ಬೆಂಗಳೂರು: ತಂತ್ರಜ್ಞಾನ ದೈತ್ಯರು–ನವೋದ್ಯಮಗಳು, ಅನ್ವೇಷಕರು–ಹೂಡಿಕೆದಾರರು, ದೇಶೀಯ ಉದ್ದಿಮೆಗಳು ಮತ್ತು ಜಾಗತಿಕ ಉದ್ಯಮಗಳನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯ, ಹೂಡಿಕೆ ಸಂಬಂಧದ ಚರ್ಚೆಗೆ ಅವಕಾಶ ಕಲ್ಪಿಸಿದ 27ನೇ ಆವೃತ್ತಿಯ ‘ಬೆಂಗಳೂರು ತಂತ್ರಜ್ಞಾನ ಶೃಂಗ’ಕ್ಕೆ ಗುರುವಾರ ತೆರೆಬಿತ್ತು.
ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಶೃಂಗದ ಸಮಾರೋಪ ಸಮಾರಂಭ ಗುರುವಾರ ನಡೆಯಿತು. ಶೃಂಗದ ಆಕರ್ಷಣೆಗಳಲ್ಲಿ ಒಂದಾಗಿದ್ದ ವಸ್ತು ಪ್ರದರ್ಶನದಲ್ಲಿ ಭಾಗಿಯಾದ, ವಿವಿಧ ಕಾರ್ಯಗಳಲ್ಲಿ ಸಹಭಾಗಿತ್ವ ತೋರಿದ, ಬೆಂಗಳೂರು ನಗರದ ‘ಟೆಕ್’ ವಲಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕಂಪನಿಗಳು ಮತ್ತು ವ್ಯಕ್ತಿಗಳನ್ನು ಗೌರವಿಸುವ ಮೂಲಕ ಶೃಂಗ ಸಮಾರೋಪಗೊಂಡಿತು.
ಶೃಂಗದ ಭಾಗವಾಗಿ ಆಯೋಜಿಸಲಾಗಿದ್ದ ‘ಬ್ಯುಸಿನೆಸ್ ಟು ಬ್ಯುಸಿನೆಸ್–ಬಿ2ಬಿ’ ಸಭೆಯಲ್ಲಿ ವಿಚಾರ ವಿನಿಮಯ, ಹೂಡಿಕೆ ಸಂಬಂಧ ಮಾಡಿಕೊಂಡ ಒಪ್ಪಂದ, ತಂತ್ರಜ್ಞಾನ ವಿನಿಮಯಕ್ಕೆ ಸಂಬಂಧಿಸಿದ ಒಪ್ಪಂದ ಮತ್ತು ತಿಳಿವಳಿಕೆ ಪತ್ರಗಳನ್ನು ಪರಸ್ಪರ ಹಂಚಿಕೊಂಡರು.
ಆನ್‌ಲೈನ್ ಮೂಲಕ ನಡೆದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕುರಿತ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಪ್ರಾಥಮಿಕ ಹಂತದಲ್ಲೇ ದೇಶದ ಎಲ್ಲ ರಾಜ್ಯಗಳಿಂದ 5.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ಛತ್ತೀಸಗಡದ ತಾನಿಶ್ ಮತ್ತು ರಾಜಸ್ಥಾನದ ಏಕಲವ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಾಗತಿಕ ಮಟ್ಟದ ಹೂಡಿಕೆದಾರರಿಗೆ ತಮ್ಮ ಪರಿಕಲ್ಪನೆಗಳು ಮತ್ತು ಉತ್ಪನ್ನಗಳನ್ನು ವಿವರಿಸಿದ ನವೋದ್ಯಮಿಗಳು, ಹೂಡಿಕೆ ಸಂಬಂಧ ಒಪ್ಪಂದಗಳಿಗೆ ಸಹಿ ಹಾಕಿದರು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ, ಬಿಡುಗಡೆ ಮಾಡಲಾದ ನವೋದ್ಯಮ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.
ಮತ್ತಷ್ಟು ಹೊಸ ವಿಚಾರಗಳೊಂದಿಗೆ, ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ 28ನೇ ಆವೃತ್ತಿಯ ತಂತ್ರಜ್ಞಾನ ಶೃಂಗವನ್ನು ನಡೆಸುವ ಗುರಿಯೊಂದಿಗೆ ಮೂರು ದಿನಗಳ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
‘ಬೃಹತ್ ಶೃಂಗ’
‘ಇದು ಅತ್ಯಂತ ದೊಡ್ಡ ತಂತ್ರಜ್ಞಾನ ಶೃಂಗ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಶೃಂಗದ ಮಾಹಿತಿಗಳನ್ನು ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ‘ವಿಶ್ವದ ಬೇರೆ ಭಾಗಗಳಲ್ಲಿ ನಡೆದ ತಂತ್ರಜ್ಞಾನ ಶೃಂಗಗಳಲ್ಲಿ ಭಾಗಿಯಾಗಿದ್ದಕ್ಕಿಂತ ಹೆಚ್ಚಿನ ಜಾಗತಿಕ ಮಟ್ಟದ ನಿಯೋಗದ ಸದಸ್ಯರು ಈ ಶೃಂಗದಲ್ಲಿ ಭಾಗಿಯಾದರು’ ಎಂದರು. ‘ನಿಪುಣ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಅದರ ಅಡಿಯಲ್ಲಿ ಪ್ರತಿ ವರ್ಷ 1 ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯಮಗಳೇ ತರಬೇತಿ ನೀಡುವ ಸಂಬಂಧ ಮಾಡಿಕೊಳ್ಳಲಾದ ಒಪ್ಪಂದಗಳು ಈ ಶೃಂಗದ ಬಹುದೊಡ್ಡ ಯಶಸ್ಸುಗಳಲ್ಲಿ ಒಂದು. ಮುಂದಿನ ವರ್ಷಗಳಲ್ಲಿ ಜಗತ್ತಿನಲ್ಲಿ ಸಿದ್ದವಾಗುವ ಪ್ರತಿ ತಂತ್ರಾಂಶದಲ್ಲೂ ಕನ್ನಡಿಗ ಬರೆದ ಕೋಡಿಂಗ್ ಇರಬೇಕು ಎಂಬುದು ನಮ್ಮ ಗುರಿ. ಅದನ್ನು ಸಾಧಿಸುವಲ್ಲಿ ಈ ಶೃಂಗ ಮಹತ್ವದ ಪಾತ್ರ ವಹಿಸಲಿದೆ’ ಎಂದರು. 51ಶೃಂಗದಲ್ಲಿ ಭಾಗಿಯಾದ ದೇಶಗಳು 521ಸಂಪನ್ಮೂಲ ವ್ಯಕ್ತಿಗಳು 84ಸಂವಾದ ಕಾರ್ಯಕ್ರಮಗಳು 683ಪ್ರದರ್ಶಕರು 15465ವಿದೇಶಿ ಮತ್ತು ದೇಶಿ ನಿಯೋಗಗಳ ಸದಸ್ಯರು 21372ಉದ್ಯಮಿಗಳು 36837ಸಂವಾದಗಳಲ್ಲಿ ಭಾಗಿಯಾದವರು 50000+ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದವರು 4775ಬಿ2ಬಿ ಸಭೆಗಳಲ್ಲಿ ಭಾಗಿಯಾದ ಉದ್ಯಮಿಗಳು 300+ಬಂಡವಾಳ ಹೂಡಿಕೆ ವೇದಿಕೆಯಲ್ಲಿ ಭಾಗಿಯಾದ ನವೋದ್ಯಮಗಳು 100+ಬಂಡವಾಳ ಹೂಡಿಕೆ ವೇದಿಕೆಯಲ್ಲಿ ಭಾಗಿಯಾದ ಜಾಗತಿಕ ಹೂಡಿಕೆದಾರರು
‘ಜಾಗತಿಕ ಅವಕಾಶಗಳು’
ಬೆಂಗಳೂರು ಅದ್ಭುತ ಕಲ್ಪನೆಗಳ ತವರೂರು. ಈ ಶೃಂಗವು ನವೋದ್ಯಮಗಳಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ತೆರೆದಿಟ್ಟಿತು. ಅಂತರರಾಷ್ಟ್ರೀಯ ಮಟ್ಟದ ಸಹಕಾರಗಳಿಗೆ ವೇದಿಕೆಯಾಯಿತು. ಉದ್ಯಮಿಗಳು ತಮ್ಮ ಕನಸು ನನಸು ಮಾಡಿಕೊಳ್ಳಲು ನೆರವಾಯಿತು. ಭವಿಷ್ಯವನ್ನು ರೂಪಿಸುವ ಪರಿಕಲ್ಪನೆಗಳನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆಗಳನ್ನು ಸರ್ಕಾರಗಳಿಗೆ ಉದ್ಯಮಿಗಳಿಗೆ ಹೂಡಿಕೆದಾರರಿಗೆ ಮತ್ತು ನವೋದ್ಯಮಗಳಿಗೆ ತೆರೆದಿಟ್ಟಿತು.ಡಾ. ಶರಣಪ್ರಕಾಶ ಪಾಟೀಲ ಕೌಶಲಾಭಿವೃದ್ಧಿ ಸಚಿವ
‘ಸುಸ್ಥಿರ ನೀತಿ ಸ್ವಾಗತಾರ್ಹ’
‘ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಕರ್ನಾಟಕವು ಮುಂದಿನ ಸಾಲಿನಲ್ಲಿಯೇ ಇದೆ. ನಮಗಿರುವ ಒಂದೇ ಭೂಮಿಯನ್ನು ಉಳಿಸಿ ಮುಂದಿನ ತಲೆಮಾರಿಗೆ ದಾಟಿಸುವಲ್ಲಿ ಶೂನ್ಯ ಇಂಗಾಲ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮರುಬಳಕೆ ತಂತ್ರಜ್ಞಾನಗಳ ಅಳವಡಿಕೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಶೃಂಗದ ಆಯೋಜನೆಯಲ್ಲಿ ಇವನ್ನು ಅಳವಡಿಸಿಕೊಳ್ಳಲಾಗಿತ್ತು. ಇದರಲ್ಲಿ ಉತ್ತಮ ಸಾಧನೆ ತೋರಿದವರಿಗೆ ‘ಸುಸ್ಥಿರ ಪ್ರಶಸ್ತಿ’ ನೀಡಿದ್ದು ಸ್ವಾಗತಾರ್ಹ’.ಈಶ್ವರ ಬಿ. ಖಂಡ್ರೆ ಅರಣ್ಯ ಮತ್ತು ಪರಿಸರ ಸಚಿವ
‘ಬೆಂಗಳೂರಿಗೆ ಮಹತ್ವದ ಸ್ಥಾನ’ ‘ಟೆಕ್ ಉದ್ಯಮಗಳು ನವೋದ್ಯಮಗಳಿಗೆ ವೇದಿಕೆ ಕಲ್ಪಿಸಿದ್ದಷ್ಟೇ ಅಲ್ಲ. ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮತ್ತು ಕರ್ನಾಟಕವನ್ನು ಒಂದು ಮಹತ್ವದ ಸ್ಥಾನದಲ್ಲಿ ನಿಲ್ಲಿಸುವ ಗುರಿ ಸಾಧನೆಗೆ ಈ ಶೃಂಗ ನೆರವಾಗಲಿದೆ. ಇವಿಷ್ಟೇ ಅಲ್ಲದೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನೂ ಶೃಂಗದಲ್ಲಿ ಅನುಸರಿಸಲಾಗಿದೆ. ಇಲ್ಲಿ ಉತ್ಪಾದನೆಯಾದ ಕಸದಲ್ಲಿ ಶೇ 98ರಷ್ಟನ್ನು ಮರುಬಳಕೆ ಮಾಡಲಾಗಿದೆ. ಶೃಂಗಕ್ಕಾಗಿ ಬಳಕೆಯಾದ ವಾಹನಗಳಲ್ಲಿ ಶೇ 28ರಷ್ಟು ವಿದ್ಯುತ್ ಚಾಲಿತ ವಾಹನಗಳಾಗಿದ್ದವು’ಪ್ರಿಯಾಂಕ್ ಖರ್ಗೆ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.