ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ) ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಮುಂದಾಗಿದ್ದು, ತನ್ನ ವ್ಯಾಪ್ತಿಯಲ್ಲಿ 7,200 ಕಿ.ಮೀ. ಉದ್ದದ ಭೂಗತ ಕೇಬಲ್ ಅಳವಡಿಸುವ ಕಾರ್ಯ ಚುರುಕುಗೊಳಿಸಿದೆ.
ಕೇಂದ್ರ ಸರ್ಕಾರವು ಡಿ.31ರಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನೊಂದಿಗೆ (ಎಡಿಬಿ) ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಇದರನ್ವಯ ಬೆಸ್ಕಾಂಗೆ ಎಡಿಬಿಯಿಂದ ₹730 ಕೋಟಿ (100 ಮಿಲಿಯನ್ ಡಾಲರ್) ಸಾಲ ದೊರೆಯಲಿದೆ. ಈ ಸಾಲದ ಹಣದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಕಾರ್ಯವನ್ನು ಬೆಸ್ಕಾಂ ಕೈಗೆತ್ತಿಕೊಳ್ಳಲಿದೆ.
ಸರ್ಕಾರದ ಭದ್ರತೆಯೊಂದಿಗೆ ₹730 ಕೋಟಿ ಸಾಲ ನೀಡುತ್ತಿರುವ ಎಡಿಬಿ, ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ (ಸಾವರಿನ್ ಗ್ಯಾರಂಟಿ ಇಲ್ಲದೆ) ಬೆಸ್ಕಾಂಗೆ ₹657 ಕೋಟಿ (90 ಮಿಲಿಯನ್ ಡಾಲರ್) ನೀಡಲೂ ಒಪ್ಪಿಗೆ ಸೂಚಿಸಿದೆ.
‘ನಾಲ್ಕು ಹಂತಗಳಲ್ಲಿ ಭೂಗತ ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಾಲ್ಕನೇ ಹಂತ ಮಾತ್ರ ಬಾಕಿ ಉಳಿದಿದೆ. ಟೆಂಡರ್ ಕಾರ್ಯ ಮುಗಿದಿದ್ದು, ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗಲಿದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ರಾಜೇಶ್‌ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘11ಕೆವಿ ಸಾಮರ್ಥ್ಯದ ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ. ಒಂದೂವರೆ ತಿಂಗಳಲ್ಲಿ ಎಡಿಬಿಯಿಂದ ಮೊದಲ ಕಂತಿನ ಹಣ ಬರುವ ಸಾಧ್ಯತೆ ಇದೆ’ ಎಂದರು.
2,800 ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಕಾರ್ಯವೂ ನಡೆಯಲಿದ್ದು, ಸಂವಹನ ಜಾಲವನ್ನೂ ಅಭಿವೃದ್ಧಿಗೊಳಿಸಲಾಗುತ್ತದೆ. 7,200 ಕಿ.ಮೀ. ನಷ್ಟು ಭೂಗತ ಕೇಬಲ್ ಅಳವಡಿಸುವುದರಿಂದ ಶೇ 30ರಷ್ಟು ತಾಂತ್ರಿಕ ಮತ್ತು ವಾಣಿಜ್ಯ ನಷ್ಟ ಕಡಿಮೆಯಾಗಲಿದೆ.
ಸ್ವಯಂಚಾಲಿತ ವಿತರಣಾ ವ್ಯವಸ್ಥೆ (ಡಿಎಎಸ್) ಹೊಂದಿರುವ 1,700 ಘಟಕಗಳ ನಿರ್ಮಾಣವಾಗಲಿದೆ. ಇವುಗಳ ಮೂಲಕ ನಿಯಂತ್ರಣ ಕೊಠಡಿಗಳಿಂದಲೇ ವಿತರಣಾ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಆಪ್ಟಿಕಲ್ ಫೈಬರ್‌ಗಳ ಮೂಲಕ ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.