ADVERTISEMENT

ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 16:19 IST
Last Updated 11 ಜುಲೈ 2023, 16:19 IST
ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಬೆಂಗಳೂರು ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಬೆಂಗಳೂರು ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಕೆಂಗೇರಿ: ಶೈಕ್ಷಣಿಕ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂದೆ ಸೇರಿದ 52 ವಿಭಾಗದ ವಿದ್ಯಾರ್ಥಿಗಳು ಇಂಗ್ಲಿಷ್‌ ಕಲಿಕಾ ತರಗತಿ, ಕಂಪ್ಯೂಟರ್ ಲ್ಯಾಬ್, ಕೌಶಲ ಅಭಿವೃದ್ಧಿ ತರಬೇತಿ, ಕ್ರೀಡಾಂಗಣ, ಗ್ರಂಥಾಲಯ, ಹಾಸ್ಟೆಲ್ ಉನ್ನತೀಕರಣ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಂತಹ ಅತ್ಯವಶ್ಯಕ ಮೂಲ ಸೌಕರ್ಯಗಳು ಭರವಸೆಯಾಗಿಯೇ ಉಳಿದಿವೆ. ಘೋಷಣೆಗಳಿಗೆ ಸೀ‌ಮಿತವಾಗಿರುವ ಆಶ್ವಾಸನೆಗಳು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಹಲವು ಬಾರಿ ಮನವಿ ಮಾಡಿದ್ದರೂ ಆಡಳಿತ ವರ್ಗದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನೆ ನೇತೃತ್ವ ವಹಿಸಿದ್ದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಗೌರವಾಧ್ಯಕ್ಷ ಲೋಕೇಶ್ ರಾಮ್ ಮಾತನಾಡಿ, ನ್ಯಾಕ್ ಸಂಸ್ಥೆಯು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಎ ++’ ಶ್ರೇಣಿ ನೀಡಿದ್ದರೂ ಹಲವಾರು ಕೊರತೆಗಳು ವಿದ್ಯಾರ್ಥಿಗಳನ್ನು ಬಾಧಿಸುತ್ತಿದೆ ಎಂದು ದೂರಿದರು.

ಸಂಶೋಧನಾ ವಿದ್ಯಾರ್ಥಿಗಳಿಗೆ ದೊರೆಯಬೇಕಿದ್ದ ಲ್ಯಾಪ್‌ಟಾಪ್, ಕ್ಯಾಮರಾ ಸವಲತ್ತು ಇನ್ನೂ ಕೈ ಸೇರಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಪುಸ್ತಕ ಮಾಲಿಕೆ ಸೌಲಭ್ಯವೂ ಕೇವಲ ಹೇಳಿಕೆಗೆ ಸೀಮಿತವಾಗಿದೆ. ವಿದ್ಯಾರ್ಥಿಗಳ ಕುಂದು ಕೊರತೆ ಬಗ್ಗೆ ಆಡಳಿತಾಧಿಕಾರಿಗಳು ಕವಡೆ ಕಾಸಿನಷ್ಟು ಗಮನ ನೀಡುತ್ತಿಲ್ಲ ಎಂದು ದೂರಿದರು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ಹಾಗೂ ಕ್ಯಾಮರಾ ಸೌಲಭ್ಯ ವಿಸ್ತರಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಕುಲಪತಿ ಡಾ. ಎಸ್‌.ಎಂ. ಜಯಕರ್, ’ವಿದ್ಯಾರ್ಥಿಗಳ ಮನವಿ ಪರಿಶೀಲಿಸಲಾಗುವುದು. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ತದನಂತರ ವಿದ್ಯಾರ್ಥಿ ಒಕ್ಕೂಟದ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.