ಬೆಂಗಳೂರು: ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದಾಗಿ ನಗರದಲ್ಲಿ ತಾಪಮಾನ ಕುಸಿತ ಕಂಡಿದೆ. ಗರಿಷ್ಠ ತಾಪಮಾನ 21.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಕನಿಷ್ಠ ಉಷ್ಣಾಂಶವೂ 19.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.
ಮಂಗಳವಾರ ಹಾಗೂ ಬುಧವಾರ ಎರಡೂ ದಿನ ನಿರಂತರ ಮಳೆಯಿಂದಾಗಿ ಉಷ್ಣಾಂಶ ಕಡಿಮೆಯಾಗಿದೆ. ಬುಧವಾರ ಮಧ್ಯಾಹ್ನ 1ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಗರಿಷ್ಠ ತಾಪಮಾನ 21.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ವರ್ಷ ದಾಖಲಾದ ಅತೀ ಕಡಿಮೆ, ಗರಿಷ್ಠ ಉಷ್ಣಾಂಶವಾಗಿದೆ. ಇದರಿಂದ ನಗರದಲ್ಲಿ ಚಳಿ ವಾತಾವರಣವಿದೆ.
ಜುಲೈನಲ್ಲಿ ಗರಿಷ್ಠ ತಾಪಮಾನ 24.1 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಬಿಸಿಲಿನಿಂದಾಗಿ ಈ ತಿಂಗಳ ಮೊದಲ ವಾರ ತಾಪಮಾನ ಹೆಚ್ಚಿದ್ದು, ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಗುರುವಾರದಿಂದ ಗರಿಷ್ಠ– ಕನಿಷ್ಠ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ. 20ರಂದು ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.