ADVERTISEMENT

Bengaluru Tech Summit | ಸಣ್ಣ ಉದ್ಯಮಕ್ಕೂ ರಕ್ಷಣಾ ಸಾಮಗ್ರಿ ತಯಾರಿಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 19:06 IST
Last Updated 30 ನವೆಂಬರ್ 2023, 19:06 IST
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಉದ್ಯಮಿ ಶೈಲೇಶ್‌ ಅವರು ಯುದ್ಧ ವಿಮಾನಕ್ಕೆ ಅಳವಡಿಸುವ ಎಲೆಕ್ಟ್ರಾನಿಕ್‌ ಸಾಧನ ಪ್ರದರ್ಶಿಸಿದರು–ಪ್ರಜಾವಾಣಿ ಚಿತ್ರ
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಉದ್ಯಮಿ ಶೈಲೇಶ್‌ ಅವರು ಯುದ್ಧ ವಿಮಾನಕ್ಕೆ ಅಳವಡಿಸುವ ಎಲೆಕ್ಟ್ರಾನಿಕ್‌ ಸಾಧನ ಪ್ರದರ್ಶಿಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಕ್ಷಣಾ ಸಾಮಗ್ರಿಗಳ ಬಿಡಿಭಾಗ ತಯಾರಿಕೆಗೆ ಸಣ್ಣ ಖಾಸಗಿ ಉದ್ಯಮಗಳಿಗೂ ಅವಕಾಶ ದೊರಕಿರುವುದು ರಕ್ಷಣಾ ಕ್ಷೇತ್ರದಲ್ಲಿನ ಭಾರತದ ಸ್ವಾವಲಂಬನೆಯಲ್ಲಿ ಮಹತ್ವದ ಹೆಜ್ಜೆ’.

–ಇದು ಬೆಂಗಳೂರು ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ರಕ್ಷಣಾ ಸಾಮಗ್ರಿಗಳ ಬಿಡಿಭಾಗಗಳನ್ನು ಪ್ರದರ್ಶನಕ್ಕಿಟ್ಟಿರುವ ಬೆಳಗಾವಿಯ ಉದ್ಯಮಿ ಶೈಲೇಶ್‌ ಅವರ ವಿವರಣೆ.

ಸ್ವದೇಶಿ ಉತ್ಪಾದನೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಿದ ನಂತರ ರಕ್ಷಣಾ ಸಾಮಗ್ರಿಗಳ ಬಿಡಿಭಾಗಗಳನ್ನು ತಯಾರಿಸಲು ಭಾರತೀಯ ಖಾಸಗಿ ಕಂಪನಿಗಳಿಗೂ ದೊಡ್ಡ ಪ್ರಮಾಣದಲ್ಲಿ ಅವಕಾಶಗಳು ದೊರೆಯುತ್ತಿವೆ. ಎನ್‌.ಕೆ.ಶೆಟ್ಟಿ ಅವರ ಸಹಭಾಗಿತ್ವದಲ್ಲಿ ಸಣ್ಣದಾಗಿ ಆರಂಭಿಸಿದ ಇಎಂ ಎಲೆಕ್ಟ್ರಾನಿಕ್ಸ್‌  ಲಿಮಿಟೆಡ್‌ ಇಂದು ದೊಡ್ಡ ಅವಕಾಶಗಳನ್ನು ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ADVERTISEMENT

‘ಯುದ್ಧ ವಿಮಾನಗಳಿಗೆ ಅಳವಡಿಸುವ ಎಲೆಕ್ಟ್ರಾನಿಕ್ಸ್‌ ಸಾಮಗ್ರಿಗಳು ಸೇರಿದಂತೆ ವರ್ಷಕ್ಕೆ ಸುಮಾರು 6 ಸಾವಿರ ಬಿಡಿಭಾಗಗಳನ್ನು ಉತ್ಪಾದಿಸುತ್ತಿದ್ದೇವೆ. ಯುದ್ಧ ವಿಮಾನಗಳು ರಸ್ತೆ ಹೊರತಾದ ಭಾಗಗಳಲ್ಲೂ ಇಳಿಯುವುದರಿಂದ ವಿಭಿನ್ನವಾದ ಬಿಡಿ ಭಾಗಗಳನ್ನು ಬಳಸಲಾಗುತ್ತದೆ. ಅಂತಹ ಸಾಮಗ್ರಿಗಳನ್ನು ಉತ್ಪಾದಿಸುವ ಅವಕಾಶ ಈಚಿನ ದಿನಗಳಲ್ಲಿ ಸಣ್ಣ ಕಂಪನಿಗಳಿಗೂ ದೊರಕುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಯುದ್ಧಾಸ್ತ್ರಗಳ ವೀಕ್ಷಿಸಲು ಮುಗಿಬಿದ್ದ ವಿದ್ಯಾರ್ಥಿಗಳು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರದರ್ಶನ ಮಳಿಗೆಗಳ ಮುಂದೆ ವಿದ್ಯಾರ್ಥಿಗಳ ದಟ್ಟಣೆ ಇತ್ತು.  ಕ್ಷಿಪಣಿಗಳು, ಕ್ಷಿಪಣಿ ನಾಶಕಗಳು, ವಿವಿಧ ಮಾದರಿಯ ಯುದ್ಧ ವಿಮಾನಗಳು, ಜಲಾಂರ್ಗಾಮಿಗಳ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ವಿದ್ಯಾರ್ಥಿಗಳಿಗೆ ಹಾಗೂ ಯುವ ಜನರಿಗೆ ಸೈಬರ್‌ ಅಪರಾಧ ತಡೆಯಲು ಹಾಗೂ ವಂಚನೆಗೆ ಒಳಗಾದ ತಕ್ಷಣ ಅನುಸರಿಸಬೇಕಾದ ವಿಧಾನ, ಹೈಟೆಕ್‌ ತಂತ್ರಜ್ಞಾನ ಬಳಸಿ ವಂಚನೆ ಜಾಲ ಭೇದಿಸುವ ಕ್ರಮಗಳ ಕುರಿತು ಐಎಸ್‌ಎಸಿ ಕಂಪನಿ ಮಾಹಿತಿ ಕೋಶ ತೆರೆದಿದೆ. ಈ ಬಾರಿಯ ಸಮ್ಮೇಳನದಲ್ಲಿ ಸೇವಾವಲಯದ ಮಳಿಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.