ಬೆಂಗಳೂರು: ರೈಲ್ವೆಯ ಮಹತ್ವದ ಯೋಜನೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯ ಬೆಂಗಳೂರು ಉಪನಗರ ಯೋಜನೆ, ‘ಪ್ರಭಾರ’ ವ್ಯವಸ್ಥಾಪಕ ನಿರ್ದೇಶಕರಿಂದ ಕುಂಟುತ್ತಿದೆ.
ಈ ಯೋಜನೆ ಜಾರಿಯಾಗಿ 37 ತಿಂಗಳು ಕಳೆದರೂ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಈ ಅವಧಿಯಲ್ಲಿ ಇಬ್ಬರು ಅಧಿಕಾರಿಗಳು ಪ್ರಭಾರವಾಗಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಹೊಂದಿದ್ದರು. ಇದೀಗ ಎನ್. ಮಂಜುಳಾ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಜನದಟ್ಟಣೆ, ವಾಹನದಟ್ಟಣೆಯಿಂದಾಗಿ ಬೆಂಗಳೂರಿನಲ್ಲಿ ಸಂಚಾರವೇ ಪ್ರಯಾಸಕರವಾಗಿರುವುದನ್ನು ತಪ್ಪಿಸಲು, ಉಪನಗರ ರೈಲು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಕೋವಿಡ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹೊಂದಾಣಿಕೆ ಕೊರತೆ ಇನ್ನಿತರ ಕಾರಣಗಳಿಂದ 2 ವರ್ಷ ಕಾಮಗಾರಿ ಆರಂಭವೇ ಆಗಿರಲಿಲ್ಲ. ಕಾರಿಡಾರ್–2 (ಚಿಕ್ಕಬಾಣಾವರ–ಬೈಯಪ್ಪನಹಳ್ಳಿ) 2022ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಯಿತು. ಆದರೆ, ಕಾರಿಡಾರ್–1 (ಬೆಂಗಳೂರು ನಗರ– ದೇವನಹಳ್ಳಿ), ಕಾರಿಡಾರ್–3 (ಹೀಲಲಿಗೆ–ರಾಜಾನುಕುಂಟೆ) ಮತ್ತು ಕಾರಿಡಾರ್–4 (ಕೆಂಗೇರಿ–ವೈಟ್‌ಫೀಲ್ಡ್) ಕಾಮಗಾರಿಗಳಿಗೆ ಇನ್ನೂ ಚಾಲನೆ ದೊರೆತಿಲ್ಲ.
ಆರಂಭದಲ್ಲಿ ರೈಲ್ವೆಯವರೇ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರು (ಎಂ.ಡಿ) ಇದ್ದರು. ಕಾಮಗಾರಿ ಆರಂಭವಾಗುವ ಹೊತ್ತಿಗೆ ಅವರು ವರ್ಗಾವಣೆಯಾದರು. ಆ ಜಾಗಕ್ಕೆ ಹೆಚ್ಚುವರಿಯಾಗಿ ಎರಡು–ಮೂರು ಹುದ್ದೆಗಳನ್ನು ನಿರ್ವಹಿಸುತ್ತಿದ್ದ ಗೌರವ್ ಗುಪ್ತ ಅವರಿಗೆ ಎಂ.ಡಿ ಹುದ್ದೆಯ ಜವಾಬ್ದಾರಿಯನ್ನೂ ನೀಡಲಾಯಿತು. ತಾಂತ್ರಿಕತೆಯ ಬಗ್ಗೆ ಅವರಿಗೆ ಗೊತ್ತಿದ್ದರಿಂದ ಉತ್ತಮವಾಗಿಯೇ ನಿರ್ವಹಣೆ ಮಾಡಿದರು. ಆದರೆ, ಬೇರೆ ಹೊಣೆಗಾರಿಕೆಗಳ ಕಡೆಯೂ ಗಮನ ಹರಿಸಬೇಕಿದ್ದರಿಂದ ಇಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗಿಲ್ಲ. ಈಗ ಅವರಿಗೂ ವರ್ಗಾವಣೆಯಾಗಿದೆ.
‘ವ್ಯವಸ್ಥಾಪಕ ನಿರ್ದೇಶಕರ ಒಂದು ಸಹಿ ಬೇಕಿದ್ದರೂ ವಿಕಾಸಸೌಧಕ್ಕೆ ಹೋಗಿ ಕಾಯಬೇಕು. ಇದರಲ್ಲೇ ಸಮಯ ವ್ಯರ್ಥವಾಗುತ್ತಿದೆ. ನಾಲ್ಕು ಕಾರಿಡಾರ್‌ಗಳಲ್ಲಿ ಮೂರು ಕಾರಿಡಾರ್‌ಗಳ ಕೆಲಸ ಶುರುವಾಗಿಲ್ಲ. ವ್ಯವಸ್ಥಾಪಕ ನಿರ್ದೇಶಕರು ದೆಹಲಿ–ಬೆಂಗಳೂರಿಗೆ ಆಗಾಗ್ಗೆ ನಡೆಯುವ ಮೀಟಿಂಗ್‌ಗಳಲ್ಲಿ ಭಾಗವಹಿಸಬೇಕು. ಹೆಚ್ಚುವರಿಯಾಗಿ ಹೊಣೆ ಹೊತ್ತರವರಿಗೆ ಅಷ್ಟು ಸಮಯ ಸಿಗುವುದಿಲ್ಲ. ಅದಕ್ಕಾಗಿ ಪೂರ್ಣ ಪ್ರಮಾಣದ ಎಂ.ಡಿ ಬೇಕು’ ಎಂದು ಕೆ–ರೈಡ್‌ನ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.