ಬೆಂಗಳೂರು: ‘ಭಗವದ್ಗೀತೆ ಮತೀಯ ಗ್ರಂಥ ಅಲ್ಲ. ಸನ್ಮತಿ ನೀಡುವ ಗ್ರಂಥ’ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳು ಪ್ರತಿಪಾದಿಸಿದರು.
ಸ್ವಾಮೀಜಿ ಅವರಿಗೆ 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಪುತ್ತಿಗೆ ಶ್ರೀ–60: ಗುರುವಂದನೋತ್ಸವ’ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ‘ಭಗವದ್ಗೀತೆ ವ್ಯಕ್ತಿತ್ವ ಬೆಳೆಸುವ ಗ್ರಂಥ. ಅದನ್ನು ಧಾರ್ಮಿಕ ಗ್ರಂಥಕ್ಕೆ ಸೀಮಿತಗೊಳಿಸಬಾರದು. ಹೀಗಾಗಿ, ಭಗವದ್ಗೀತೆಯ ಸಂದೇಶಗಳನ್ನು ಪ್ರಚಾರ ಮಾಡುವ ಅಗತ್ಯವಿದೆ’ ಎಂದರು.
‘ಇಂದು ಬೌದ್ಧಿಕ ಮಾಲಿನ್ಯವೂ ಹೆಚ್ಚಾಗಿದೆ. ಈ ಮಾಲಿನ್ಯ ಹೋಗಲಾಡಿಸ
ಬೇಕಾದರೆ ಭಗವದ್ಗೀತೆಯ ಪ್ರಚಾರವಾಗಬೇಕು. ಭಗವದ್ಗೀತೆಯು ಸ್ಫೂರ್ತಿ ನೀಡುವ ಗ್ರಂಥವಾಗಿದೆ. ಅನ್ನ, ಆಹಾರ ಯಾರಾದರೂ ಕೊಡಬಹುದು. ಆದರೆ, ಯಾವುದೇ ವ್ಯಕ್ತಿಗೆ ಸ್ಫೂರ್ತಿ ತುಂಬಲು ಸಾಧ್ಯವಿಲ್ಲ. ಸ್ವಯಂ ಬೆಳೆಸಿಕೊಳ್ಳಬೇಕಾದರೆ ಭಗವದ್ಗೀತೆ ಪರಿಹಾರ ಒದಗಿಸುತ್ತದೆ’ ಎಂದು ಸಲಹೆ ನೀಡಿದರು.
‘ಇಂದು ಜೀವನದ ಗುಣಮಟ್ಟ ಹೆಚ್ಚಾಗುತ್ತಿದೆ. ಆದರೆ, ಸಂಸ್ಕಾರ ಕಡಿಮೆಯಾಗಿದೆ. ಜಗತ್ತಿನಲ್ಲಿ ಶ್ರೀಮಂತಿಕೆ ಹೆಚ್ಚಾಗುತ್ತಿದೆ. ಬಡವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಮಾರ್ಟ್ ಫೋನ್ ಇಲ್ಲದವರು ಮತ್ತು ಟಿ.ವಿ. ಇಲ್ಲದವರು ಮಾತ್ರ ಬಡವರು. ಆದರೆ, ಗುಣಮಟ್ಟದ ಜೀವನವನ್ನು ಹೆಚ್ಚಿಸುವ ಭರದಲ್ಲಿ ಮಾನಸಿಕ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರು ಇಂದು ಒತ್ತಡದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ಭಗವದ್ಗೀತೆಯ ಸಂದೇಶ ಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ’ ಎಂದು ವಿಶ್ಲೇಷಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ’ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯದಲ್ಲಿ ಶ್ರೀಗಳು ತೊಡಗಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಧಾರ್ಮಿಕ ಭಾವನೆ ಮೂಡಿಸುವ ಕಾರ್ಯ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.
ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ಮಾತನಾಡಿ, ‘ಕಿರಿಯ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದ ಪುತ್ತಿಗೆ ಶ್ರೀಗಳು, ಜಗತ್ತಿನಾದ್ಯಂತ ಸನಾನತನ ಧರ್ಮ ಮತ್ತು ಸಂಸ್ಕೃತಿಯಯನ್ನು ಪರಿಚಯಿಸಿದ್ದಾರೆ. ಇವರೇ ನಿಜವಾದ ಜಗದ್ಗುರುಗಳು’ ಎಂದರು.
ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಇದ್ದರು. ಪುತ್ತಿಗೆ ಶ್ರೀಗಳ 60 ಲೇಖನಗಳ ’ಅರವತ್ತು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಲೀಲಾ ನಾಟ್ಯ ವೃಂದ ಕಲಾ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೀಡಿದ ‘ನಾಟ್ಯ ನಮನ’ ನೃತ್ಯ ಕಾರ್ಯಕ್ರಮ ಗಮನಸೆಳೆಯಿತು. ಶ್ರೀ ಲಕ್ಷ್ಮೀ ದಾಸ್ ಅವರಿಂದ ವೀಣಾ ವಾದನ ಕಾರ್ಯಕ್ರಮ ನಡೆಯಿತು.
ಸುಗುಣೇಂದ್ರತೀರ್ಥ ಶ್ರೀಗಳಿಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಗೋಡಂಬಿ ಮತ್ತು ಬಾದಾಮಿಯಿಂದ ತಯಾರಿಸಿದ ಪೇಟವನ್ನು ತೊಡಿಸಿ ಗೌರವಿಸಿದರು.
‘ಧರ್ಮದ ಚೌಕಟ್ಟು ಮೀರಿ ಮಾನವೀಯತೆ ಬೆಳೆಯಲಿ’
‘ಪ್ರಸ್ತುತ ಕಾಲಘಟ್ಟದಲ್ಲಿ ಧರ್ಮದ ಚೌಕಟ್ಟು ಮಿರಿ ಮಾನವೀಯತೆ ಬೆಳೆಯಲಿ’ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.
‘ಮಾನವೀಯತೆ ನಮ್ಮ ಕೈಯಲ್ಲಿದೆ. ಧರ್ಮ ನಮ್ಮ ಕೈಯಲ್ಲಿ ಇಲ್ಲ. ಯಾರೂ ಧರ್ಮವನ್ನು ಬೇಡಿ ಬಂದಿರುವುದಿಲ್ಲ. ಆದ್ದರಿಂದ, ಮಾನವೀಯ ಮೌಲ್ಯಗಳು ಸಮಾಜದಲ್ಲಿ ಬೆಳೆಯಬೇಕಾಗಿದೆ’ ಎಂದರು.
‘ಸುಗುಣೇಂದ್ರ ತೀರ್ಥರ ಹತ್ತು ಹಲವು ಯೋಜನೆಗಳು ಆಕರ್ಷಣೀಯವಾಗಿವೆ. ಸಪ್ತ ಸಾಗರ ದಾಟಬಾರದು ಎನ್ನುವ ಸಂಪ್ರದಾಯವನ್ನು ಉಲ್ಲಂಘಿಸಿ ದಿಟ್ಟ ನಿಲುವು ತಳೆದವರು ಶ್ರೀಗಳು. ಶ್ರೀಗಳು ವಿಶೇಷ ಪ್ರಯತ್ನ ಮಾಡಿ ಸ್ವತಃ ವಿದೇಶ ಪ್ರಯಾಣ ಮಾಡಿ ಉಳಿದ ಶ್ರೀಗಳಿಗೆ ಮಾರ್ಗದರ್ಶನ ಮಾಡಿದರು. ಇಂತಹ ಹೊಸ ಯೋಜನೆಗಳನ್ನು ರೂಪಿಸಿದವರು ಶ್ರೀಗಳು. ವಿದೇಶಕ್ಕೆ ಹೋಗುವುದು ಅಪರಾಧವೂ ಅಲ್ಲ, ಸೌಭಾಗ್ಯವೂ ಅಲ್ಲ. ಸಾಫ್ಟ್‌ವೇರ್ ವೃತ್ತಿಯಲ್ಲಿರುವವರು ವಿದೇಶಕ್ಕೆ ತೆರಳುವುದು ಅನಿವಾರ್ಯ’ ಎಂದು ವಿವರಿಸಿದರು.
‘ಮಹಿಳೆಯರಿಗೆ ಅವಕಾಶಗಳು ಇನ್ನೂ ಕಡಿಮೆ. ಸಮಾಜದಲ್ಲಿ ಅನಿಷ್ಠ ಪಿಡುಗುಗಳು ತೊಲಗಬೇಕಾಗಿದೆ. ಸ್ವಾಮೀಜಿಗಳು ಇಂತಹ ಅನಿಷ್ಠ ಪದ್ಧತಿಗ ಳನ್ನು ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.
***
ಸುಗುಣೇಂದ್ರತೀರ್ಥ ಗುರುಗಳದ್ದು ಮೇರು ವ್ಯಕ್ತಿತ್ವ. ಶ್ರೀಗಳು ಎತ್ತರಕ್ಕೆ ಬೆಳೆದವರು. ಪ್ರಪಂಚದ ಉದ್ದಗಲಕ್ಕೆ ಸುತ್ತಾಡಿ ಧರ್ಮ ಪ್ರಚಾರ ಮಾಡಿದ್ದಾರೆ. ಅವರು ನಡೆದಾಡುವ ವಿಶ್ವಕೋಶ.
- ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಪೇಜಾವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.