ಬೆಂಗಳೂರು: ನಗರದ ಹೊರ ವಲಯದ ಕಾರ್ಖಾನೆಯೊಂದರಲ್ಲಿ ನಾಡ ದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆ ಸಿದ್ದಗೊಳ್ಳುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದರು.
ವಿಧಾನಸೌಧ ಪಶ್ಚಿಮ ದ್ವಾರದ ಮುಂಭಾಗ ಈ ಪ್ರತಿಮೆ ಸ್ಥಾಪಿಸಿ, ಮುಂಬರುವ ನವೆಂಬರ್ 1ರಂದು ಅನಾವರಣ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ. 25 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ನೆಲಮಟ್ಟದಿಂದ ಒಟ್ಟು 41 ಅಡಿ ಎತ್ತರ ಇರಲಿದೆ. ಕರ್ನಾಟಕ ನಕ್ಷೆಯ ಕಂಚಿನ ಉಬ್ಬು ಶಿಲ್ಪವನ್ನೂ ಯೋಜನೆ ಒಳಗೊಂಡಿದ್ದು, ಪ್ರತಿಮೆ ಹಾಗೂ ಉಬ್ಬು ಶಿಲ್ಪ ಒಟ್ಟು 31.50 ಟನ್ ತೂಕ ಹೊಂದಿರಲಿದೆ.
ಬಾಗಲಗುಂಟೆಯಲ್ಲಿರುವ ಶಿಲ್ಪಿ ಕೆ. ಶ್ರೀಧರರ್ಮೂರ್ತಿ ಅವರ ಕಾರ್ಖಾನೆಗೆ ಭೇಟಿ ನೀಡಿದ ಸಚಿವರು, ಪ್ರತಿಮೆ ನಿರ್ಮಾಣ ಕೆಲಸದ ಮಾಹಿತಿ ಪಡೆದುಕೊಂಡರು.
‘ಮೊದಲು ಸಿಮೆಂಟ್‌ನಲ್ಲಿ ಪ್ರತಿಮೆ ನಿರ್ಮಿಸಿ, ನಂತರ ಫೈಬರ್ ಗ್ಲಾಸ್‌ನಲ್ಲಿ ಅಚ್ಚು ತೆಗೆಯಲಾಗುತ್ತದೆ. ಅದಕ್ಕೆ ಕಂಚಿನಲ್ಲಿ ಎರಕ ಹಾಕಲಾಗುತ್ತದೆ. ಈಗಾಗಲೇ ಸಿಮೆಂಟ್‌ನಲ್ಲಿ ಪ್ರತಿಮೆ ನಿರ್ಮಿಸಲಾಗಿದ್ದು, 45 ದಿನಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದು ಶಿಲ್ಪಿ ಶ್ರೀಧರಮೂರ್ತಿ ತಿಳಿಸಿದರು.
‘ನಾಡ ದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯ ಕೆತ್ತನೆ ಅಳವಡಿಸಲಾಗುತ್ತದೆ. ಹೊಯ್ಸಳ, ಚಾಲುಕ್ಯ, ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿಕೊಂಡು ಈ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಹೊಯ್ಸಳ ಲಾಂಛನ, ವೈಜಯಂತಿ ಮಾಲೆ ಕಂಠಿಹಾರ, ಗಂಡಭೇರುಂಡ ರಾಜಲಾಂಛನಗಳು ಇರಲಿವೆ’ ಎಂದು ಅಧಿಕಾರಿಗಳು ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಪರಿಶೀಲನೆ ವೇಳೆ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕಿ ಕೆ. ಧರಣೀದೇವಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.