ADVERTISEMENT

ರಾಜರಾಜೇಶ್ವರಿನಗರ: ಮುಂದಿನ ವರ್ಷದಿಂದ ‘ದೊಡ್ಡ ಆಲದ ಮರ ಉತ್ಸವ’

'ಯೂನಿವರ್ಸೆಲ್ ಮ್ಯಾರಥಾನ್‌‘ನಲ್ಲಿ ಪರಿಸರವಾದಿ ಅ.ನ.ಯಲ್ಲಪ್ಪರೆಡ್ಡಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 15:52 IST
Last Updated 16 ಜೂನ್ 2024, 15:52 IST
ಕೇತೋಹಳ್ಳಿಯ ದೊಡ್ಡ ಆಲದಮರದ ಬಳಿ ಹಮ್ಮಿಕೊಂಡಿದ್ದ  ‘ದೊಡ್ಡ ಆಲದಮರ ಉಳಿಸಿ’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರನ್ನು ಯೂನಿವರ್ಸಲ್ ಸ್ಕೂಲ್ ಆಫ್‌ ಅಡ್ಮಿನಿಸ್ಟ್ರೇಷನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಸನ್ಮಾನಿಸಿದರು. ಸಮಾಜ ಸೇವಕ ರಾಕೇಶ್‍ಗೌಡ, ಅ.ನ.ಯಲ್ಲಪ್ಪರೆಡ್ಡಿ, ಸಂತೋಷ್ ಶೆಟ್ಟಿ  ಭಾಗವಹಿಸಿದ್ದರು.
ಕೇತೋಹಳ್ಳಿಯ ದೊಡ್ಡ ಆಲದಮರದ ಬಳಿ ಹಮ್ಮಿಕೊಂಡಿದ್ದ  ‘ದೊಡ್ಡ ಆಲದಮರ ಉಳಿಸಿ’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರನ್ನು ಯೂನಿವರ್ಸಲ್ ಸ್ಕೂಲ್ ಆಫ್‌ ಅಡ್ಮಿನಿಸ್ಟ್ರೇಷನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಸನ್ಮಾನಿಸಿದರು. ಸಮಾಜ ಸೇವಕ ರಾಕೇಶ್‍ಗೌಡ, ಅ.ನ.ಯಲ್ಲಪ್ಪರೆಡ್ಡಿ, ಸಂತೋಷ್ ಶೆಟ್ಟಿ  ಭಾಗವಹಿಸಿದ್ದರು.   

ರಾಜರಾಜೇಶ್ವರಿನಗರ: ಸರ್ಕಾರದಿಂದ ಅನುಮತಿ ಪಡೆದು ಮುಂದಿನ ವರ್ಷದಿಂದ ‘ವಿಶ್ವಪಾರಂಪರಿಕ ತಾಣ–3 ದೊಡ್ಡ ಆಲದಮರ ಉತ್ಸವ’ ಆಚರಿಸೋಣ ಎಂದು ಪರಿಸರವಾದಿ ಅ.ನ. ಯಲ್ಲಪ್ಪರೆಡ್ಡಿ ತಿಳಿಸಿದರು.

ಯೂನಿವರ್ಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಷನ್‌, ರಾಜರಾಜೇಶ್ವರಿ ವೈದ್ಯಕೀಯ ಆಸ್ಪತ್ರೆ ಮತ್ತು ವಿವಿಧ ಶಾಲಾ – ಕಾಲೇಜುಗಳ ಸಹಯೋದಲ್ಲಿ ಕೇತೋಹಳ್ಳಿ ಸಮೀಪದ ದೊಡ್ಡ ಆಲದ ಮರ ಬಳಿ ಭಾನುವಾರ ಆಯೋಜಿಸಿದ್ದ ‘ದೊಡ್ಡ ಆಲದಮರ ಉಳಿಸಿ ಯೂನಿವರ್ಸಲ್‌ ಮ್ಯಾರಥಾನ್‌‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದೊಡ್ಡ ಆಲ‌ದ ಮರದ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಈ ಉತ್ಸವವನ್ನು ಆಚರಿಸೋಣ‘ ಎಂದರು.

ADVERTISEMENT

‘ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಶುದ್ದ ಗಾಳಿ, ನೀರು, ಆಹಾರ ನೀಡುತ್ತಿರುವ ಪರಿಸರ, ಪ್ರಕೃತಿಯೇ ನಿಜವಾದ ದೇವರು. ನಾವೆಲ್ಲರೂ ಗಿಡ, ಮರ, ಬೆಟ್ಟ, ಗುಡ್ಡ, ಜಲ ಮೂಲಗಳನ್ನು ಉಳಿಸುವ ಕೆಲಸ ಮಾಡಬೇಕಾಗಿದೆ’ ಎಂದು ಅವರು ಕರೆ ನೀಡಿದರು.

ಸಾಲುಮರದ ತಿಮ್ಮಕ್ಕ ಮಾತನಾಡಿ, ‘ಗಿಡ–ಮರಗಳಿಂದ ಜಗತ್ತು ಉಳಿದಿದೆ. ಮರಗಳನ್ನು ಕಡಿಯಬೇಡಿ. ಮಳೆ, ಬೆಳೆಗೆ ಅಡ್ಡಿಮಾಡಬೇಡಿ. ಕೆರೆಗಳನ್ನು ಉಳಿಸಿ, ಪ್ರತಿ ಮನೆ, ಊರಿನಲ್ಲಿ ಗಿಡಗಳನ್ನು ನೆಡಿ‘ ಎಂದರು.

ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಸಮೂಹ ಸಂಸ್ಥೆಯ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ‘ನಾವೆಲ್ಲರೂ ಮರ, ಗಿಡ, ಪರಿಸರ, ಬೆಟ್ಟ–ಗುಡ್ಡಗಳನ್ನು ರಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ‘ ಎಂದರು. ‘ದೊಡ್ಡ ಆಲದ ಮರ ರಕ್ಷಿಸಲು ಸರ್ಕಾರಕ್ಕೆ ಆರ್ಥಿಕ ತೊಂದರೆಯಾದರೆ, ಸಹಾಯಧನ ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ರಾಜರಾಜೇಶ್ವರಿ ವೈದ್ಯಕೀಯ ಆಸ್ಪತ್ರೆ ಅಧೀಕ್ಷಕ ಡಾ.ಪ್ರವೀಣ್‍ಕುಮಾರ್, ‘ದೊಡ್ಡಾಲದಮರ ಸೇರಿದಂತೆ ಅರಣ್ಯ, ಬೆಟ್ಟ, ನದಿ, ಕೆರೆಗಳನ್ನು ರಕ್ಷಿಸುವ ಜೊತೆಗೆ, ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಬೇಕಿದೆ‘ ಎಂದು ಹೇಳಿದರು.

ಸಮಾಜ ಸೇವಕ ರಾಮೋಹಳ್ಳಿಯ ಚೇತನ್‍ಗೌಡ, ರಾಕೇಶ್‍ಗೌಡ ಮಾತನಾಡಿ ದೊಡ್ಡಾಲದದಮರದ ಸುತ್ತಮುತ್ತ ಉದ್ಯಾನವನ ನಿರ್ಮಿಸಿದರೆ, ಅಲ್ಲಿನ ಭದ್ರತಾ ಸಿಬ್ಬಂದಿಗೆ ತಗುಲುವ ವೇತನವನ್ನು ಪ್ರತಿ ತಿಂಗಳು ನೀಡುವುದಾಗಿ ಭರವಸೆ ನೀಡಿದರು. 

ರಾಮೋಹಳ್ಳಿ ಗೇಟ್ ಬಳಿ  ಮ್ಯಾರಾಥಾನ್‍ಗೆ ಚಾಲನೆ ನೀಡಲಾಯಿತು. ಪ್ರಾಂಶುಪಾಲ ಪ್ರೊ.ಜಯರಾಮ, ಕಿರಣ್‍ಶೆಟ್ಟಿ, ಗ್ರಾ.ಪಂ.ಸದಸ್ಯ ರವಿಕುಮಾರ್, ಸಂತೋಷ್ ಶೆಟ್ಟಿ, ಎನ್‍ಎಸ್‍ಎಸ್‍ನ ರಾಮಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.