ADVERTISEMENT

Electric Vehicle: ಉದ್ಯಾನ ನಗರಿಗೆ ‘ಇ.ವಿ ಚಾರ್ಜಿಂಗ್’ ಗರಿ

ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು

ಗಾಣಧಾಳು ಶ್ರಿಕಂಠ
Published 30 ಸೆಪ್ಟೆಂಬರ್ 2024, 23:30 IST
Last Updated 30 ಸೆಪ್ಟೆಂಬರ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಐಟಿ-ಬಿಟಿ ನಗರ, ನವೋದ್ಯಮಗಳ ರಾಜಧಾನಿ ಎಂದೆಲ್ಲ ಹಿರಿಮೆ-ಗರಿಮೆಗಳಿಂದ ಕರೆಸಿಕೊಳ್ಳುತ್ತಿರುವ ಉದ್ಯಾನ ನಗರಿ ಬೆಂಗಳೂರಿನ ಮುಕುಟಕ್ಕೆ 'ಇವಿ ಚಾರ್ಜಿಂಗ್ ಹಬ್' ಎಂಬ ಹೊಸ ಗರಿಯೊಂದು ಸೇರ್ಪಡೆಯಾಗಿದೆ.

ಕೇಂದ್ರ ಇಂಧನ ಸಚಿವಾಲಯದ ಬ್ಯೂರೊ ಆಫ್‌ ಎನರ್ಜಿ ಎಫಿಷಿಯನ್ಸಿ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ ಎಲೆಕ್ಟ್ರಿಕ್‌ ವಾಹನಗಳ(ಇವಿ) ಚಾರ್ಜಿಂಗ್‌ ಕೇಂದ್ರಗಳನ್ನು ಹೊಂದಿರುವ ನಗರಗಳಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 5,765 ಇವಿ ಚಾರ್ಜಿಂಗ್‌ ಕೇಂದ್ರಗಳಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲೇ 4,462 ಕೇಂದ್ರಗಳಿವೆ.

‘ಇವಿ’ ಕ್ಷೇತ್ರದಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಕರ್ನಾಟಕ, 2017ರಲ್ಲಿ ‘ಇವಿ ನೀತಿ’ ಪರಿಚಯಿಸಿತು. 2021ರಲ್ಲಿ ಈ ನೀತಿಯನ್ನು ಪರಿಷ್ಕರಿಸಿತು. ಆನಂತರದಲ್ಲಿ ರಾಜ್ಯದಲ್ಲಿ ‘ಇವಿ’ ಬಳಕೆ ಹೆಚ್ಚಾಯಿತು. ಪೆಟ್ರೋಲ್ ಚಾಲಿತ ವಾಹನಗಳಿಂದ ‘ವಿದ್ಯುತ್‌ ಚಾಲಿತ ವಾಹನಗಳ ಬಳಕೆಯತ್ತ ಆಸಕ್ತಿ ತೋರುವವರು ಹೆಚ್ಚಾದರು. ಈಗೀಗಂತೂ ಸ್ವಿಗ್ಗಿ, ಝೊಮ್ಯಾಟೊ ಸೇರಿದಂತೆ ಆಹಾರ ಡೆಲಿವರಿ ಉದ್ಯೋಗಿಗಳು, ಕೊರಿಯರ್‌ ವಿತರಕರಂಥ ನಿತ್ಯ ದ್ವಿಚಕ್ರ ವಾಹನ ಬಳಸುವವರೆಲ್ಲ ‘ಇವಿ’ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹೆಚ್ಚಾದಂತೆ, ಚಾರ್ಜಿಂಗ್‌ ಕೇಂದ್ರಗಳ ಸಂಖ್ಯೆಯೂ ಹೆಚ್ಚಾಗಿದೆ. ಬೆಸ್ಕಾಂ, ನಗರದಲ್ಲಿರುವ ತನ್ನ ಕಚೇರಿಗಳು, ಬಿಬಿಎಂಪಿ, ಟಿಟಿಎಂಸಿ, ಬಿಡಿಎನಂತಹ ಸರ್ಕಾರಿ ಕಚೇರಿಗಳ ಆವರಣದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದೆ. ಹಲವು ಖಾಸಗಿ ಕಂಪನಿಗಳು ತಮ್ಮ ಕಂಪನಿಯ ವಾಹನಗಳ ಚಾರ್ಜಿಂಗ್‌ ಮಾಡಿಕೊಳ್ಳಲು ನಗರದ ಪ್ರಮುಖ ಸ್ಥಳಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಿದೆ. ಅಪಾರ್ಟ್‌ಮೆಂಟ್ ಸಮುಚ್ಛಯಗಳಲ್ಲೂ ಪ್ರತ್ಯೇಕ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗಿದೆ.

ADVERTISEMENT

‘ಐದಾರು ವರ್ಷಗಳ ಹಿಂದೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದಾಗ, ಬೆಂಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರಗಳು ಕಡಿಮೆ ಇದ್ದವು. ಈಗ ಎಲ್ಲೆಡೆ ಕೇಂದ್ರಗಳು ಲಭ್ಯವಿವೆ. ನಾನು ಮನೆಯಿಂದ ಚಾರ್ಜ್ ಮಾಡಿಕೊಂಡು ಹೊರಡುತ್ತೇನೆ. ಅಗತ್ಯವಿದ್ದರೆ ಚಾರ್ಜಿಂಗ್‌ ಕೇಂದ್ರಗಳಿಗೆ ಹೋಗಿ ಚಾರ್ಜ್ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ವಿಜಯನಗರದ ಖಾಸಗಿ ಕಂಪನಿ ಉದ್ಯೋಗಿ ರಘು.

ಇತ್ತೀಚೆಗೆ ಇವಿ ಆಟೊ ಹಾಗೂ ಲಗೇಜ್‌ ಆಟೊಗಳು ನಗರದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿವೆ. ಸರಕು ಸಾಗಣೆಯ ಪುಟ್ಟ ಪುಟ್ಟ ಇವಿಗಳ ಬಳಕೆ ನಗರದಲ್ಲಿ ಹೆಚ್ಚಾಗಿವೆ.

ಇವಿ ಚಾರ್ಜಿಂಗ್‌ ಕೇಂದ್ರಗಳ ಅರಂಭಕ್ಕೆ ಇಂಧನ ಇಲಾಖೆ ಉತ್ತೇಜನ ನೀಡುತ್ತಿದೆ. ಇತ್ತೀಚೆಗೆ ಖಾಸಗಿ ಕಂಪನಿಗಳ ಸಮೂಹವೊಂದು ‘ಜೌಲ್‌’ ಎಂಬ ಯೋಜನೆಯಡಿ ನಗರದ ದೊಡ್ಡಕಲ್ಲಸಂದ್ರದಲ್ಲಿ ಮೊದಲ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಿತು. ಇದೇ ರೀತಿ, ಬೆಸ್ಕಾಂ ಕೂಡ, ಸಾರ್ವಜನಿಕರ ಬಳಕೆಗಾಗಿ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸೌರಶಕ್ತಿ ಆಧಾರಿತ ಇವಿ ಚಾರ್ಜಿಂಗ್ ಹಬ್‌ವೊಂದನ್ನು ನಿರ್ಮಿಸುತ್ತಿದೆ. 400 ಕಿ.ವಾಟ್‌ ಸಾಮರ್ಥ್ಯದ ಈ ಕೇಂದ್ರದಲ್ಲಿ ಏಕಕಾಲಕ್ಕೆ 23 ವಾಹನಗಳನ್ನು ಚಾರ್ಜ್ ಮಾಡಬಹುದು. ಇದರಲ್ಲಿ 30 ನಿಮಿಷದ ಒಳಗೆ ಚಾರ್ಜ್ ಮಾಡಬಲ್ಲ 20 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳಿರುತ್ತವೆ. 50 ಕಿ.ವಾ ಮತ್ತು 30 ಕಿ.ವಾ ಸಾಮರ್ಥ್ಯದ ವೇಗದ ಚಾರ್ಜಿಂಗ್ ಪಾಯಿಂಟ್‌ಗಳಿರುತ್ತವೆ. ಖಾಸಗಿ ಕಂಪನಿ ಸಹಯೋಗದಲ್ಲಿ ಈ ಇವಿ ಹಬ್ ನಿರ್ಮಾಣವಾಗುತ್ತಿದೆ.

ಬೆಸ್ಕಾಂ ಕೇಂದ್ರ ಕಚೇರಿಯಲ್ಲಿರುವ ಘಟಕದಲ್ಲಿ ಕಾರನ್ನು ಚಾರ್ಜ್‌ ಮಾಡುತ್ತಿರುವುದು (ಸಂಗ್ರಹ ಚಿತ್ರ)

ಬಳಸಿದ ಬ್ಯಾಟರಿಗಳನ್ನು ಚಾರ್ಜ್‌ ಮಾಡಿ ಮರುಬಳಕೆ ಮಾಡಲಾಗುತ್ತದೆ. ಇದು ಈ ಕೇಂದ್ರದ ವಿಶೇಷ. ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು. ಮಾತ್ರವಲ್ಲ, 24 ಗಂಟೆಗಳು ಇವಿ ಚಾರ್ಜಿಂಗ್‌ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್‌ ಸ್ಟೇಷನ್‌ ಕೂಡ ಇದಾಗಿದೆ. ಮುಂದಿನ ತಿಂಗಳಲ್ಲಿ ಇದು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

ಇವಿ ಚಾರ್ಜಿಂಗ್ ಕೇಂದ್ರ
ಸಾಂದರ್ಭಿಕ ಚಿತ್ರ
ಇವಿ ಚಾರ್ಜಿಂಗ್‌ನಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಹೈವೇಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಚಾರ್ಜಿಂಗ್‌ ಕೇಂದ್ರಗಳ ಜಾಲ ವಿಸ್ತರಿಸಿ ಇನ್ನಷ್ಟು ಉತ್ತಮಗೊಳಿಸುತ್ತೇವೆ.
ಮಹಾಂತೇಶ್ ಬೀಳಗಿ ವ್ಯವಸ್ಥಾಪಕ ನಿರ್ದೇಶಕ ಬೆಸ್ಕಾಂ
ಪ್ರದೀಪ್ ಸಾಗರ
ಒಂದು ವರ್ಷದಿಂದ ಇವಿ ಕಾರು ಬಳಸುತ್ತಿದ್ದೇನೆ. ಬೆಂಗಳೂರಿನಾದ್ಯಂತ ಸಾಕಷ್ಟು ಚಾರ್ಜಿಂಗ್ ಕೇಂದ್ರಗಳಿವೆ. ನನಗೆ ಒಂದೂ ದಿನವೂ ಚಾರ್ಜಿಂಗ್‌ಗೆ ತೊಂದರೆಯಾಗಿಲ್ಲ. ಚಾರ್ಜಿಂಗ್ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಸುಮಾರು 1 ಗಂಟೆಯೊಳಗೆ ಪೂರ್ಣ ಚಾರ್ಜ್ ಆಗುತ್ತದೆ. 400 ಕಿ.ಮೀ ಧಾರಾಳವಾಗಿ ಓಡಾಡುತ್ತೇನೆ. ಹೊರಗಡೆ ಹೋಗುವಾಗ ಎಲ್ಲೆಲ್ಲಿ ಚಾರ್ಜಿಂಗ್‌ ಮಾಡಬಹುದು ಎಂಬುದನ್ನು ತಿಳಿದುಕೊಂಡು ಹೋಗುತ್ತೇನೆ.
ಪ್ರದೀಪ್ ಸಾಗರ ಸಾಫ್ಟ್‌ವೇರ್ ಉದ್ಯೋಗಿ

ಬೆಸ್ಕಾಂ: ಭವಿಷ್ಯದ ಯೋಜನೆಗಳು

ಬೆಸ್ಕಾಂ, ಇವಿ ಚಾರ್ಜಿಂಗ್‌ನಂತಹ ಮೂಲಸೌಕರ್ಯ ಕಲ್ಪಿಸುವ ನೋಡಲ್‌ ಏಜೆನ್ಸಿಯಾಗಿದ್ದು, ಭವಿಷ್ಯದಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ.

  • ನಗರದಾದ್ಯಂತ ಇಂದಿರಾ ಕ್ಯಾಂಟೀನ್‌, ಬಿಬಿಎಂಪಿ, ಬಿಡಿಎ, ಆಟೊ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ‘ಇವಿ ಚಾರ್ಜಿಂಗ್ ಕೇಂದ್ರ’ಗಳನ್ನು ಸ್ಥಾಪಿಸಲು ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧವಾಗಿದೆ.

  • ಬೆಂಗಳೂರು ನಗರದ ಸುತ್ತಮುತ್ತ ಪಿಪಿಪಿ ಮಾದರಿಯಲ್ಲಿ ಬೆಸ್ಕಾಂ ಮಾಲೀಕತ್ವದ 20 ಸ್ಥಳಗಳಲ್ಲಿ ಬ್ಯಾಟರಿ ಸ್ವಾಪಿಂಗ್ ಸ್ಟೇಷನ್ (2W ಮತ್ತು 3W) ಸ್ಥಾಪನೆಗಾಗಿ ಟೆಂಡರ್ ಆಹ್ವಾನ. ಸ್ವಾಪಿಂಗ್ ಎಂದರೆ, ಬಳಸಿದ ಬ್ಯಾಟರಿಯನ್ನು ಕೇಂದ್ರದಲ್ಲಿ ಇಟ್ಟು, ಕೇಂದ್ರದಲ್ಲಿ ಚಾರ್ಜಿಂಗ್ ಆದ ಬ್ಯಾಟರಿಯನ್ನು ತೆಗೆದುಕೊಂಡು ವಾಹನಕ್ಕೆ ಜೋಡಿಸಿಕೊಳ್ಳುವುದು. ಇದು ದ್ವಿಚಕ್ರ ವಾಹನಗಳಿಗೆ ಮಾತ್ರ. ಇದರಿಂದ ಇವಿ ಬಳಸುವ ಸ್ವಿಗ್ಗಿ, ಝೊಮ್ಯಾಟೊ, ಕೊರಿಯರ್‌, ಪಾರ್ಸಲ್‌ ವಿತರಕರಿಗೆ ಅನುಕೂಲವಾಗುತ್ತದೆ.

  • ರಾಜ್ಯದಾದ್ಯಂತ 11 ಆರ್‌ಟಿಒ ಕಚೇರಿಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಸಿದ್ದತೆ ನಡೆದಿದೆ. ಇನ್ನೆರಡು ತಿಂಗಳಲ್ಲಿ ಈ ಯೋಜನೆ ಕಾರ್ಯಾರಂಭವಾಗಲಿದೆ.

  • ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ ಪ್ರತಿ ಟೋಲ್‌ ಗೇಟ್‌ನ ಎರಡೂ ಕಡೆ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಸಮೀಕ್ಷೆ ನಡೆಸಿ, ಎನ್‌ಎಚ್‌ಎಐಗೆ ವರದಿ ಸಲ್ಲಿಸಲಾಗಿದೆ. ಅನುಮೋದನೆ ನಿರೀಕ್ಷೆಯಲ್ಲಿದೆ.

  • ಕೆಆರ್‌ಡಿಸಿಎಲ್‌ ಮನವಿ ಮೇರೆಗೆ, ರಾಜ್ಯದ ಎಲ್ಲ ರಾಜ್ಯ ಹೆದ್ದಾರಿಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಅಳವಡಿಸಲು, ಜಂಟಿಯಾಗಿ ಅಧ್ಯಯನ ಮಾಡಲಾಗಿದೆ. 32 ಟೋಲ್‌ ಗೇಟ್‌ಗಳ ಬಳಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಸೂಕ್ತವಾಗಿದ್ದು, ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ.

  • ಸಾರ್ವಜನಿಕ – ಖಾಸಗಿ– ಸಹಭಾಗಿತ್ವದಲ್ಲಿ (ಪಿಪಿಪಿ) ರಾಜ್ಯದಾದ್ಯಂತ 1910 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ 2620 ಚಾರ್ಜರ್‌ ಅಳವಡಿಸುವ ಯೋಜನೆಯ ಅನುಮೋದನೆಗಾಗಿ ಜುಲೈನಲ್ಲಿ ಇಂಧನ ಇಲಾಖೆಗೆ ಪ್ರಸ್ತಾವ ಸಲ್ಲಿಕೆ.

‘ಇ.ವಿ ಮಿತ್ರ’ ಆ್ಯಪ್‌
ಇ.ವಿ ಬಳಕೆದಾರರಿಗೆ ಸುಗಮ ಚಾರ್ಜಿಂಗ್‌ ಸೌಲಭ್ಯಕ್ಕಾಗಿ, ಬೆಸ್ಕಾಂ ‘ಇ.ವಿ. ಮಿತ್ರ’ ಎಂಬ ಮೊಬೈಲ್ ಅಪ್ಲಿಕೇಷನ್‌ ಪರಿಚಯಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡೂ ಮೊಬೈಲ್‌ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಈ ಆ್ಯಪ್‌, ಸಮೀಪದ ಚಾರ್ಜಿಂಗ್‌ ಕೇಂದ್ರದ ಮಾಹಿತಿ ನೀಡುತ್ತದೆ. ಚಾರ್ಜಿಂಗ್‌ ಪ್ರಕ್ರಿಯೆ, ಬುಕ್ಕಿಂಗ್‌ ವಿವರ, ಚಾರ್ಚಿಂಗ್ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್‌ ಕಾಯ್ದಿರಿಸುವ ಸೌಲಭ್ಯ ಹೊಂದಿದೆ. ಕನ್ನಡ, ಹಿಂದಿ, ಇಂಗ್ಲಿಷ್‌ ಸೇರಿ 11 ಭಾಷೆಗಳಲ್ಲಿ ಇ.ವಿ ಚಾರ್ಜಿಂಗ್‌ ಮಾಹಿತಿ ಲಭ್ಯವಿದೆ. ಆ್ಯಪ್‌ನಿಂದ ಯುಪಿಐ ಮೂಲಕ ಪಾವತಿ ಮಾಡಬಹುದು. https://onelink.to/evmithra ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್‌ ಮಾಡಿಕೊಂಡು ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.