ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ಗಲಭೆ ಸೃಷ್ಟಿಯಾಗಲು ನಾಲ್ವರ ಪ್ರಚೋದನೆಯೇ ಕಾರಣ ಎಂಬುದು ಪೊಲೀಸರ ಸದ್ಯದ ತನಿಖೆಯಿಂದ ಗೊತ್ತಾಗಿದೆ.
‘ಎಸ್‌ಡಿಪಿಐ ಪಕ್ಷದ ಮುಜಾಮ್ಮಿಲ್ ಪಾಷ, ಶಿವಾಜಿನಗರದ ಸೈಯದ್ ಅಜ್ನಾನ್, ಸ್ಥಳೀಯ ಮುಖಂಡರಾದ ವಾಜೀದ್ ಹಾಗೂ ಗ್ಯಾಸ್ ಜಾಫರ್ ಎಂಬುವರೇ ಗುಂಪು ಕಟ್ಟಿಕೊಂಡು ಠಾಣೆಗೆ ಬಂದಿದ್ದರು. ಎಫ್‌ಐಆರ್ ದಾಖಲಾದ ನಂತರವೂ ನಾಲ್ವರು ಠಾಣೆಯಿಂದ ಹೊರಬಂದು ಜನರನ್ನು ಪ್ರಚೋದಿಸಿ ಗಲಾಟೆ ಆರಂಭಿಸಿದರು. ಮೊಬೈಲ್‌ನಲ್ಲಿ ಕರೆ ಮಾಡಿ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ ಸಾವಿರಾರು ಜನರನ್ನು ಸ್ಥಳಕ್ಕೆ ಕರೆಸಿಕೊಂಡು ಗಲಭೆ ಸೃಷ್ಟಿಯಾಗುವ ವಾತಾವರಣ ನಿರ್ಮಿಸಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಅಜ್ನಾನ್, ವಾಜೀದ್ ಹಾಗೂ ಗ್ಯಾಸ್ ಜಾಫರ್, ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರು ಎಂಬುದಕ್ಕೆ ಪುರಾವೆಗಳು ಸಿಕ್ಕಿಲ್ಲ. ಅವರ ಜೊತೆಯಲ್ಲಿ ಸೇರಿ ಮುಜಾಮ್ಮಿಲ್ ಪಾಷ ಈ ಗಲಭೆ ಸೃಷ್ಟಿಸಿದ್ದ’ ಎಂದೂ ತಿಳಿಸಿದರು.
‘ಕಾವಲ್‌ಭೈರ ಸಂದ್ರ, ಡಿ.ಜೆ.ಹಳ್ಳಿ ಠಾಣೆ ಹಾಗೂ ಕೆ.ಜಿ.ಹಳ್ಳಿ ಠಾಣೆಗಳು ಪರಸ್ಪರ ಒಂದೂವರೆ ಕಿ.ಮೀ. ದೂರದಲ್ಲಿವೆ. ಮೂರು ಕಡೆಯೂ ಏಕಕಾಲದಲ್ಲಿ ಗಲಾಟೆ ಶುರುವಾಗಿತ್ತು. ಇದನ್ನು ನೋಡಿದರೆ, ಇದೊಂದು ಪೂರ್ವ ನಿಯೋಜಿತ ಕೃತ್ಯವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದರು.
‘ಗೋರಿಪಾಳ್ಯ, ಶಿವಾಜಿನಗರದಿಂದಲೂ ಯುವಕರು ಘಟನಾ ಸ್ಥಳಕ್ಕೆ ಬಂದಿದ್ದರು ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಈ ಸಂಬಂಧ ಕೆಲವರು ಸ್ವಯಂ ಹೇಳಿಕೆಯನ್ನೂ ನೀಡಿದ್ದಾರೆ. ಗಲಭೆ ಹಿಂದೆ ಪ್ರಭಾವಿಗಳ ಕೈವಾಡವಿರುವ ಹಾಗೂ ಯುವಕರಿಗೆ ಹಣ ಕೊಟ್ಟು ಗಲಭೆ ಮಾಡಿಸಿರುವ ಸಾಧ್ಯತೆಯೂ ಇದೆ. ಹಣ ಕೊಡುತ್ತಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ’ ಎಂದೂ ಹೇಳಿದರು.
ಮೊಬೈಲ್ ಜಾಲಾಡುತ್ತಿರುವ ಸಿಸಿಬಿ
‘ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಆರೋಪಿಗಳು ಠಾಣೆಗೆ ಬಂದಿದ್ದ ಹಾಗೂ ಅದಕ್ಕೂ ಮುನ್ನ ಹಲವೆಡೆ ಸಭೆ ನಡೆಸಿರುವ ಮಾಹಿತಿ ಇದೆ. ಹೀಗಾಗಿ, ಆರೋಪಿಗಳ ಮೊಬೈಲ್ ಕರೆಗಳ ವಿವರವನ್ನು ಸಿಸಿಬಿ ತಾಂತ್ರಿಕ ತಂಡ ಪರಿಶೀಲನೆ ನಡೆಸುತ್ತಿದೆ’ ಎಂದೂ ಅಧಿಕಾರಿ ವಿವರಿಸಿದರು.
ಡ್ರಗ್ಸ್ ಅಮಲಿನಲ್ಲಿ ಕೃತ್ಯ:‘ಕೆಲ ಯುವಕರು, ಡ್ರಗ್ಸ್ ತೆಗೆದುಕೊಂಡು ಅದರ ಅಮಲಿನಲ್ಲಿ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಬಂಧಿತ ಆರೋಪಿಗಳ ವೈದ್ಯಕೀಯ ವರದಿ ಬಂದ ನಂತರವೇ ಈ ಬಗ್ಗೆ ನಿಖರವಾಗಿ ತಿಳಿಯಲಿದೆ’ ಎಂದೂ ಅಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.