ADVERTISEMENT

ಹಬ್ಬ ಮುಗಿಸಿ ಬೆಂಗಳೂರಿಗೆ ದೌಡಾಯಿಸಿದ ಜನ: ನಗರದ ಹಲವೆಡೆ ವಿಪರೀತ ಟ್ರಾಫಿಕ್!

ನಗರದ ಹಲವೆಡೆ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗಿತ್ತು: ನಾಗಸಂದ್ರ ಮೆಟ್ರೊದಲ್ಲಿ ಟಿಕೆಟ್‌ಗಾಗಿ ಅರ್ಧ ಕಿ.ಮೀ ಕ್ಯೂ!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 9:53 IST
Last Updated 4 ನವೆಂಬರ್ 2024, 9:53 IST
<div class="paragraphs"><p>ಇಂದು ಬೆಂಗಳೂರಿನ ಹಲವೆಡೆ ವಿಪರೀತ ಟ್ರಾಫಿಕ್ ಉಂಟಾಗಿತ್ತು</p></div>

ಇಂದು ಬೆಂಗಳೂರಿನ ಹಲವೆಡೆ ವಿಪರೀತ ಟ್ರಾಫಿಕ್ ಉಂಟಾಗಿತ್ತು

   

ಬೆಂಗಳೂರು: ಹೆದ್ದಾರಿ, ಸರ್ವಿಸ್‌ ರಸ್ತೆಗಳಲ್ಲಿ ತೆವಳುತ್ತಾ ಸಾಗುತ್ತಿದ್ದ ವಾಹನಗಳು, ಪಕ್ಕದ ದಾರಿಯಲ್ಲಿ ಮೆಟ್ರೊ ರೈಲಿಗಾಗಿ ಕಿ.ಮೀ. ದೂರದವರೆಗೆ ಸರತಿಯಲ್ಲಿ ನಿಂತು ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಿದ್ದ ‌ಪ್ರಯಾಣಿಕರು, ದಟ್ಟಣೆಯಲ್ಲೇ ಸಿಲುಕಿದ; ಶಾಲಾ–ಕಾಲೇಜಿಗೆ ಮಕ್ಕಳನ್ನು ಬಿಡಲು ಹೊರಟವರು, ರಸ್ತೆಗಳಲ್ಲಿ–ಮೆಟ್ರೊ ನಿಲ್ದಾಣದ ಆವರಣದಲ್ಲಿ ಎಲ್ಲೆಲ್ಲೂ ಜನದಟ್ಟಣೆ...

ಇದು ಸೋಮವಾರ ಬೆಳಿಗ್ಗೆ ಸುಮಾರು ಏಳು ಗಂಟೆಯಿಂದ ಮಧ್ಯಾಹ್ನದವರೆಗಿನ ನಾಗಸಂದ್ರ ಮೆಟ್ರೊ ನಿಲ್ದಾಣದ ಸುತ್ತಮುತ್ತ ಕಂಡುಬಂದ ದೃಶ್ಯಗಳು.

ADVERTISEMENT

ಹಬ್ಬದ ಸರಣಿ ರಜೆಗಳನ್ನು ಮುಗಿಸಿಕೊಂಡು ಬಸ್‌ಗಳಲ್ಲಿ ಬೆಂಗಳೂರು ತಲುಪಿದ ಬಹುತೇಕರು, ಮುಂದೆ ಸಂಚಾರ ದಟ್ಟಣೆಯನ್ನು ಅರಿತು, ನಾಗಸಂದ್ರದಲ್ಲೇ ಇಳಿದು ಮೆಟ್ರೊ ರೈಲು ಹತ್ತಲು ಮುಂದಾದರು. ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ನಿಲ್ದಾಣದ ಎರಡೂ ಪ್ರವೇಶ ದ್ವಾರಗಳಲ್ಲಿ ಸರತಿ ಸಾಲು ಕಿ.ಮೀ.  ಉದ್ದವಿತ್ತು. ‘ಐಕಿಯಾ’ ಭಾಗದ ಪ್ರವೇಶ ದ್ವಾರದಲ್ಲಿ ಕೆನ್ನಮೆಟಲ್‌ ಕಂಪನಿವರೆಗೂ ಸರತಿ ಸಾಲಿತ್ತು. ಮತ್ತೊಂದು ಪ್ರವೇಶ ದ್ವಾರದಲ್ಲಿ ಸುರುಳಿ ಸುತ್ತಿಕೊಂಡಂತೆ ನಿಂತ ಸರತಿ ಸಾಲು, ವಿಡಿಯಾ ಪೂರ್ಣಪ್ರಜ್ಞ ಶಾಲೆ ರಸ್ತೆಯ ಅರ್ಧ ಭಾಗದವರಗೂ ಮುಂದುವರಿದಿತ್ತು.

ಈ ಪ್ರಯಾಣಿಕರ ಜೊತೆಗೆ, ನಿತ್ಯವೂ ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ತೆರಳುವ ಉದ್ಯೋಗಿಗಳು ಇದೇ ಸಮಯಕ್ಕೆ ಮೆಟ್ರೊ ರೈಲಿಗಾಗಿ ನಿಲ್ದಾಣಕ್ಕೆ ಬಂದಿದ್ದರಿಂದ, ದಟ್ಟಣೆ ಹೆಚ್ಚುತ್ತಾ ಹೋಯಿತು.

‘ಇದೇನೂ ಹೊಸದಲ್ಲ. ಪ್ರತಿ ಬಾರಿ ಸರಣಿ ರಜೆಗಳು, ಹಬ್ಬಗಳ ರಜೆ ಆರಂಭಕ್ಕೆ ಮುನ್ನ ಮತ್ತು ರಜೆ ಮುಗಿದ ನಂತರದ ದಿನದಲ್ಲಿ, ಇಲ್ಲಿ ವಾಹನ ದಟ್ಟಣೆ, ಜನದಟ್ಟಣೆ ಸಾಮಾನ್ಯವಾಗಿದೆ. ಈ ಬಾರಿ, ಸ್ವಲ್ಪ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗಿದೆ’ ಎಂದು ವಾಹನ ಸವಾರರೊಬ್ಬರು ಬೇಸರದಿಂದ ಹೇಳಿದರು.

ಮೆಟ್ರೊ ನಿಲ್ದಾಣದ ಎದುರಿನ ಸರತಿ ಸಾಲಿನ ಚಿತ್ರವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ನೆಟ್ಟಿಗರೊಬ್ಬರು, ‘ಬೆಂಗಳೂರು ಸಂಚಾರ ನಿಯಂತ್ರಣದ ವಿಚಾರದಲ್ಲಿ ಹಿಂದೆ ಉಳಿದಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ‘ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ನಾಗಸಂದ್ರ–ಮಾದಾವರ ಹೊಸ ವಿಸ್ತರಿತ ಮಾರ್ಗದಲ್ಲಿ ಮೆಟ್ರೊ ರೈಲು ಸೇವೆಯನ್ನು ಕೂಡಲೇ ಆರಂಭಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತುಮಕೂರು ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆಯಲ್ಲಿ ವಾಹನ ದಟ್ಟಣೆಯಲ್ಲಿ ಪ್ರಯಾಣಿಕರು ಸಿಲುಕಿ ಪರದಾಡಿದರು. ಊರಿಗೆ ಹೋದವರು ಭಾನುವಾರ ಸಂಜೆಯಿಂದಲೇ ನಗರದತ್ತ ಬರಲು ಆರಂಭಿಸಿದರು. ಇದರಿಂದ ನೆಲಮಂಗಲದ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೆಬ್ಬಾಳ ಮೇಲ್ಸೇತುವೆಯಲ್ಲೂ ಇದೇ ಸಮಸ್ಯೆ ಇತ್ತು. 

ಉಳಿದೆಡೆಯೂ ಇದೇ ವ್ಯಥೆ

ಹಳೇ ಮದ್ರಾಸ್ ರಸ್ತೆ ಬಳ್ಳಾರಿ ರಸ್ತೆ ಮೈಸೂರು ರಸ್ತೆ ಗೊರಗುಂಟೆಪಾಳ್ಯದ ಹೊರ ವರ್ತುಲ ರಸ್ತೆ ರಾಜ್‌ಕುಮಾರ್ ರಸ್ತೆ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಇದೇ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ರೈಲು ಬಸ್ಸು ಮೆಟ್ರೊ ತುಂಬಿ ತುಳುಕಿದ್ದು ಕಂಡುಬಂತು. ಯಶವಂತಪುರ ಮೆಟ್ರೊ ನಿಲ್ದಾಣದಲ್ಲೂ ದಟ್ಟಣೆ ಹೆಚ್ಚಾಗಿತ್ತು. ದೂರದೂರುಗಳಿಂದ ಬಂದು ರೈಲು ನಿಲ್ದಾಣದಲ್ಲಿ ಇಳಿದವರು ಮನೆಗೆ ಕಚೇರಿಗೆ ಹೋಗಲು ಪರದಾಡಿದರು.

ನಾಗಸಂದ್ರ ಮೆಟ್ರೊ ನಿಲ್ದಾನದಲ್ಲಿ ಪ್ರಯಾಣಿಕರ ಸರತಿ ಸಾಲು
ಕೆ.ಆರ್‌.ಪುರಂನ ಹಳೇ ಮದ್ರಾಸ್‌ ರಸ್ತೆಯ ಐಟಿಐ ಸಮೀಪದಲ್ಲಿ ಸೋಮವಾರ ಕಂಡುಬಂದ ಸಂಚಾರ ದಟ್ಟಣೆ ಪ್ರಜಾವಾಣಿ ಚಿತ್ರ: ಎಸ್.ಕೆ.ದಿನೇಶ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.