ADVERTISEMENT

ವಿದ್ಯುತ್‌ ಪ್ರವಹಿಸಿ ಸಾವು

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 19:59 IST
Last Updated 14 ಜುಲೈ 2019, 19:59 IST

ಬೆಂಗಳೂರು: ವಿದ್ಯುತ್ ತಂತಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಬೆಸ್ಕಾಂ ಲೈನ್‌ಮನ್‌ ಮೃತಪಟ್ಟ ಘಟನೆ ಥಣಿಸಂದ್ರದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಬಾಣಸವಾಡಿ ನಿವಾಸಿ ಮುರಳಿ (42) ಮೃತ ಸಿಬ್ಬಂದಿ. ಬೆಸ್ಕಾಂ ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮುನಿರಾಜು ಮತ್ತು ಕಿರಿಯ ಎಂಜಿನಿಯರ್‌ ಚಂದ್ರಶೇಖರ್ ಎಂಬುವವರ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಅಂಬೇಡ್ಕರ್ ಆಸ್ಪತ್ರೆ ಬಳಿ ಮುರಳಿ ಕುಟುಂಬದವರು ಪ್ರತಿಭಟನೆ ನಡೆಸಿದರು. ಘಟನೆಗೆ ಕಾರಣರಾದ ತಪ್ಪಿತಸ್ಥ ಎಂಜಿನಿಯರ್‌ಗಳನ್ನು ತಕ್ಷಣ ಬಂಧಿಸಿ, ಕಾನೂನು ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 15 ವರ್ಷಗಳಿಂದ ಮುರಳಿ ಅವರು ಬೆಸ್ಕಾಂ ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಮತ್ತು ಮಗನ ಜತೆ ಬಾಣಸವಾಡಿ
ಯಲ್ಲಿ ನೆಲೆಸಿದ್ದರು. ಭಾನುವಾರ ರಜೆ ಇದ್ದ ಕಾರಣ ಮುರಳಿ ಅವರು ಮನೆಯಲ್ಲೇ ಇದ್ದರು.

ಬೆಳಿಗ್ಗೆ 10.30ರ ಸುಮಾರಿಗೆ ಮುರಳಿ ಅವರಿಗೆ ಕರೆ ಮಾಡಿದ್ದ ಎಂಜಿನಿಯರ್ ಚಂದ್ರಶೇಖರ್, ‘ಥಣಿಸಂದ್ರ ಬಳಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಿರುವ ಬಗ್ಗೆ ದೂರು ಬಂದಿದೆ. ಸ್ಥಳಕ್ಕೆ ತೆರಳಿ ದುರಸ್ತಿ ಮಾಡುವಂತೆ ಸೂಚಿಸಿದ್ದರು. ತಕ್ಷಣ ಮುರಳಿ ಅವರು ಥಣಿಸಂದ್ರಕ್ಕೆ ತೆರಳಿದ್ದರು.

ಮುರಳಿ ಅವರು ಸ್ಥಳಕ್ಕೆ ಹೋಗುವ ಮೊದಲೇ ಬೆಸ್ಕಾಂ ಕಿರಿಯ ಸಹಾಯಕ ಎಂಜಿನಿಯರ್‌ ಚಂದ್ರಶೇಖರ್ ಮತ್ತು ಮತ್ತೊಬ್ಬ ಲೈನ್‌ಮನ್ ಸ್ಥಳದಲ್ಲಿದ್ದರು. ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ವಿದ್ಯುತ್ ವೈರ್ ದುರಸ್ತಿ ಮಾಡಲು ಮುರಳಿ ವಿದ್ಯುತ್ ಕಂಬ ಏರಿದ್ದರು. ವಿದ್ಯುತ್ ತಂತಿ ಸರಿಪಡಿಸುವ ಕೆಲಸ ನಡೆಯುತ್ತಿದ್ದಂತೆ ವಿದ್ಯುತ್ ಪ್ರವಹಿಸಿದ ಪರಿಣಾಮ ಮುರಳಿ ಅವರು ಕಂಬದಲ್ಲಿಯೇ ಸಾವಿಗೀಡಾಗಿದ್ದಾರೆ. ಘಟನೆಯಿಂದ ಭಯಗೊಂಡ ಚಂದ್ರಶೇಖರ್ ಅವರು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಈ ದುರಂತಕ್ಕೆ ಬೆಸ್ಕಾಂ ಅಧಿಕಾರಿಗಳೇ ಕಾರಣ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮುನಿರಾಜು ಅವರಿಗೆ ಮುರಳಿ ಅವರನ್ನು ಕಂಡರೇ ಆಗುತ್ತಿರಲ್ಲಿಲ್ಲ. ಉದ್ದೇಶ ಪೂರ್ವಕವಾಗಿ ಸ್ವಿಚ್ ಆನ್ ಮಾಡಿದ್ದರಿಂದ ವಿದ್ಯುತ್‌ ಪ್ರವಹಿಸಿ ಮುರಳಿ ಅವರು ಮೃತಪಟ್ಟಿದ್ದಾರೆ’ ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ.

ಬೆಸ್ಕಾಂ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಮೃತನ ಕುಟುಂಬಸ್ಥರು ಮೃತದೇಹ ಇಟ್ಟಿದ್ದ ಅಂಬೇಡ್ಕರ್ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬೆಸ್ಕಾಂ ಹಿರಿಯ ಅಧಿಕಾರಿಗಳು, ಪ್ರತಿಭಟನೆ ನಿರತರ ಮನವೊಲಿಸಿದರು.

‘ತಂತಿ ದುರಸ್ತಿ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಲು ಕಾರಣವೇನು? ಆಕಸ್ಮಿಕ ಘಟನೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ವಿದ್ಯುತ್ ಸ್ವಿಚ್ ಆನ್ ಮಾಡಿದ್ದಾರೆಯೇ ಎಂಬುದು ತನಿಖೆಯಿಂದಷ್ಟೆ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.