ಬೆಂಗಳೂರು: ‘ವಿವಿಧ ಕ್ಷೇತ್ರಗಳಲ್ಲಿ ಭಾರತವು ಪ್ರಗತಿ ಸಾಧಿಸುತ್ತಾ, ‘ಪಂಚ ರಾಷ್ಟ್ರಗಳ ವರ್ತುಲ’ ಸೇರುತ್ತಿದೆ. ಈ ಮೂಲಕ ಹಲವು ಕ್ಷೇತ್ರಗಳಲ್ಲಿ ಅಗ್ರಗಣ್ಯ ದೇಶ ಎನಿಸಿದೆ’ ಎಂದು ಐ–ಸ್ಪಿರಿಟ್ ಸಂಸ್ಥೆಯ ಸಂಸ್ಥಾಪಕ ಶರದ್ ಶರ್ಮಾ ಹೇಳಿದರು.
ತಂತ್ರಜ್ಞಾನ ಶೃಂಗದಲ್ಲಿ ‘ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಭಾರತದ ಅಭಿವೃದ್ಧಿ’ ವಿಷಯ ಕುರಿತು ಅವರು ಮಾತನಾಡಿದರು.
‘ಕೆಲವೇ ದೇಶಗಳು ಸಾಧಿಸಿರುವ ಗುರಿಯನ್ನು ಈಗಿನ ಜಾಗತಿಕ ವ್ಯವಸ್ಥೆಯಲ್ಲಿ ಐದು ದೇಶಗಳ ಗುಂಪಾಗಿ ಶ್ರೇಣೀಕರಿಸಲಾಗುತ್ತದೆ. ಅದನ್ನು ‘ಪಂಚ ರಾಷ್ಟ್ರಗಳ ವರ್ತುಲ’ ಎಂದು ಕರೆಯಲಾಗುತ್ತಿದೆ. ಭಾರತವು ಈಗ ಉಪಗ್ರಹ ಉಡಾವಣೆ ಮಾಡುವ ಸಾಮರ್ಥ್ಯವಿರುವ, ಕೋವಿಡ್ ಲಸಿಕೆ ಹೊಂದಿರುವ, ಡಿಜಿಟಲ್ ಪಾವತಿ ವ್ಯವಸ್ಥೆ ಇರುವ ಐದು ರಾಷ್ಟ್ರಗಳ ಗುಂಪುಗಳಲ್ಲಿ ಇದೆ’ ಎಂದರು.
‘ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ವಲಯಕ್ಕೆ ಕೇಂದ್ರ ಸರ್ಕಾರವು ಆದ್ಯತೆ ನೀಡುತ್ತಿದೆ. ಬಜೆಟ್‌ನಲ್ಲಿ ಈ ವಲಯಕ್ಕೆ ₹1 ಲಕ್ಷ ಕೋಟಿ ಅನುದಾನ ಮೀಸಲಿರಿಸಿತ್ತು. ಅದನ್ನು ಬಳಸಿಕೊಂಡು ಉತ್ತಮ ಮಾರುಕಟ್ಟೆ ನಿರ್ಮಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸರ್ಕೀಟ್ ಹೌಸ್ ಟೆಕ್ನಾಲಜಿಯ ಸಹ ಸಂಸ್ಥಾಪಕ ರಘು ರೆಡ್ಡಿ, ‘ಜಾಗತಿಕ ಮೊಬೈಲ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಶೇ 76ರಷ್ಟು ಪಾಲು ಹೊಂದಿದೆ. ಮುಂದಿನ ದಶಕಗಳಲ್ಲಿ ಭಾರತದಲ್ಲಿ ಅಂತಹ ಸಾಧನಗಳು ತಯಾರಾಗಬೇಕು. ಭಾರತವೂ ಮಾರುಕಟ್ಟೆ ಪಾಲನ್ನು ಉತ್ತಮಪಡಿಸಿಕೊಳ್ಳಬೇಕು’ ಎಂದರು.
ವಿಎಲ್‌ಎಸ್‌ಐನ ಅಧ್ಯಕ್ಷ ಸತ್ಯಗುಪ್ತ, ತೇಜಸ್ ನೆಟ್‌ವರ್ಕ್ಸ್ ಸಹ ಸಂಸ್ಥಾಪಕ ಸಂಜಯ್ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.