ಬೆಂಗಳೂರು: ಚಂದ್ರಯಾನ–3ರ ಯಶಸ್ಸು ಇಡೀ ಜಗತ್ತನ್ನೇ ಭಾರತದತ್ತ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯತ್ತ(ಇಸ್ರೊ) ಕುತೂಹಲದಿಂದ ನೋಡುವಂತೆ ಮಾಡಿದೆ. ಈ ಯೋಜನೆ ಕುರಿತ ಸಂಪೂರ್ಣ ಮಾಹಿತಿಗಾಗಿ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಪ್ರತ್ಯೇಕ ಆವರಣವನ್ನೇ ತೆರೆಯಲಾಗಿದೆ.
ಗೋಲಾಕಾರದ ಟೆಂಟ್‌ನೊಳಗೆ ಬಾಹ್ಯಾಕಾಶದ ಪ್ರತಿಕೃತಿ ಸಿದ್ಧಪಡಿಸಲಾಗಿದೆ. ಅದರೊಳಗೆ ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್‌ನ ನೈಜ ಗಾತ್ರದ ಪ್ರತಿಕೃತಿಗಳನ್ನು ಇಡಲಾಗಿದೆ. ಚಂದ್ರನ ಮೇಲೆ ಆ.23 ರಂದು ಸುರಕ್ಷಿತವಾಗಿ ಇಳಿದ ವಿಕ್ರಂ ಲ್ಯಾಂಡರ್‌ನ ಚಿತ್ರಣವೇ ಇಲ್ಲಿ ಕಣ್ಣಮುಂದೆ ಬಂದು ನಿಲ್ಲುವಂತಿದೆ. ಲ್ಯಾಂಡರ್‌ನಿಂದ ರ‍್ಯಾಂಪ್ ಮೂಲಕ ಹೊರಬಂದ ರೋವರ್‌ನ ಚಿತ್ರಣವೂ ಇಲ್ಲಿ ಕಾಣಸಿಗಲಿದೆ.
ಚಂದ್ರಯಾನ ಯೋಜನೆ ಕುರಿತು ಇಸ್ರೊ ತಂತ್ರಜ್ಞರು ಮಾಹಿತಿ ನೀಡುತ್ತಾರೆ. ಜತೆಗೆ ಚಂದ್ರಯಾನ ಯೋಜನೆಯ ಪ್ರತಿ ಹಂತದ ಚಿತ್ರಗಳು, ಅದರ ಮಾಹಿತಿಗಳ ಭಿತ್ತಿಪತ್ರಗಳನ್ನೂ ಪ್ರದರ್ಶಿಸಲಾಗಿದೆ. ಜತೆಗೆ, ಇಸ್ರೊ ಯೋಜನೆಗಳಲ್ಲಿ ಬಳಸುವ ಪ್ರಮುಖ ರಾಕೆಟ್‌ಗಳ ಪ್ರತಿಕೃತಿಗಳೂ ಇವೆ.
ಇವೆಲ್ಲದರ ಜೊತೆಗೆ, ವಿದ್ಯಾರ್ಥಿ ಸಮುದಾಯವನ್ನು ಆಕರ್ಷಿಸುತ್ತಿರುವುದು, ‘ತಾರೇ ಜಮೀನ್ ಪರ್’ ಎಂಬ ತಾರಾಲಯ. ಇದರೊಳಗೆ ಬಾಹ್ಯಾಕಾಶದ ಚಿತ್ರಣದ ಜತೆಗೆ, ಮಾಹಿತಿ ಲಭ್ಯ. ತಾರಾಲಯ ಪ್ರವೇಶಕ್ಕೆ ಯುವಕ ಹಾಗೂ ಯುವತಿಯರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.