ADVERTISEMENT

‘ಭೂಮಿಕಾ’ದಲ್ಲಿ ಬೀಟ್‌ ಗುರು ಹವಾ..!

ಪುಳಕಗೊಳಿಸಿದ ನಟಿಯರ ಮನದ ಮಾತು, ಸೀರೆ ಉಡುವ ಪ್ರಾತ್ಯಕ್ಷಿಕೆ, ಅಡುಗೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 16:18 IST
Last Updated 19 ಅಕ್ಟೋಬರ್ 2024, 16:18 IST
ನಗರದ ಆರ್. ವಿ. ಟೀಚರ್ ಕಾಲೇಜಿನಲ್ಲಿ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಅಯೋಚಿಸಿದ್ದ ಭೂಮಿಕಾ ಕ್ಲಬ್ ಕಾರ್ಯಕ್ರಮದಲ್ಲಿ ಮಹಿಳೆಯರು ಡ್ರಮ್‌ ಸಹಿತ ವಿವಿಧ ವಾದನಗಳನ್ನು ನುಡಿಸಿದರು - ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್
ನಗರದ ಆರ್. ವಿ. ಟೀಚರ್ ಕಾಲೇಜಿನಲ್ಲಿ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಅಯೋಚಿಸಿದ್ದ ಭೂಮಿಕಾ ಕ್ಲಬ್ ಕಾರ್ಯಕ್ರಮದಲ್ಲಿ ಮಹಿಳೆಯರು ಡ್ರಮ್‌ ಸಹಿತ ವಿವಿಧ ವಾದನಗಳನ್ನು ನುಡಿಸಿದರು - ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್   

ಬೆಂಗಳೂರು: ಒಂದೆಡೆ ವೇದಿಕೆಯಲ್ಲಿ ಬೀಟ್‌ ಗುರು ತಂಡ ಡ್ರಮ್‌ ನುಡಿಸುತ್ತಿದ್ದರೆ, ಪ್ರೇಕ್ಷಕರೂ ಡ್ರಮ್‌ ಸಹಿತ ವಿವಿಧ ವಾದನಗಳನ್ನು ಬಾರಿಸಿ ಸಂಭ್ರಮಪಟ್ಟರು. 

ಜಯನಗರದ ಆರ್‌.ವಿ.ಟೀಚರ್ಸ್‌ ಕಾಲೇಜು ಸಭಾಂಗಣದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ಭೂಮಿಕಾ ಕ್ಲಬ್‌ ಶನಿವಾರ ಆಯೋಜಿಸಿದ್ದ 21ನೇ ಆವೃತ್ತಿಯ ಕಾರ್ಯಕ್ರಮ ಇದಕ್ಕೆ ವೇದಿಕೆಯಾಯಿತು.

ಬೀಟ್‌ ಗುರು ತಂಡದ ಸದಸ್ಯರೇ ವಾದನಗಳನ್ನು ಪ್ರೇಕ್ಷಕರಿಗೆ ಸರಬರಾಜು ಮಾಡಿ ಉತ್ಸಾಹ ತುಂಬಿದರು.

ADVERTISEMENT

‘ಫ್ರೀಡಂ ಆಯಿಲ್’ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೀರೆ ಉಡುವ ಕಲೆ, ಅಡುಗೆ ತಯಾರಿಗಳು, ನಟಿಯರ ಮನದ ಮಾತುಗಳು ಪುಳಕಗೊಳಿಸಿದವು.

ನಟಿಯರಾದ ಸಾಕ್ಷಿ ಮೇಘನಾ ಮತ್ತು ಸುಕೃತಾ ವಾಗ್ಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಎಲ್ಲರಲ್ಲಿಯೂ ಪ್ರತಿಭೆ ಇರುತ್ತದೆ. ಕಾಲ ಕೂಡಿ ಬಂದಾಗ ಸೂಕ್ತ ವೇದಿಕೆ ಸಿಕ್ಕಿದಾಗ ಅದು ಅನಾವರಣಗೊಳ್ಳುತ್ತದೆ. ಕಾಲ ಮತ್ತು ನಮ್ಮ ಶಕ್ತಿಯ ಮೇಲೆ ನಂಬಿಕೆ ಇಡಬೇಕು. ನಮ್ಮ ಪ್ರಯತ್ನದಲ್ಲಿ ಎದುರಾಗುವ ಸವಾಲುಗಳಿಗೆ ಕುಗ್ಗಬಾರದು. ನಮ್ಮ ದೌರ್ಬಲ್ಯ ಏನು ಎಂದು ಕಂಡುಕೊಂಡು, ಅದನ್ನು ತಿದ್ದಿಕೊಂಡು ಮುನ್ನಡೆಯಬೇಕು’ ಎಂದು ಸಾಕ್ಷಿ ಮೇಘನಾ ಸಲಹೆ ನೀಡಿದರು.

‘ಹೆಣ್ಣುಮಕ್ಕಳು ತಮಗಾಗಿ ತಾವು  ಬದುಕುವುದನ್ನು ಕೂಡ ಕಲಿಯಬೇಕು. ಸುಖ–ದುಃಖ ಎಂಬುದು ನಮ್ಮೆರಡು ಕಣ್ಣುಗಳು ಎಂದು ತಿಳಿಯಬೇಕು. ಎಲ್ಲ ಸಾಧಕರ ಹಿಂದೆ ಸಂಘರ್ಷದ ಕಥೆ ಇರುತ್ತದೆ. ಯಾರೂ ಸುಲಭವಾಗಿ ಸಾಧನೆ ಮಾಡಿರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಸುಕೃತಾ ವಾಗ್ಲೆ ಮಾತನಾಡಿ, ‘ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಅದನ್ನು ಪ್ರೀತಿಸುವುದನ್ನು ಕಲಿಯಬೇಕು. ಆತ್ಮವಿಶ್ವಾಸ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ’ ಕಿವಿ ಮಾತು ಹೇಳಿದರು.

‘ಹೆಣ್ಣು ಮಕ್ಕಳು ಮೊದಲ ಆದ್ಯತೆಯನ್ನು ಹೆತ್ತವರು, ಗಂಡ, ಮಕ್ಕಳಿಗೆ ನೀಡುತ್ತಾರೆ. ಅವರಿಗಾಗಿ ಯಾವ ತ್ಯಾಗವನ್ನಾದರೂ ಮಾಡುತ್ತಾರೆ. ಪ್ರಾಣ ನೀಡಲೂ ಸಿದ್ಧರಿರುತ್ತಾರೆ. ಅದು ನಮ್ಮ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ನಾವು ಸರಿ ಇದ್ದರೆ, ಆರೋಗ್ಯವಾಗಿದ್ದರೆ ಮಾತ್ರ ಎಲ್ಲ ನಮ್ಮ ಜೊತೆಗೆ ಇರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಂಡು ಬದುಕಬೇಕು’ ಎಂದು ತಿಳಿಸಿದರು.

ಯಾವುದೇ ಕಾರ್ಯಕ್ರಮ ಇದ್ದಾಗ ಸೀರೆ ಉಡುವುದಕ್ಕೇ ಹೆಣ್ಣು ಮಕ್ಕಳ ಸಮಯ ಹೆಚ್ಚು ವ್ಯಯವಾಗುತ್ತದೆ. ಅದನ್ನು ತಪ್ಪಿಸುವುದಕ್ಕಾಗಿ, ಸೀರೆಯನ್ನು ನೆರಿಗೆ, ಸೆರಗು ಸಹಿತ ಮೊದಲೇ ಪಿನ್‌ ಮಾಡಿ ಇಟ್ಟುಕೊಳ್ಳುವ ಮತ್ತು ಒಯ್ಯುವ ರೀತಿ ಹಾಗೂ ಕಾರ್ಯಕ್ರಮದ ದಿನ ಐದೇ ನಿಮಿಷದಲ್ಲಿ ಸೀರೆ ಉಡುವ ಬಗೆಯನ್ನು ಅಶ್ವಿನಿ ಶೆಣೈ ತಿಳಿಸಿಕೊಟ್ಟರು.

ಬಾಣಸಿಗರಾದ ಪೂಜಾ ಪಾಟೀಲ ಅವರು ವಿವಿಧ ಅಡುಗೆಗಳ ಬಗ್ಗೆ ಮಾಹಿತಿ ನೀಡಿದರಲ್ಲದೇ ಮಹಾರಾಷ್ಟ್ರದ ತಿನಿಸು ದಹಿ ತಡ್ಕಾ ತಯಾರಿಯ ಪ್ರಾತ್ಯಕ್ಷಿಕೆ ನೀಡಿದರು. ನಿರೂಪಕಿ ನಿಖಿತಾ ಪ್ರೇಕ್ಷಕರಿಗೆ ವಿವಿಧ ಆಟಗಳನ್ನು ಆಡಿಸಿ ಹುರಿದುಂಬಿಸಿದರು.

ಬೀಟ್ ಗುರೂಸ್ ತಂಡ ಡ್ರಮ್ ಸರ್ಕಲ್ ಪ್ರದರ್ಶನ ನೀಡಿದರು - ಪ್ರಜಾವಾಣಿ ಚಿತ್ರ 
ನಟಿ ಸಾಕ್ಷಿ ಮೇಘನಾ ಮಾತನಾಡಿದರು -ಪ್ರಜಾವಾಣಿ ಚಿತ್ರ
ನಟಿ ಸುಕೃತಾ ವಾಗ್ಲೆ ಮಾತನಾಡಿದರು -ಪ್ರಜಾವಾಣಿ ಚಿತ್ರ
ಅಶ್ವಿನಿ ಶೆಣೈ ಅವರು ಸೀರೆ ಉಡುವ ಕಲೆ ಮತ್ತು ಮೇಕಪ್ ಕಾರ್ಯಾಗಾರ ನಡೆಸಿಕೊಟ್ಟರು -ಪ್ರಜಾವಾಣಿ ಚಿತ್ರ
ಪೂಜಾ ಪಾಟೀಲ ಅಡುಗೆ ಮಾಡುತ್ತಿರುವ ದೃಶ್ಯ - ಪ್ರಜಾವಾಣಿ ಚಿತ್ರ
ಭೂಮಿಕಾ ಕ್ಲಬ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.