ADVERTISEMENT

50 ತುಂಡಾಗಿ ಕತ್ತರಿಸಿ ಹತ್ಯೆ | ಆರೋಪಿ ಸುಳಿವು: ಹೊರ ರಾಜ್ಯಕ್ಕೆ ಪೊಲೀಸ್ ತಂಡ

ಮಹಾಲಕ್ಷ್ಮೀ ಕೊಲೆ ಪ್ರಕರಣ: ಎಫ್‌ಎಸ್‌ಎಲ್‌ಗೆ ಫ್ರಿಡ್ಜ್ ರವಾನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 18:59 IST
Last Updated 23 ಸೆಪ್ಟೆಂಬರ್ 2024, 18:59 IST
ಮಹಾಲಕ್ಷ್ಮೀ
ಮಹಾಲಕ್ಷ್ಮೀ   

ಬೆಂಗಳೂರು: ‘ವೈಯಾಲಿಕಾವಲ್‌ನ ಮಹಾಲಕ್ಷ್ಮೀ ಕೊಲೆ ಪ್ರಕರಣದ ಆರೋಪಿ ಬಗ್ಗೆ ಸುಳಿವು ಲಭ್ಯವಾಗಿದೆ. ಆತನನ್ನು ಬಂಧಿಸಿ ಕರೆತರಲು ರಾಜ್ಯ ಪೊಲೀಸರ ತಂಡ ಹೊರ ರಾಜ್ಯಕ್ಕೆ ತೆರಳಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.

‘ಕೆಲ ವರ್ಷಗಳಿಂದ ಆರೋಪಿ ಬೆಂಗಳೂರಿನಲ್ಲಿ ನೆಲೆಸಿದ್ದ. ಕೃತ್ಯದ ಬಳಿಕ ಹೊರ ರಾಜ್ಯಕ್ಕೆ ತೆರಳಿದ್ದಾನೆ. ಆತನ ಪತ್ತೆ ಕಾರ್ಯ ಮುಂದುವರಿದಿದ್ದು, ಬಂಧನದ ಬಳಿಕ ಮತ್ತಷ್ಟು ಸತ್ಯಗಳು ಹೊರ ಬರುತ್ತವೆ. ಮಹಿಳೆಯ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಕೈ ಸೇರಿಲ್ಲ. ತನಿಖೆ ಪಗ್ರತಿಯಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.

ಕೃತ್ಯದ ಬಳಿಕ ಆರೋಪಿ ಒಡಿಶಾಕ್ಕೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ತನಿಖಾ ತಂಡಗಳು ಅಲ್ಲಿಗೆ ತೆರಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಮೊಬೈಲ್‌ ವಶ: ಮಹಾಲಕ್ಷ್ಮೀ ನಿವಾಸದಲ್ಲಿಯೇ ಅವರ ಮೊಬೈಲ್​ ಪತ್ತೆಯಾಗಿದ್ದು, ಸ್ವಿಚ್ಡ್‌ ಆಫ್ ಆಗಿದೆ. ಮೊಬೈಲ್​ ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಇಟ್ಟಿದ್ದ ಫ್ರಿಡ್ಜ್‌ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆಯ ಭಾಗವಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಸೂಟ್‌ಕೇಸ್‌ನಲ್ಲಿ ತುಂಬಲು ಯತ್ನ:

ಮಹಿಳೆಯನ್ನು ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಲು ಆರೋಪಿ ಯತ್ನಿಸಿದ್ದಾನೆ. ಆದರೆ, ಸೂಟ್‌ಕೇಸ್​ನಲ್ಲಿ ತುಂಬಲಾಗದೇ, ಫ್ರಿಡ್ಜ್​ನಲ್ಲಿಟ್ಟು ಪರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹದ ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿ ಆರೋಪಿ ಪರಾರಿಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಆತನ ಪತ್ತೆಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ ರಚಿಸಲಾಗಿರುವ ಆರು ವಿಶೇಷ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ಘಟನೆ ನಡೆದ ಮನೆಯ ಸುತ್ತಮುತ್ತಲ ಪ್ರದೇಶಗಳ ನೂರಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುತ್ತಿದೆ.

ಮಹಾಲಕ್ಷ್ಮೀ ಮನೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರೂ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್​ಎಸ್​​ಎಲ್​) ತಜ್ಞರಿಗೆ ರಕ್ತದ ಕಲೆಗಳು ಮತ್ತು ದೇಹ ತುಂಡರಿಸಿದ ಸ್ಥಳದ ಗುರುತುಗಳು ಪತ್ತೆಯಾಗಿಲ್ಲ. ಗುರುತು ಸಿಗದಂತೆ ಮನೆಯನ್ನು ಸ್ವಚ್ಛ ಮಾಡಿದ್ದು, ಆ್ಯಕ್ಸೆಲ್ ಬ್ಲೇಡ್‌, ಮಚ್ಚಿನಿಂದ ದೇಹವನ್ನು ಕತ್ತರಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸ್ನೇಹಿತ ಅಶ್ರಫ್‌ ವಿಚಾರಣೆ: 

ಕೊಲೆಯಾದ ಮಹಿಳೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಕಾರಣ ಮೆನ್ಸ್‌ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮೀಯ ಸ್ನೇಹಿತ ಅಶ್ರಫ್ ಎಂಬವರನ್ನು ಕರೆಸಿ, ಪೊಲೀಸರು ವಿಚಾರಣೆ ಮಾಡಿದ್ದಾರೆ. ‌

‘ಮಹಾಲಕ್ಷ್ಮೀ ಜೊತೆ ಸಂಪರ್ಕ ಇದ್ದಿದ್ದು ನಿಜ. ಆದರೆ ಕೊಲೆಗೂ, ನನಗೂ ಸಂಬಂಧವಿಲ್ಲ. ಆರು ತಿಂಗಳಿನಿಂದ ಆಕೆಯ ಜತೆ ಮಾತನಾಡಿಲ್ಲ. ನಾವಿಬ್ಬರೂ ಸಲುಗೆಯಿಂದ ಇದ್ದ ವಿಚಾರ ಕುಟುಂಬಸ್ಥರಿಗೆ ಗೊತ್ತಾದ ಬಳಿಕ ಜಗಳವಾಯಿತು. ನಂತರ ಆಕೆಯ ಸಹವಾಸಕ್ಕೆ ನಾನು ಹೋಗಿಲ್ಲ ಎಂದು ವಿಚಾರಣೆ ವೇಳೆ ಅಶ್ರಫ್ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ, ಪೊಲೀಸರು ಅಶ್ರಫ್ ಮೊಬೈಲ್​ ಪರಿಶೀಲಿಸಿದಾಗ, ಇಬ್ಬರ ಮಧ್ಯೆ ಆರು ತಿಂಗಳಿಂದ ಸಂಪರ್ಕ ಇಲ್ಲದಿರುವುದು ಗೊತ್ತಾಗಿದೆ.

ಯಾರ ಮೇಲೂ ಸಂಶಯವಿಲ್ಲ: ಹೇಮಂತ್ ದಾಸ್ ‘ಹತ್ತು ತಿಂಗಳಿನಿಂದ ಪತ್ನಿಯಿಂದ ದೂರವಾಗಿ ಪ್ರತ್ಯೇಕವಾಗಿ ನೆಲಮಂಗಲದಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಜತೆ ವಾಸವಿದ್ದೇನೆ. ಪತ್ನಿ ಹಾಗೂ ನನ್ನ ಮಧ್ಯೆ ಜಗಳವಾಗಿತ್ತು. ಆಗ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಇಬ್ಬರನ್ನೂ ಕರೆಯಿಸಿ ವಿಚಾರಣೆ ನಡೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಬಳಿಕವೂ ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ’ ಎಂದು ಮಹಾಲಕ್ಷ್ಮೀ ಅವರ ಪತಿ ಹೇಮಂತ್ ದಾಸ್ ತಿಳಿಸಿದರು. ‘ಪತ್ನಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇನೆ. ನನಗೆ ಯಾರ ಮೇಲೂ ಸಂಶಯ ಇಲ್ಲ. ಆಕೆಗೆ ಯಾರ ಜೊತೆಗೆ ಒಡನಾಟವಿತ್ತು ಎಂಬ ಬಗ್ಗೆ ಹಾಗೂ ಆಕೆ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.