ADVERTISEMENT

ಈಜಿಪುರ ಮೇಲ್ಸೇತುವೆ: ‘ಬಾಡಿಗೆ’ ಕದನದಿಂದ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 2:25 IST
Last Updated 30 ಆಗಸ್ಟ್ 2024, 2:25 IST
ಈಜಿಪುರ ಮೇಲ್ಸೇತುವೆ ಕಾಮಗಾರಿಯಲ್ಲಿ ಎಲಿಮೆಂಟ್‌ ಅಳವಡಿಸಲಾಗುತ್ತಿದೆ
ಈಜಿಪುರ ಮೇಲ್ಸೇತುವೆ ಕಾಮಗಾರಿಯಲ್ಲಿ ಎಲಿಮೆಂಟ್‌ ಅಳವಡಿಸಲಾಗುತ್ತಿದೆ   

ಬೆಂಗಳೂರು: ಏಳು ವರ್ಷದಿಂದ ಸಮಸ್ಯೆಯ ಸುಳಿಯಲ್ಲೇ ಇರುವ ಈಜಿಪುರ ‘ಎಲಿವೇಟಡ್‌ ಕಾರಿಡಾರ್‌’ ಕಾಮಗಾರಿ ಮತ್ತೆ ವಿಳಂಬವಾಗುತ್ತಿದೆ. ‘ಬಾಡಿಗೆ’ ಕೊಡುವ ವಿಚಾರದಲ್ಲಿ ಬಿಬಿಎಂಪಿ ಎಂಜಿನಿಯರ್‌ಗಳು ಹಾಗೂ ಹೊಸ ಗುತ್ತಿಗೆದಾರರ ಮಧ್ಯೆ ತಿಕ್ಕಾಟ ನಡೆದಿರುವುದು ಕಾಮಗಾರಿಯನ್ನು ಮತ್ತಷ್ಟು ನಿಧಾನಗೊಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 22ರಂದು ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ‘ವೇಗವಾಗಿ ಕಾಮಗಾರಿ ನಡೆಸಿ, ಇಲ್ಲದಿದ್ದರೆ ಗುತ್ತಿಗೆದಾರರನ್ನು ಬದಲಿಸಿ’ ಎಂದು ಕಟ್ಟಪ್ಪಣೆ ಮಾಡಿದ್ದರು. ಆನಂತರ, ಬಿಬಿಎಂಪಿ ಎಂಜಿನಿಯರ್‌ಗಳು, ಗುತ್ತಿಗೆದಾರರು ಕೆಲಸ ಮಾಡಲು ಆರಂಭಿಸಿದರು.

ನಂತರದ ದಿನಗಳಲ್ಲಿ ‘ಕಾಸ್ಟಿಂಗ್‌ ಯಾರ್ಡ್‌’ ಸಮಸ್ಯೆ ಹೆಚ್ಚಾಗಿ, ಪರಸ್ಪರ ದೋಷಾರೋಪದಲ್ಲೇ ತೊಡಗಿದ್ದಾರೆ. ಈ ಹಿಂದಿನ ಗುತ್ತಿಗೆದಾರರಾದ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ‘ಕಾಸ್ಟಿಂಗ್‌ ಯಾರ್ಡ್‌’ನಲ್ಲಿ ಎಲಿಮೆಂಟ್‌ಗಳನ್ನು ನಿರ್ಮಿಸಿತ್ತು. ಅದನ್ನು ಬಳಸಲು ಹೊಸ ಗುತ್ತಿಗೆದಾರರಾದ ಬಿಎಸ್‌ಸಿಪಿಎಲ್‌ ಸಂಸ್ಥೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಹಿಂದಿನ ಗುತ್ತಿಗೆದಾರರು ‘ಕಾಸ್ಟಿಂಗ್‌ ಯಾರ್ಡ್’ಗೆ ಬಾಡಿಗೆ ನೀಡಿರಲಿಲ್ಲ. ₹1.92 ಕೋಟಿ ಬಾಕಿ ಇದ್ದು, ಇದನ್ನು ಬಿಬಿಎಂಪಿಯವರು ಪಾವತಿಸಲಿ ಎಂಬುದು ಹೊಸ ಗುತ್ತಿಗೆದಾರರ ವಾದ. ಹೊಸ ಗುತ್ತಿಗೆದಾರರದ್ದೇ ಬಾಡಿಗೆ ನೀಡುವ ಜವಾಬ್ದಾರಿ ಎಂಬುದು ಪಾಲಿಕೆ ಅಧಿಕಾರಿಗಳ ಪ್ರತಿವಾದ. ಇಬ್ಬರೂ ಪರಸ್ಪರ ಪತ್ರಗಳಲ್ಲಿ ಇಂದಿಗೂ ಗುದ್ದಾಟ ನಡೆಸುತ್ತಿದ್ದಾರೆ.

ADVERTISEMENT

‘ಗುತ್ತಿಗೆದಾರರು ಆರಂಭದಿಂದಲೇ ಕಾಮಗಾರಿಯನ್ನು ವೇಗವಾಗಿ ನಡೆಸಿದ್ದರೆ ಶೇ 50ರಷ್ಟು ಕೆಲಸ ಈ ವೇಳೆಗೆ ಮುಗಿಯಬೇಕಿತ್ತು. ಈವರೆಗೆ ಶೇ 10ರಷ್ಟು ಕೆಲಸ ಮಾತ್ರ ಮುಗಿದಿದೆ. ಮುಂಗಡ  ಹಣ ನೀಡುವುದು ಸ್ವಲ್ಪ ತಡವಾಗಿತ್ತು. ನಂತರ ಅವರು ನೀಡಿರುವ ಇನ್ನೊಂದು ಬಿಲ್‌ ಪಾವತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಬಿಬಿಎಂಪಿ ಕೇಂದ್ರ ಯೋಜನಾ ವಿಭಾಗದ ಎಂಜಿನಿಯರ್‌ ತಿಳಿಸಿದರು.

‘ನಾಲ್ಕು ವರ್ಷ ನಿಂತಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಮುಂದುವರಿಸುವ ಬಗ್ಗೆ ತಾಂತ್ರಿಕ ಸಲಹೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯಿಂದ ಪಡೆದುಕೊಳ್ಳಲು ಸೂಚಿಸಲಾಗಿತ್ತು. ಅದರ ವೆಚ್ಚವನ್ನು ಗುತ್ತಿಗೆದಾರರು ಪಾವತಿಸಿದ್ದರು. ಈ ವರದಿಯನ್ನು ಬಿಬಿಎಂಪಿ ಮೇ 27ರಂದು ನೀಡಿದೆ. ವರದಿ ನಮ್ಮ ಕೈಸೇರಿದ ನಂತರವಷ್ಟೇ ನಾವು ಕೆಲಸ ಮಾಡಲು ಸಾಧ್ಯವಾಯಿತು. ಅದಕ್ಕೂ ಮೊದಲಿನ ಆರು ತಿಂಗಳು ಏನೂ ಕೆಲಸ ಮಾಡಲು ಅವಕಾಶ ಇರಲಿಲ್ಲ. ಅಲ್ಲದೆ, ಮುಂಗಡ ಬಿಟ್ಟರೆ, ನಂತರದ ಬಿಲ್‌ಗಳನ್ನು ಪಾವತಿ ಮಾಡಿಲ್ಲ’ ಎಂದು ಗುತ್ತಿಗೆದಾರರು ಮಾಹಿತಿ ನೀಡಿದರು.

‘ಕೋಲ್ಕತ್ತಗೆ ಹೋಗಿ ಬೇರಿಂಗ್‌ಗಳನ್ನು ತಂದಿದ್ದೇವೆ. ಅದನ್ನು ಬಿಬಿಎಂಪಿ ಎಂಜಿನಿಯರ್‌ಗಳೇ  ಪರಿಶೀಲಿಸಿ, ಸಮ್ಮತಿ ನೀಡಿದ್ದರು. ಅದಕ್ಕೆ ಪಾವತಿಸಲಾಗಿರುವ ಶೇ 4ರಷ್ಟು ಮೊತ್ತವನ್ನು ಬಿಲ್‌ನಲ್ಲಿ ದಾಖಲಿಸಲಾಗಿದೆ. ಅದನ್ನು ಕೊಡುವುದಿಲ್ಲ ಎನ್ನುತ್ತಿದ್ದಾರೆ’ ಎಂದು ಗುತ್ತಿಗೆದಾರರು ದೂರಿದರು.

‘ಕಾಸ್ಟಿಂಗ್‌ ಯಾರ್ಡ್‌ಗೆ ನೀಡಬೇಕಾಗಿದ್ದ ಬಾಡಿಗೆಯನ್ನು ಗುತ್ತಿಗೆದಾರರು ಚೆಕ್ ಮೂಲಕ  ಇದೀಗ ಪಾವತಿಸಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಅವರೂ ನಮ್ಮೊಂದಿಗೆ ಸಭೆ ನಡೆಸಿ, ಸಹಕಾರ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ನಾವೆಲ್ಲ ನೆರವು ನೀಡಿದ್ದೇವೆ’ ಎಂದು ಕಾಸ್ಟಿಂಗ್‌ ಯಾರ್ಡ್‌ ಸ್ಥಳದ ಮಾಲೀಕ ವಿಜಯಬಾಬು ರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಲಿಂಗಾರೆಡ್ಡಿ
ವೇಗ ನೀಡಲು ತಾಕೀತು: ರಾಮಲಿಂಗಾರೆಡ್ಡಿ
‘ಕೆಲವು ಅಡಚಣೆಗಳಿಂದ ಈಜಿಪುರ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿದೆ. ಕಾಮಗಾರಿಗೆ ವೇಗ ನೀಡುವಂತೆ ಬಿಬಿಎಂಪಿ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮೇಲ್ಸೇತುವೆ ಕಾಮಗಾರಿ ನಿಗದಿಯಾದ ಸಮಯಕ್ಕಿಂತ ಕೆಲವು ತಿಂಗಳು ವಿಳಂಬವಾಗಬಹುದು. ಆದರೆ ಇನ್ನು ಮುಂದೆ ಯಾವುದೇ ರೀತಿಯಲ್ಲೂ ನಿಧಾನವಾಗಬಾರದು ಎಂದು ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಬಿಬಿಎಂಪಿ ಮುಖ್ಯ ಆಯುಕ್ತರ ಮುಂದೆಯೇ ಸೂಚನೆ ನೀಡಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.