ADVERTISEMENT

ಬೆಂಗಳೂರು | ’ಗಣೇಶೋತ್ಸವ’ಕ್ಕೆ ಬೆಸ್ಕಾಂನಿಂದ ಮಾರ್ಗಸೂಚಿ

ತಾತ್ಕಾಲಿಕ ವಿದ್ಯುತ್‌ ಸಂಪರ್ಕಕ್ಕೆ ಉಪ ವಿಭಾಗ ಕಚೇರಿಗಳನ್ನು ಸಂಪರ್ಕಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 15:09 IST
Last Updated 4 ಸೆಪ್ಟೆಂಬರ್ 2024, 15:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಆಯಾ ಉಪ ವಿಭಾಗಗಳ ಅಧಿಕಾರಿಗಳನ್ನು ಸಂಪರ್ಕಿಸಲು ಬೆಸ್ಕಾಂ ತಿಳಿಸಿದೆ. 

‘ಸ್ಥಳೀಯ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ನಿಯಾಮಾನುಸಾರ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಉಪ ವಿಭಾಗಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಬೆಸ್ಕಾಂ ಹೇಳಿಕೆ ನೀಡಿದೆ.

‘ಸಾರ್ವಜನಿಕರು ಹಬ್ಬದ ವೇಳೆ ಸುರಕ್ಷತೆಗೂ ಕಾಳಜಿವಹಿಸಬೇಕು. ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಸೂಚಿಸಿದ್ದು, ತಪ್ಪದೇ ಪಾಲಿಸುವ ಮೂಲಕ ವಿದ್ಯುತ್ ಅವಘಡಗಳನ್ನು ತಪ್ಪಿಸಬೇಕು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಮನವಿ ಮಾಡಿದ್ದಾರೆ.

ADVERTISEMENT

ಸುರಕ್ಷತಾ ಕ್ರಮಗಳು:

* ಹಬ್ಬಕ್ಕೆ ತೋರಣ, ಪೆಂಡಾಲ್‌, ಸೀರಿಯಲ್ ಲೈಟ್‌ಗಳನ್ನು ಹಾಕುವ ಮುನ್ನ ವಿದ್ಯುತ್ ತಂತಿಗಳ ಬಗ್ಗೆ ಗಮನವಿರಬೇಕು.

* ಸೀರಿಯಲ್ ಲೈಟ್ ತಂತಿಗಳು ಸಮರ್ಪಕವಾಗಿ ಇನ್ಸುಲೇಟ್ ಆಗಿವೆಯೇ ಎಂದು ಪರೀಕ್ಷಿಸಿಕೊಳ್ಳಬೇಕು.
* ಸೀರಿಯಲ್‌ ಲೈಟ್‌ ಹಾಗೂ ದೀಪಗಳನ್ನು ಹಾಕುವಾಗ ವಿದ್ಯುತ್‌ ಕಂಬದಿಂದ ಸಂಪರ್ಕ ಪಡೆಯಬಾರದು.
* ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟಬಾರದು.
* ಗಣೇಶ ಮೂರ್ತಿಯ ಮೆರವಣಿಗೆ ವೇಳೆ ರಸ್ತೆ ಬದಿಯ ವಿದ್ಯುತ್ ಮಾರ್ಗಗಳ ಬಗ್ಗೆ ಎಚ್ಚರವಿರಬೇಕು. ವಿದ್ಯುತ್‌ ತಂತಿಗಳನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಬಾರದು.
* ಮೆರವಣಿಗೆ ಮಾರ್ಗವನ್ನು ಮುಂಚಿತವಾಗಿ ಬೆಸ್ಕಾಂನ ಆಯಾ ಉಪ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೆ, ಅವರು ಅಗತ್ಯ ನೆರವು ಒದಗಿಸುತ್ತಾರೆ.

* ತುಂಡಾದ ತಂತಿ, ವಿದ್ಯುತ್‌ ಕಿಡಿ ಗಮನಕ್ಕೆ ಬಂದರೆ, 1912 ಸಹಾಯವಾಣಿಗೆ ಕರೆ ಮಾಡಬೇಕು.

* ವಿದ್ಯುತ್ ಪರಿಕರಗಳು ಇರುವ ಸ್ಥಳಗಳಲ್ಲಿ ‘ಅಪಾಯ ವಲಯ’‌ ಎಂದು ಸೂಚಿಸಬೇಕು.

ತಾತ್ಕಾಲಿಕ ಸಂಪರ್ಕ ಹೇಗೆ?

* ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವಾಗ, ಸಂಬಂಧಿತ (ಬಿಬಿಎಂಪಿ/ಬಿಡಿಎ/ಗ್ರಾಮ ಪಂಚಾಯಿತಿ/ಆರಕ್ಷಕ ಠಾಣೆ ಹಾಗೂ ಇನ್ನಿತರ) ಸಕ್ಷಮ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆದಿರಬೇಕು.
* ನಿರಾಕ್ಷೇಪಣಾ ಪತ್ರ ಪಡೆದ ನಂತರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಥವಾ ಸಹಾಯಕ ಎಂಜಿನಿಯರ್‌ಗಳು ಗಣೇಶವಿಗ್ರಹ ಪ್ರತಿಷ್ಠಾಪಿಸಲು ನಿರ್ಮಿಸಿರುವ ಪೆಂಡಾಲ್ ಅಥವಾ ಸಮಾರಂಭ ಸ್ಥಳದ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಬೇಕು.
* ವೈರಿಂಗ್ ಸುರಕ್ಷತೆ, ಎಂ.ಸಿ.ಬಿ ಮತ್ತು ಇಐಎ ಅಳವಡಿಕೆಯ ಬಗ್ಗೆ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಸಮಾಪನ ವರದಿ ಪಡೆದು ಸ್ಥಳ ಪರಿಶೀಲಿಸಿದ ನಂತರವೇ ಸಂಪರ್ಕ ಕಲ್ಪಿಸಲಾಗುವುದು.

* ತಾತ್ಕಾಲಿಕ ವಿದ್ಯುತ್ ಸಂಪರ್ಕದ ನಿರೀಕ್ಷಿತ ಸಮಯ ಮುಗಿದ ಬಳಿಕ ಅಂತಿಮ ರೀಡಿಂಗ್ ನಮೂದಿಸಿ ಮಾಪಕ ವಾಪಸ್ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.