ಬೆಂಗಳೂರು: ‘ಹೆಣ್ಣು ಮಕ್ಕಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಈಗಲೂ ಮಧ್ಯ ರಾತ್ರಿಯಲ್ಲಿ ಅವರು ನಿರ್ಭಯದಿಂದ ಓಡಾಡುವ ಸ್ಥಿತಿಯಿಲ್ಲ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರು ಗುರುವಾರ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ಕದಳಿ ಮಹಿಳಾ ವೇದಿಕೆ ಜಂಟಿಯಾಗಿ ನಗರದಲ್ಲಿ ಏರ್ಪಡಿಸಿದ್ದ ಶರಣೆ ಡಾ. ಲೀಲಾದೇವಿ ಆರ್. ಪ್ರಸಾದ್–92 ‘ಸಾರ್ಥಕ ಬದುಕಿನ ಸುಂದರ ಪಯಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹೆಣ್ಣು ಮಕ್ಕಳು ಓಡಿಹೋಗಿರುವ, ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯ ವರದಿಗಳು ಪ್ರಕಟವಾಗುತ್ತಿವೆ. ಹೆಣ್ಣುಮಕ್ಕಳ ಭಾವನೆಗಳಿಗೆ ಮನ್ನಣೆ ಸಿಗುತ್ತಿಲ್ಲ. ಅವಳ ವಿರುದ್ಧ ಯಾವುದೇ ಅಸ್ತ್ರ ಸಿಗದಿದ್ದಲ್ಲಿ ಚಾರಿತ್ರ್ಯದ ಬಗ್ಗೆ ಮಾತನಾಡಲಾಗುತ್ತಿದೆ. ಇದು ಸಂಕಟವನ್ನು ಉಂಟುಮಾಡುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಯಿಸಿ, ಅವರಿಗೆ ಸೂಕ್ತ ರಕ್ಷಣೆ ಒದಗಿಸಬೆಕು’ ಎಂದು ತಿಳಿಸಿದರು.
ಲೀಲಾದೇವಿ ಆರ್. ಪ್ರಸಾದ್ ಅವರ ಆತ್ಮಕಥೆ ‘ಕಾಡಿ ಬೇಡದ ಬುತ್ತಿ’ ಕೃತಿಯನ್ನು ಬಿಡುಗಡೆ ಮಾಡಿದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅವರು, ‘ಲೀಲಾದೇವಿ ಅವರು ರಾಜಕಾರಣದಲ್ಲಿ ಸ್ಥಿತಪ್ರಜ್ಞೆ ಪ್ರದರ್ಶಿಸಿದ್ದಾರೆ. ಅವರ ಹೋರಾಟ, ಸಾಮರ್ಥ್ಯ, ವಿದ್ವತ್ತು ಹಾಗೂ ಸಂಪರ್ಕಕ್ಕೆ ರಾಜಕೀಯದಲ್ಲಿ ಸೂಕ್ತ ಅವಕಾಶಗಳು ಸಿಕ್ಕಿಲ್ಲ‘ ಎಂದರು.
‘ಈಚಿನ ದಿನಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ಇರುವುದು ಕಷ್ಟಸಾಧ್ಯ. ಚುನಾವಣೆಗಳಲ್ಲಿ ಜಾತಿ, ಹಣ ಕೆಲಸ ಮಾಡುತ್ತಿವೆ. ವಾಯು ಮಾಲಿನ್ಯ, ಶಬ್ದ ಮಾಲಿನ್ಯದ ಜತೆಗೆ ಮಾತಿನ ಮಾಲಿನ್ಯ ಸಮಾಜವನ್ನು ಆವರಿಸಿದೆ. ಲೀಲಾದೇವಿ ಅವರು ಪಕ್ಷ ರಾಜಕಾರಣಕ್ಕೆ ವಿದಾಯ ಹೇಳುವ ಸಮಯ ಬಂದಿದ್ದು, ಸಮಾಜಕ್ಕೆ ಅವರ ಮಾರ್ಗದರ್ಶನ ಅಗತ್ಯ’ ಎಂದರು.
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ‘ಈಗಿನ ರಾಜಕಾರಣದಲ್ಲಿ 4–5 ವರ್ಷಗಳಲ್ಲಿಯೇ ಹಗರಣಗಳು ರಾಜಕಾರಣಿಗಳನ್ನು ಅಂಟಿಕೊಳ್ಳುತ್ತವೆ. ಲೀಲಾದೇವಿ ಅವರು 68 ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕಿಯಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.