ADVERTISEMENT

‘ಭೂಮಿಕಾ ಕ್ಲಬ್‘: ನವೋಲ್ಲಾಸಕ್ಕೆ ಮುನ್ನುಡಿ

ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ಪ್ರಸ್ತುತಿ: ಉತ್ಸಾಹದಿಂದ ಪಾಲ್ಗೊಂಡ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 21:02 IST
Last Updated 26 ಆಗಸ್ಟ್ 2022, 21:02 IST
‘ಭೂಮಿಕಾ ಕ್ಲಬ್‌’ ಲಾಂಛನವನ್ನು ನಟಿ ರಂಜನಿ ರಾಘವನ್‌ ಅನಾವರಣಗೊಳಿಸಿದರು. ಟಿಪಿಎಂಎಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮನ್ ಶಂಕರ್ ಇದ್ದರು. –  ಪ್ರಜಾವಾಣಿ ಚಿತ್ರ
‘ಭೂಮಿಕಾ ಕ್ಲಬ್‌’ ಲಾಂಛನವನ್ನು ನಟಿ ರಂಜನಿ ರಾಘವನ್‌ ಅನಾವರಣಗೊಳಿಸಿದರು. ಟಿಪಿಎಂಎಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮನ್ ಶಂಕರ್ ಇದ್ದರು. –  ಪ್ರಜಾವಾಣಿ ಚಿತ್ರ   

ಬೆಂಗಳೂರು:ದಿನನಿತ್ಯದ ಜಂಜಾಟದ ಬದುಕಿಗೆ ಮುಕ್ತಿ ನೀಡಿ ಉಲ್ಲಾಸ, ಉತ್ಸಾಹ ತುಂಬುವ ಮೂಲಕ ಹೊಸತನದ ಸ್ಪರ್ಶ ನೀಡುವ ವೇದಿಕೆ‘ಭೂಮಿಕಾ ಕ್ಲಬ್‌’ಗೆ ಶುಕ್ರವಾರ ಚಾಲನೆ ನೀಡಲಾಯಿತು.

’ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಆರಂಭಿಸಿರುವ ‘ಭೂಮಿಕಾ ಕ್ಲಬ್‌’ ಮಹಿಳೆಯರಿಗಾಗಿಯೇ ರೂಪಿಸಿರುವ ವಿಶಿಷ್ಟ ಕಾರ್ಯಕ್ರಮ.

ಸಮಾನಮನಸ್ಕ ಸ್ನೇಹಿತೆಯರನ್ನು ಒಗ್ಗೂಡಿಸಲು ಮತ್ತು ಸ್ವಾವಲಂಬಿಯಾಗಿಸಲು ‘ಭೂಮಿಕಾ ಕ್ಲಬ್‌’ ಪ್ರೇರಣೆ ನೀಡಲಿದೆ.ಹೊಸತನ ಬಯಸುವ ಕ್ರಿಯಾಶೀಲಮನಸ್ಸುಗಳ ಜೀವನಶೈಲಿಯನ್ನು ಉತ್ಕೃಷ್ಟಗೊಳಿಸಲು ಹಾಗೂ ಹಣಕಾಸು, ಸೌಂದರ್ಯದ ಕುರಿತ ವಿಷಯಗಳ ಚರ್ಚೆ ಮತ್ತು ವಿಧ ಸ್ಪರ್ಧೆಗಳಿಗೆ ಇದು ವೇದಿಕೆಯಾಗಲಿದೆ.

ADVERTISEMENT

‘ಭೂಮಿಕಾ ಕ್ಲಬ್‌’ನ ಲಾಂಛನ ಅನಾವರಣ ಮಾಡಿದ ನಟಿ ರಂಜನಿ ರಾಘವನ್‌, ‘ಮಹಿಳೆಯರಿಗಾಗಿ ರೂಪಿಸಿರುವ ಈ ಹೊಸ ವೇದಿಕೆ ಪ್ರೇರಣಾ ಶಕ್ತಿಯಾಗಿ ಬೆಳೆಯಲಿ. ಈ ಕ್ಲಬ್‌ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಬೇಕು.ಸಾಮಾಜಿಕ ಗುಂಪುಗಳನ್ನು ರಚಿಸಿ, ಹೊಸ, ಹೊಸ ವಿಷಯಗಳ ಬಗ್ಗೆ ಚರ್ಚಿಸಬಹುದು’ ಎಂದು ಸಲಹೆ ನೀಡಿದರು.

‘ಪ್ರತಿಯೊಂದು ವಿಷಯದಲ್ಲಿ ಪುರುಷರ ದೃಷ್ಟಿಕೋನದಿಂದ ಚರ್ಚಿಸುವುದೇ ಹೆಚ್ಚು. ಇಂತಹ ಸನ್ನಿವೇಶ ಬದಲಾಯಿಸಿ, ಸಮಾಜದಲ್ಲಿ ಬದಲಾವಣೆ ತರಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಿ. ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮನ್ ಶಂಕರ್, ‘ಭೂಮಿಕಾ ಕ್ಲಬ್‌ ವತಿಯಿಂದ ಮುಂದಿನ ದಿನಗಳಲ್ಲಿ ಹಲವು ಚಟುವಟಿಕೆಗಳು ನಡೆಯಲಿವೆ’ ಎಂದು ತಿಳಿಸಿದರು.

‘ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ’ ಕುರಿತು ವಿವರಿಸಿದಮಣಿಪಾಲ್‌ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಸುಚಿಸ್ಮಿತಾ ರಾಜಮಾನ್ಯ ಅವರು, ‘ಮಳೆಗಾಲದಲ್ಲಿ ಕೆಲವು ಸೋಂಕು ರೋಗಗಳು ಕಾಣಿಸಿಕೊಳ್ಳುತ್ತವೆ. ನೀರು ಮತ್ತು ಆಹಾರ ಕಲುಷಿತಗೊಳ್ಳುವುದು ಇದಕ್ಕೆ ಒಂದು ಪ್ರಮುಖ ಕಾರಣ. ಸ್ವಚ್ಛತೆ ಕಾಪಾಡಿಕೊಂಡು, ವ್ಯವಸ್ಥಿತವಾದ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ಅಗತ್ಯ ಇರುವ ಲಸಿಕೆಗಳನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆ’ ಕುರಿತು ಉಪನ್ಯಾಸ ನೀಡಿದ ಮಣಿಪಾಲ್‌ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ದೀಪಾ ಕೃಷ್ಣಮೂರ್ತಿ, ‘ಮಳೆಗಾಲದಲ್ಲಿ ಕಡಿಮೆ ಮೇಕ್‌ಅಪ್‌ ಮಾಡಿಕೊಂಡರೆ ಒಳ್ಳೆಯದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವಿಸಬೇಕು ಮತ್ತುಎಣ್ಣೆ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು’ ಎಂದು ತಿಳಿಹೇಳಿದರು.

‘ಹೇರ್‌ಡೈ ಅನ್ನು ಎಷ್ಟು ದಿನಗಳಿಗೊಮ್ಮೆ ಮಾಡಿಕೊಳ್ಳಬೇಕು’ ಎನ್ನುವ ಮಹಿಳೆಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೈರ್‌ ಡೈ ಮಾಡಿಕೊಳ್ಳದಿರುವುದೇ ಉತ್ತಮ. ಸಾಧ್ಯವಾದಷ್ಟು ಕಡಿಮೆ ಮಾಡಿ. ಅದು ಕೂದಲಿಗೆ ಹಾನಿ ಮಾಡುವ ಸಾಧ್ಯತೆ ಇದೆ’ ಎಂದು ಸಲಹೆ ನೀಡಿದರು.

ಹೋರಾಟ ಮತ್ತೆ ಆರಂಭಿಸಬೇಕಾಗಿದೆ’

‘21ನೇ ಶತಮಾನದಲ್ಲೂ ಮಹಿಳೆಯರು ಸಮಾನತೆಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿರುವುದು ವಿಷಾದಕರ’ ಎಂದು ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಹೇಳಿದರು.

‘ಭೂಮಿಕಾ ಕ್ಲಬ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದ ಪ್ರಾತಿನಿಧ್ಯ ಇನ್ನೂ ದೊರೆತಿಲ್ಲ. ಹೀಗಾಗಿ, ಮತ್ತೊಮ್ಮೆ ಹೋರಾಟ ನಡೆಸಬೇಕಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರು ಉದ್ಯಮಶೀಲರಾಗಲು ಮತ್ತು ಶೋಷಣೆಗೆ ಒಳಗಾದವರಿಗೆ ನೆರವಾಗಬೇಕು’ ಎಂದರು.

‘ನೋಡಯ್ಯ ಕ್ವಾಟೆ ಲಿಂಗವೇ....’ ಹಾಡುವ ಮೂಲಕ ಪಲ್ಲವಿ ಅವರು ಸಭಿಕರನ್ನು ರಂಜಿಸಿದರು.

ವೈವಿಧ್ಯಮಯ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರು

‘ಬೆಂಗಳೂರಿನ ಎರಡು ಪ್ರದೇಶಗಳ ಹೆಸರುಗಳನ್ನು ಒಗ್ಗೂಡಿಸಿ ‘ಮಾಲ್ಗುಡಿ’ ಎಂದು ಹೆಸರಿಡಲಾಯಿತು. ಈ ಪ್ರದೇಶಗಳ ಹೆಸರುಗಳೇನು?’

ಮಲ್ಲೇಶ್ವರ ಮತ್ತು ಬಸವನಗುಡಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಮಹಿಳೆಯರು ಉತ್ತರ ನೀಡಿದರು. ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ಸಾಹದಿಂದ ಉತ್ತರ ನೀಡಿದ ಮಹಿಳೆಯರು ಬಹುಮಾನಗಳನ್ನು ಪಡೆದರು.

ವೈಯಕ್ತಿಕ ಹಣಕಾಸು ಮತ್ತು ಹೂಡಿಕೆ ಕುರಿತು ಫಿನ್‌ಸೇಪ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಮೃಣ್ ಅಗರ್‌ವಾಲ್‌ ವಿವರಿಸಿದರು.

ಫ್ಯಾಷನ್‌ ಕುರಿತು ಶಚಿನಾ ಹೆಗ್ಗಾರ್‌, ಮೇಕಪ್‌ ಟಿಪ್ಸ್‌ ಕುರಿತು ಸುಶ್ಮಾ ನಾಣಯ್ಯ, ಅಡುಗೆ ಪಾಕ ವಿಧಾನಗಳ ಕುರಿತು ತಾಜ್‌ ಹೋಟೆಲ್‌ನ ಬಾಣಸಿಗರಾದ ಆಂಡ್ರಿಯಾ ಜುಡಿತ್‌ ಡಯಾಸ್‌ ಉಪನ್ಯಾಸಗಳನ್ನು ನೀಡಿದರು.

ಆಶ್ವಿನಿ ರವೀಂದ್ರ ಅವರು ಸ್ಟ್ಯಾಂಡ್‌–ಅಪ್‌ ಕಾಮಿಡಿ ಮಾಡಿ ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.