ಬೆಂಗಳೂರು: ಗಾಯನ ಹಾಗೂ ನೃತ್ಯಕ್ಕೆ ಮನಸೋತ ಮಹಿಳೆಯರು, ಪರ್ವತಾರೋಹಿ ಹಾಗೂ ಬೈಕರ್ಸ್ ಸಾಹಸ ಸನ್ನಿವೇಶದ ಬಣ್ಣನೆ, ಚಳಿಗಾಲದಲ್ಲಿ ಮಹಿಳೆಯರು ಅಂದವಾಗಿ ಕಾಣಿಸುವುದು ಹೇಗೆ ಎಂಬ ನಿರೂಪಕಿ ಪ್ರಶ್ನೆಗೆ ಸ್ಥಳದಲ್ಲಿ ಸರಿ ಉತ್ತರ ನೀಡಿದವರಿಗೆ ಗಿಫ್ಟ್...
– ಇವು ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಶನಿವಾರ ನಗರದ ಇಂದಿರಾನಗರದ ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಭೂಮಿಕಾ ಕ್ಲಬ್’ನ (ಬೆಂಗಳೂರಿನ ಮಹಿಳೆಯರಿಗೊಂದು ವಿಶೇಷ ವೇದಿಕೆ) ತೃತೀಯ ಆವೃತ್ತಿ ಕಾರ್ಯಕ್ರಮದ ವೈಶಿಷ್ಟ್ಯಗಳು.
ಕ್ಲಬ್‌ನಲ್ಲಿ ಸಂಗೀತದ ರಸದೌತಣವೇ ಸುರಿಯಿತು. ಇಳಿಸಂಜೆಯಲ್ಲಿ ಇಂಪಾದ ಸಂಗೀತಕ್ಕೆ ಸಭಿಕರು ತಲೆದೂಗಿದರು.
ಆರಂಭದಲ್ಲಿ ಗಾಯಕ ವಾಸು ದೀಕ್ಷಿತ್ ಅವರು ಕನ್ನಡ, ಹಿಂದಿ ಹಾಡುಗಳನ್ನು ಹಾಡಿ ಮೈನವಿರೇಳಿಸಿದರು.
ಮಮತಾ ಸಾಗರ್ ಅವರು ರಚಿಸಿದ ‘ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲಿ ಒಂದು ನದಿ...’ ಈ ಹಾಡು ವೇದಿಕೆ ಮೇಲಿಂದ ಹೊಮ್ಮುತ್ತಿದ್ದಂತೆ ಪ್ರೇಕ್ಷಕರು ತಲೆಬಾಗಿದರು.
‘ಏಸು, ಅಲ್ಲಾ ಔರ್ ಕೃಷ್ಣ ಕೌನ್ ಭಗವಾನ್ ಅಪ್ನಾ...’ ಎಂದು ಹಾಡಿದರು.
ಅದಾದ ಮೇಲೆ ಪುರಂದರದಾಸರು ರಚಿತ ‘ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ’ ಎಂದು ವಾಸು ದೀಕ್ಷಿತ್ ಹಾಡಿ, ಪ್ರೇಕ್ಷಕರನ್ನೂ ಹಾಡಿಸಿದರು. ‘ಮಾಡಿದ್ದುಣ್ಣೋ ಮಾರಾಯ...’ ಎಂದು ರಂಜಿಸಿದರು.
ಇದಾದ ಮೇಲೆ ನಿರೂಪಕಿ ಕೇಳಿದ ಪ್ರಶ್ನೆಗೆ ಪ್ರೇಕ್ಷಕರು ಥಟ್ ಎಂದು ಉತ್ತರಿಸಿ ಬಹುಮಾನ ತಮ್ಮದಾಗಿಸಿಕೊಂಡರು. ಕೆಲವು ಪ್ರಶ್ನೆಗಳಿಗೆ ಉತ್ತರದ ಗೊತ್ತಿದ್ದರೂ ಆ ಕ್ಷಣದಲ್ಲಿ ಹೇಳಲು ಸಾಧ್ಯವಾಗದೆ ಅಯ್ಯೋ ಎಂದು ಕೆಲವರು ಮರುಗಿದರು.
ಚಳಿಗಾಲದಲ್ಲಿ ಮಹಿಳೆಯರು ತಮ್ಮ ಅಂದ ರಕ್ಷಣೆಗೆ ಸಾಕಷ್ಟು ಕಾಳಜಿ ತೆಗೆದುಕೊಳ್ಳುತ್ತಾರೆ. ಚಳಿಗಾಲದಲ್ಲಿ ಫಿಟ್ ಹಾಗೂ ಸ್ಟೈಲಿಶ್ ಆಗಿ ಕಾಣಿಸುವುದು ಹೇಗೆ ಎಂಬ ಸಂದೇಹಗಳನ್ನು ಖುಷ್ಬೂ ಶೆಟ್ಟಿ ಹಾಗೂ ಫಿಟ್‌ನೆಸ್ ಪರಿಣಿತೆ ರುಚಿಕಾ ಚೌಧರಿ ಅವರಿಂದ ಪರಿಹರಿಸಿಕೊಂಡರು. ಯಾವ ಸೌಂದರ್ಯ ವರ್ಧಕ ಬಳಸಿದರೆ ತ್ವಚೆ ಅಂದವಾಗಿ ಕಾಣಿಸಲಿದೆ ಎಂಬುದನ್ನೂ ತಿಳಿಸಿದರು.
ಸುಧೀಂದ್ರ ನೃತ್ಯ ಕಲಾನಿಕೇತನ ಸಂಸ್ಥೆಯ ಮಕ್ಕಳು ಗುರುರಾಜ್ ವಿಶಿಷ್ಠ ಅವರ ನಿರ್ದೇಶನದಲ್ಲಿ ನೃತ್ಯ ಪ್ರದರ್ಶಿಸಿದರು. ಐಒಸಿಎಲ್ ಪ್ರಾಯೋಜಕತ್ವ ವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.