ADVERTISEMENT

ಬೆಂಗಳೂರು: ಕಳ್ಳರ ಸುಳಿವು ನೀಡಿದ ‘ಆ್ಯಪ್‌’

ಚಂದ್ರಾ ಲೇಔಟ್ ಠಾಣೆ ಪೊಲೀಸರ ಕಾರ್ಯಾಚರಣೆ: ₹6.31 ಲಕ್ಷ ಮೌಲ್ಯದ 32 ಮೊಬೈಲ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 21 ಮೇ 2024, 14:18 IST
Last Updated 21 ಮೇ 2024, 14:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಪಾದಚಾರಿಗಳು ಹಾಗೂ ಉದ್ಯಾನಗಳಲ್ಲಿ ವಾಯುವಿಹಾರ ಮಾಡುತ್ತಿದ್ದವರನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಹಾಗೂ ಆರೋಪಿಗಳಿಂದ ಮೊಬೈಲ್‌ ಖರೀದಿಸುತ್ತಿದ್ದ ಮೂವರು ಸೇರಿ ಐವರು ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಪೀಣ್ಯದ ಪಾರ್ವತಿನಗರ ನಿವಾಸಿ ಮಹಮ್ಮದ್ ಫಾರೂಕ್(36) ಮತ್ತು ಜಗಜೀವನ್‌ರಾಂ ನಗರ ನಿವಾಸಿ ಸೈಯದ್ ಫರ್ವೀಜ್(25) ಹಾಗೂ ಕಳವು ಮೊಬೈಲ್ ಖರೀದಿಸುತ್ತಿದ್ದ ಸುಧಾಮನಗರದ ನಿವಾಸಿ ರೆಹಮಾನ್(31), ಸೈಯದ್ ಜಮೀರ್(26), ಸೈಯದ್ ಹಾಷಿಮ್(46) ಬಂಧಿತರು.

ADVERTISEMENT

ಆರೋಪಿಗಳಿಂದ ₹6.31 ಲಕ್ಷ ಮೌಲ್ಯದ 32 ಮೊಬೈಲ್‌ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಆ್ಯಪ್‌’ ನೀಡಿದ ಸುಳಿವು: 

ಮೊಬೈಲ್ ಸುಲಿಗೆ ಸಂಬಂಧ ಹರ್ಷ ಎಂಬುವರು ಏ.24ರಂದು ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಹರ್ಷ ಅವರ ಮೊಬೈಲ್‌ನಲ್ಲಿದ್ದ ‘ಫೈಂಡ್ ಮೈ ಡಿವೈಸ್’ ಆ್ಯಪ್‌ನಿಂದ ಮೊಬೈಲ್ ಲೋಕೇಷನ್ ಪತ್ತೆ ಆಗಿತ್ತು. ಅದನ್ನು ಆಧರಿಸಿ, ಕಾರ್ಯಾಚರಣೆ ನಡೆಸಿದಾಗ ಮೊಬೈಲ್‌ ಶಾಂತಿನಗರದ ಸುಧಾಮನಗರದಲ್ಲಿ ರೆಹಮಾನ್ ಅಂಗಡಿಯಲ್ಲಿ ಇರುವುದು ಪತ್ತೆಯಾಗಿತ್ತು. ಅಷ್ಟರಲ್ಲಿ ಆರೋಪಿ ಐ–ಫೋನ್‌ನ ಬಿಡಿಭಾಗಗಳನ್ನು ಬೇರ್ಪಡಿಸಿದ್ದ. ಮದರ್ ಬೋರ್ಡ್ ಅನ್ನು ತನ್ನ ಕಡೆ ಇಟ್ಟುಕೊಂಡು, ಅದರ ಡಿಸ್‌ಪ್ಲೇ ಅನ್ನು ಸೈಯದ್ ಜಮೀರ್‌ಗೆ ಹಾಗೂ ಬ್ಯಾಕ್‌ಕೇಸ್, ಬ್ಯಾಟರಿಯನ್ನು ಸೈಯದ್ ಹಾಷಿಮ್‌ಗೆ ಮಾರಾಟ ಮಾಡಿದ್ದ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೊಬೈಲ್ ಸುಲಿಗೆಕೋರರ ಕುರಿತು ಮಾಹಿತಿ ನೀಡಿದ್ದರು. ಅದಾದ ಮೇಲೆ ಮಹಮ್ಮದ್ ಫಾರೂಕ್ ಹಾಗೂ ಫರ್ವೇಜ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಬಂಧನದಿಂದ ಠಾಣೆಯಲ್ಲಿ ದಾಖಲಾಗಿದ್ದ 3 ಮೊಬೈಲ್ ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ಪೈಕಿ ಮೊಹಮ್ಮದ್ ಫಾರೂಕ್, ಸೈಯದ್ ಪರ್ವೇಜ್ ಅವರು ಏ.23ರಂದು ನಾಗರಭಾವಿಯ ಸುವರ್ಣ ಲೇಔಟ್‌ನ ಪಾರ್ಕ್ ಬಳಿ ಹರ್ಷ ಅವರ ಐ-ಫೋನ್‌ 14 ಪ್ರೊ ಮೊಬೈಲ್ ಸುಲಿಗೆ ಮಾಡಿದ್ದರು. ಮಹಮ್ಮದ್ ಫಾರೂಕ್ ಮೊಬೈಲ್, ಲ್ಯಾಪ್‌ಟಾಪ್, ಸಿ.ಸಿ.ಟಿ.ವಿ. ಕ್ಯಾಮೆರಾ ರಿಪೇರಿ ಕೆಲಸ ಮಾಡುತ್ತಿದ್ದ. ಸೈಯದ್ ಪರ್ವೇಜ್ ಜೆ.ಸಿ.ರಸ್ತೆಯಲ್ಲಿ ಕಾರ್ ರಿಪೇರಿ ಕೆಲಸ ಮಾಡಿಕೊಂಡಿದ್ದ. ಉಳಿದ ಮೂವರು ಆರೋಪಿಗಳು ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.