ADVERTISEMENT

ಬೆಂಗಳೂರು: ಪರಭಾಷಿಕರಿಗೆ ಕನ್ನಡ ಕಲಿಸುತ್ತಿರುವ ‘ಆಟೊ ಕನ್ನಡಿಗ’ ಅಜ್ಜು ಸುಲ್ತಾನ್‌

500 ಆಟೊಗಳಿಗೆ ‘‘ಲರ್ನ್‌ ಕನ್ನಡ ವಿತ್‌ ಆಟೊ ಕನ್ನಡಿಗ’ ಫಲಕ’ ಅಳವಡಿಸಿದ ಅಜ್ಜು ಸುಲ್ತಾನ್‌

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 0:20 IST
Last Updated 27 ಅಕ್ಟೋಬರ್ 2024, 0:20 IST
ಅಜ್ಜು ಸುಲ್ತಾನ್‌
ಅಜ್ಜು ಸುಲ್ತಾನ್‌   

ಬೆಂಗಳೂರು: ಆಟೊದಲ್ಲಿ ಸಂಚರಿಸುವ ಪರಭಾಷಿಕರಿಗೆ ‘ಆಟೊ ಕನ್ನಡಿಗ’ ಅಜ್ಜು ಸುಲ್ತಾನ್‌ ಕನ್ನಡ ಕಲಿಸುತ್ತಿದ್ದಾರೆ. ಅದಕ್ಕಾಗಿ ಕನ್ನಡವನ್ನು ಇಂಗ್ಲಿಷ್‌ನಲ್ಲಿ ಬರೆದ ಫಲಕಗಳನ್ನು ಆಟೊಗಳಲ್ಲಿ ಅಳವಡಿಸುತ್ತಿದ್ದಾರೆ.

ಆಟೊ ಚಾಲಕನೊಂದಿಗೆ ಮಾತನಾಡಲು ಎಷ್ಟು ವಾಕ್ಯಗಳು ಬೇಕೋ ಅಷ್ಟನ್ನು ಇಂಗ್ಲಿಷ್‌ನಲ್ಲಿ ಮುದ್ರಿಸಿ ಲ್ಯಾಮಿನೇಟ್‌ ಮಾಡಿ ಪ್ರಯಾಣಿಕರಿಗೆ ಕಾಣುವ ಹಾಗೆ ಆಟೊದಲ್ಲಿ ಅಳವಡಿಸಿದ್ದಾರೆ. ‘Namaskara sir’ ನಿಂದ ಆರಂಭವಾಗಿ 14 ಕನ್ನಡ ವಾಕ್ಯಗಳು ಮತ್ತು ಅದರ ಇಂಗ್ಲಿಷ್‌ ಅರ್ಥಗಳು ಅದರಲ್ಲಿವೆ.

ಆಟೊ ಚಾಲಕರ ಕಣ್ಮಣಿ, ನಟ ಶಂಕರ್‌ನಾಗ್‌ ಅವರ ಫೋಟೊ ಈ ಫಲಕದಲ್ಲಿದೆ. ಬೆಂಬಲ ನೀಡಿದ ಸಂಘಟನೆಗಳ ಹೆಸರನ್ನೂ ದಾಖಲಿಸಿದ್ದಾರೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಯೂಟ್ಯೂಬ್‌ಗಳ ವಿವರಗಳು ಕೂಡ ಅದರಲ್ಲಿವೆ. ಇನ್‌ಸೈಡ್‌ ಆಟೊ, ಔಟ್‌ಸೈಡ್‌ ಆಟೊ ಎಂದು ಎರಡು ಕ್ಯೂಆರ್‌ ಕೋಡ್‌ಗಳಿವೆ. ಅದನ್ನು ಸ್ಕ್ಯಾನ್‌ ಮಾಡಿದರೆ ಆಟೊದಲ್ಲಿ ಸಂಚರಿಸುವಾಗ, ಆಟೊದ ಹೊರಗೆ ಇರುವಾಗ ಬಳಸುವ ಇನ್ನಷ್ಟು ಪದಗಳು ಸಿಗುವಂತೆ ಮಾಡಿದ್ದಾರೆ.

ADVERTISEMENT

ಬಾಗಲಕೋಟೆಯ ಅಜ್ಮಲ್‌ ಹುಸೇನ್‌ ಅವರು 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಆಟೊ ಚಾಲನಾ ವೃತ್ತಿಗೆ ಇಳಿದಿದ್ದರು. ಅವರನ್ನು ಅವರ ಗೆಳೆಯರು ಪ್ರೀತಿಯಿಂದ ‘ಅಜ್ಜು ಸುಲ್ತಾನ್‌’ ಎಂದು ಹೆಸರಿಟ್ಟಿದ್ದರು. 7ನೇ ತರಗತಿಯಷ್ಟೇ ವಿದ್ಯಾಭ್ಯಾಸ ಮಾಡಿದ್ದರೂ ಆಧುನಿಕ ತಂತ್ರಜ್ಞಾನಗಳ ಬಗೆಗೆ ಭಾರಿ ಕುತೂಹಲ ಹೊಂದಿರುವ ಅಜ್ಜು, ಇನ್‌ಸ್ಟಾಗ್ರಾಂಗಳಲ್ಲಿ ‘ಪ್ರಮೋಷನ್‌’ ಮಾಡುವುದರಲ್ಲಿಯೂ ತೊಡಗಿಸಿಕೊಂಡಿದ್ದಾರೆ.

‘ಎರಡು ತಿಂಗಳ ಹಿಂದೆ ಕನ್ನಡ ಭಾಷೆಯ ಬಗ್ಗೆ ಆಟೊ ಚಾಲಕರು ಮತ್ತು ಕನ್ನಡೇತರ ಪ್ರಯಾಣಿಕರ ನಡುವೆ ವಿವಾದ, ಘರ್ಷಣೆ ಉಂಟಾದಾಗ ಏನು ವಿವಾದ ಎಂದು ನೋಡದೇ ಆಟೊ ಚಾಲಕರನ್ನು ನಕಾರಾತ್ಮಕವಾಗಿ ಬಿಂಬಿಸಿದರು. ಆಗ ಪ್ರಯಾಣಿಕರಿಗೆ ಕನ್ನಡ ಕಲಿಸುವ ಬಗ್ಗೆ ಯೋಚನೆ ನನ್ನಲ್ಲಿ ಹುಟ್ಟಿಕೊಂಡಿತು’ ಎಂದು ಅಜ್ಜು ಸುಲ್ತಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ದಿನದ ಸುಮಾರು 20 ಟ್ರಿಪ್‌ನಲ್ಲಿ 16 ಕನ್ನಡೇತರರೇ ಇರುತ್ತಿದ್ದರು. ಕನ್ನಡ ಕಲಿಯುವ ಆಸಕ್ತಿ ಇದೆಯೇ ಎಂದು ಅವರನ್ನು ಕೇಳುತ್ತಿದ್ದೆ. ‘ಆಸಕ್ತಿ ಇದೆ, ಆದರೆ ಸಮಯ ಇಲ್ಲ’ ಎಂದು ಉತ್ತರಿಸುತ್ತಿದ್ದರು. ‘10 ನಿಮಿಷದ ಪ್ರಯಾಣದಲ್ಲಿ ಚಾಲಕರನ್ನು ಮಾತನಾಡುವಷ್ಟು ಕನ್ನಡ ಕಲಿಸಿದರೆ ಕಲಿಯುತ್ತೀರಾ’ ಎಂದು ಕೇಳುತ್ತಿದ್ದೆ. ಎಲ್ಲರೂ ಅದಕ್ಕೆ ಒಪ್ಪಿಗೆ ಸೂಚಿಸುತ್ತಿದ್ದರು. ಅವರಿಗೆ ಅಗತ್ಯ ಇರುವ ಪದಗಳನ್ನು ಅವರಿಂದಲೇ ಕೇಳಿ ಬರೆದುಕೊಂಡು ಇಡುತ್ತಿದ್ದೆ. ಬೇರೆ ಬೇರೆ ಸಮಯದಲ್ಲಿ ಪ್ರಯಾಣಿಕರು ನೀಡಿದ ವಾಕ್ಯಗಳನ್ನೇ ಬರೆಸಿ ‘ಲರ್ನ್‌ ಕನ್ನಡ ವಿತ್‌ ಆಟೊ ಕನ್ನಡಿಗ’ ಫಲಕ ಮಾಡಿದೆ’ ಎಂದು ಅನುಭವ ಹಂಚಿಕೊಂಡರು.

‘ಒಂದು ಫಲಕಕ್ಕೆ ₹ 24 ವೆಚ್ಚವಾಗಿದೆ. ಈಗಾಗಲೇ 500 ಆಟೊಗಳಿಗೆ ಅಳವಡಿಸಿದ್ದೇನೆ. ಫಲಕ ಅಳವಡಿಸುವ ಕಾರ್ಯಕ್ಕೆ ಬೆಂಗಳೂರು ಆಟೊ ಸೇನೆ, ಸ್ನೇಹಜೀವಿ ಆಟೊ ಸಂಘ, ಡಾ.ಬಿ.ಆರ್. ಅಂಬೇಡ್ಕರ್ ಆಟೊ ಚಾಲಕರ ಸಂಘಟನೆ ಸೇರಿದಂತೆ ಕೆಲವು ಆಟೊ ಸಂಘಟನೆಗಳು ಸಹಕಾರ ನೀಡಿವೆ. ಜೊತೆಗೆ ನನ್ನ ಗೆಳೆಯರು ಕೂಡ ಫಲಕ ಒಯ್ಯಲು, ಅಳವಡಿಸಲು ಸಹಕರಿಸಿದ್ದಾರೆ. ಫಲಕ ತಯಾರಿಯ ವೆಚ್ಚವನ್ನು ಇಲ್ಲಿವರೆಗೆ ನಾನೇ ಭರಿಸಿದ್ದೇನೆ. ಇನ್‌ಸ್ಟಾಗ್ರಾಂನಲ್ಲಿ ನಡೆಸುವ ‘ಪ್ರಮೋಷನ್‌’ಗಳಿಂದ ಬಂದ ಹಣವನ್ನು ಇದಕ್ಕೆ ಬಳಸಿದ್ದೇನೆ’ ಎಂದು ವಿವರಿಸಿದರು.

ಸಚಿವರಿಂದ ಶ್ಲಾಘನೆ

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಯಾವುದೇ ಭಾಷೆಯು ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ ಅಸ್ಮಿತೆ ಬಾಂಧವ್ಯ ಸಂಸ್ಕೃತಿ ಪರಂಪರೆ ವ್ಯಾಪಾರ ಎಲ್ಲದರಲ್ಲೂ ಭಾಷೆಯ ಪ್ರಭಾವ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಭಾಷೆ ಬಾಂಧವ್ಯವನ್ನು ಬೆಸೆಯುವುದಕ್ಕಿರುವುದೇ ಹೊರತು ಸಂಘರ್ಷಕ್ಕಿರುವುದಲ್ಲ. ಕರ್ನಾಟಕದಲ್ಲಿ ಇತ್ತೀಚಿಗೆ ಭಾಷೆಯ ಕಾರಣಕ್ಕೆ ಆಟೊ ಚಾಲಕರೊಂದಿಗೆ ಪರಭಾಷಿಕರ ಸಂಘರ್ಷದ ಘಟನೆಗಳು ನಡೆದಿದ್ದವು. ಇದನ್ನು ಗಮನದಲ್ಲಿರಿಸಿಕೊಂಡು ಆಟೊ ಚಾಲಕರೊಬ್ಬರು ತಂತ್ರಜ್ಞಾನವನ್ನು ಬಳಸಿ ಕನ್ನಡ ಕಲಿಕೆಯನ್ನು ಹಾಗೂ ಭಾಷಾ ಸಾಮರಸ್ಯವನ್ನು ಉತ್ತೇಜಿಸಲು ಕೈಗೊಂಡಿರುವ ಪ್ರಯತ್ನವು ಅಭಿನಂದನಾರ್ಹ. ಪರಭಾಷಿಕರಿಗೆ ಕನ್ನಡ ಕಲಿಸುವ ಈ ಪ್ರಯತ್ನವು ಸಣ್ಣದಾಗಿ ಕಂಡರೂ ಇದರ ಪರಿಣಾಮ ಆಗಾಧವಾಗಿರುತ್ತದೆ. ಕನ್ನಡದ ಸೇವೆ ಮಾಡುತ್ತಿರುವ ಆಟೋ ಕನ್ನಡಿಗನಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ. ಇವರಲ್ಲದೇ ಅನೇಕ ನೆಟ್ಟಿಗರು ಮೆಚ್ಚುಗೆಯ ನುಡಿಗಳನ್ನು ದಾಖಲಿಸಿದ್ದಾರೆ.

‘ಎಲ್ಲಡೆ ಕನ್ನಡ ಪಸರಿಸುವೆ’

‘ನನ್ನ ಶಕ್ತಿಗೆ ಅನುಗುಣವಾಗಿ ಕನ್ನಡಪರ ಕೆಲಸ ಮಾಡುತ್ತಿದ್ದೇನೆ. ಇಂದಿರಾನಗರದ ಆಟೊಗಳಿಗೆ ಫಲಕ ಅಳವಡಿಸುವ ಕಾರ್ಯ ಆಗಿದೆ. ನನ್ನ ಗೆಳೆಯರ ಕ್ಯಾಬ್‌ಗಳಿಗೆ ಫಲಕ ಅಳವಡಿಸುವ ಕಾರ್ಯವನ್ನೂ ಶುರು ಮಾಡಿದ್ದೇನೆ. ಮುಂದೆ ಬಸ್‌ ಹೋಟೆಲ್‌ ಅಂಗಡಿಗಳಲ್ಲಿಯೂ ಇಂಥ ಕೆಲಸವಾಗಬೇಕು. ಬೇರೆಯವರು ಕೈಜೋಡಿಸಿದರೆ ಈ ಕೆಲಸ ಸುಲಭವಾಗುತ್ತದೆ. ಕೈ ಜೋಡಿಸದೇ ಇದ್ದರೂ ನನ್ನ ಪ್ರಯತ್ನ ಮುಂದುವರಿಸುತ್ತೇನೆ. ‘ಆಟೊ ಕನ್ನಡಿಗ’ ಹೆಸರಿನಲ್ಲಿ ಜಾಲತಾಣಗಳಲ್ಲಿ ನನ್ನ ಕಾರ್ಯದ ವಿವರಗಳಿವೆ’ ಎಂದು ಅಜ್ಜು ಸುಲ್ತಾನ್‌ ತಿಳಿಸಿದರು.

ಪರಭಾಷಿಕರಿಗೆ ಕನ್ನಡ ಕಲಿಸುವ ಫಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.