಬಳಿ ಕಾರಿಡಾರ್-1 ಮತ್ತು ಕಾರಿಡಾರ್-4ಕ್ಕಾಗಿ 1.2 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಜೋಡಣೆಯ ನಿರ್ಮಾಣ ಒಳಗೊಂಡಿದೆ.
ಬೆನ್ನಿಗಾನಗಳ್ಳಿ ಬಳಿ ಬಿಎಂಆರ್‌ಸಿಎಲ್ (ಮೆಟ್ರೊ) ವಯಡಕ್ಟ್ ಕೆಳಗೆ 500 ಮೀಟರ್ ಉದ್ದದ ಬಿಎಸ್‌ಆರ್‌ಪಿ ಎತ್ತರಿಸಿದ ಮಾರ್ಗ ನಿರ್ಮಿಸಲಿದೆ. ಬಿಎಸ್‌ಆರ್‌ಪಿ ಮತ್ತು ಬಿಎಂಆರ್‌ಸಿಎಲ್ ನಡುವೆ ಮಾರ್ಗ ಸಮಾನವಾಗಿ ಹಂಚಿಕೆಯಾಗಲಿದೆ. ಈ ಮಾದರಿಯ ಕಾಮಗಾರಿನಿರ್ಮಾಣವು ದೇಶದಲ್ಲಿಯೇ ಮೊದಲು ಎಂದು ಬಿಎಸ್ಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿಡಾರ್-2 (ಚಿಕ್ಕಬಾಣಾವರ- ಬೈಯಪ್ಪನಹಳ್ಳಿ) ಕಾಮಗಾರಿಯನ್ನು ಕೂಡಾ ಲಾರ್ಸೆನ್ ಆ್ಯಂಡ್ ಟ್ಯೂಬ್ರೊ ಲಿಮಿಟೆಡ್ ಪಡೆದಿತ್ತು. ಈ ಕಾಮಗಾರಿ ಭರದಿಂದ ಸಾಗುತ್ತಿದೆ.
ಒಪ್ಪಂದ: ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತವು (ಕೆ- ರೈಡ್) ಈಗಾಗಲೇ 50 ಕೋಟಿ ಯುರೊ ಸಾಲಕ್ಕೆ ಜರ್ಮನಿಯ ಪ್ರತಿಷ್ಠಿತ ಕೆಎಫ್‌ಡಬ್ಲ್ಯು ಡೆವಲಪ್‌ಮೆಂಟ್ ಬ್ಯಾಂಕ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಮುಂದುವರಿದ ಭಾಗವಾಗಿ, ಯುರೋಪಿಯನ್ ಹೂಡಿಕೆ ಬ್ಯಾಂಕ್‌ನೊಂದಿಗೆ (ಇಐಬಿ) 2024ರ ಮಾರ್ಚ್‌ನಲ್ಲಿ 30 ಕೋಟಿ ಯುರೊ ಸಾಲ ಒಪ್ಪಂದಕ್ಕೆ ಸಹಿ ಮಾಡಲು ತಯಾರಿ ನಡೆಸಲಾಗಿದೆ. ಕಾರಿಡಾರ್ -1 ಮತ್ತು ಕಾರಿಡಾರ್ -3 ಟೆಂಡರ್ ಶೀಘ್ರದಲ್ಲೇ ಆಹ್ವಾನಿಸಲಾಗುವುದು. ಕಾರಿಡಾರ್-4 ಕಾಮಗಾರಿಗಾಗಿ 115 ಎಕರೆ ಭೂಮಿಯನ್ನು ನೈರುತ್ಯ ರೈಲ್ವೆ ಶೀಘ್ರ ಹಸ್ತಾಂತರಿಸಲಿದೆ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.