ADVERTISEMENT

ಟೋಯಿಂಗ್: ವಿಡಿಯೊ ಚಿತ್ರೀಕರಿಸಿದ್ದವರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 15:42 IST
Last Updated 31 ಜನವರಿ 2022, 15:42 IST
ಟೋಯಿಂಗ್ ವಾಹನ
ಟೋಯಿಂಗ್ ವಾಹನ   

ಬೆಂಗಳೂರು: ‘ಬೈಕ್ ಬಿಡಿಸಿಕೊಳ್ಳಲು ಟೋಯಿಂಗ್ ವಾಹನದ ಹಿಂದೆ ಸವಾರರೊಬ್ಬರು ಓಡಿದ್ದ’ ವಿಡಿಯೊ ಚಿತ್ರೀಕರಿಸಿದ್ದ ಹರೀಶ್‌ಗೌಡ ಗುಂಡಗಲ್ ಎಂಬುವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಬಗ್ಗೆ ತನಿಖೆ ನಡೆಸಿದ್ದ ಡಿಸಿಪಿ ನೇತೃತ್ವದ ತಂಡ, ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರಿಗೆ ವರದಿ ನೀಡಿದೆ.

‘ವಿಡಿಯೊವನ್ನು ತಿರುಚಿ ಟೋಯಿಂಗ್ ವ್ಯವಸ್ಥೆ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲಾಗಿದೆ. ಇದೊಂದು ಪ್ರಚೋದನಾತ್ಮಕ ಹಾಗೂ ತಿರುಚಿದ ವಿಡಿಯೊ’ ಎಂಬ ಅಂಶ ವರದಿಯಲ್ಲಿದೆ. ಅದನ್ನು ಆಧರಿಸಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತ ಎನ್ನಲಾದ ಹರೀಶ್ ಗೌಡ ಅವರಿಗೆ ನೋಟಿಸ್ ನೀಡಲಾಗಿದೆ. ನಿಗದಿತ ದಿನದಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.

ADVERTISEMENT

‘ಜೀವನ್‌ಬಿಮಾನಗರ ಸಂಚಾರ ಠಾಣೆ ವ್ಯಾಪ್ತಿಯ ಇಂದಿರಾನಗರದಲ್ಲಿ ಫ್ಲಿಪ್‌ಕಾರ್ಟ್‌ ಡೆಲಿವರಿ ಬಾಯ್ ಎಸ್‌.ಜೆ. ಅಬ್ರಾಹಿಂ, ನೋ ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದರು. ಮೂರು ಬಾರಿ ಮೈಕ್‌ನಲ್ಲಿ ಕೂಗಿದ್ದ ಪೊಲೀಸರು, ಸವಾರ ಬಾರದಿದ್ದರಿಂದ ಬೈಕ್ ಟೋಯಿಂಗ್ ಮಾಡಿದ್ದರು’ ಎಂದು ರವಿಕಾಂತೇಗೌಡ ಹೇಳಿದರು.

‘ಟೋಯಿಂಗ್ ವಾಹನ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಸವಾರ ಓಡೋಡಿ ಬಂದಿದ್ದರು. ಸ್ವಲ್ಪ ದೂರಕ್ಕೆ ಹೋಗಿ ವಾಹನ ನಿಲ್ಲಿಸಿದ್ದ ಪೊಲೀಸರು, ಸವಾರನಿಗೆ ಎಚ್ಚರಿಕೆ ನೀಡಿ ಬೈಕ್ ಬಿಟ್ಟು ಕಳುಹಿಸಿದ್ದರು. ಆತನಿಂದ ಯಾವುದೇ ದಂಡವನ್ನೂ ಕಟ್ಟಿಸಿಕೊಂಡಿಲ್ಲ. ವಾಸ್ತವ ಸಂಗತಿಯನ್ನು ಮುಚ್ಚಿಟ್ಟು, ತಿರುಚಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ಈ ಅಪಪ್ರಚಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.