ADVERTISEMENT

₹ 20 ಸಾವಿರಕ್ಕೆ ಹುಲಿ ಉಗುರು ಖರೀದಿಸಿದ್ದ ಸಂತೋಷ್

* ವನ್ಯಜೀವಿ ಸಂರಕ್ಷಣಾ ಕಾಯ್ದೆ: ‘ಬಿಗ್‌ಬಾಸ್‌’ ಮನೆಯಲ್ಲಿದ್ದ ವರ್ತೂರು ಸಂತೋಷ್ ಬಂಧನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2023, 16:13 IST
Last Updated 24 ಅಕ್ಟೋಬರ್ 2023, 16:13 IST
ವರ್ತೂರು ಸಂತೋಷ್
ವರ್ತೂರು ಸಂತೋಷ್   

ಬೆಂಗಳೂರು: ಹುಲಿ ಉಗುರು ಧರಿಸಿದ್ದ ಆರೋಪದಡಿ ‘ಬಿಗ್‌ಬಾಸ್’ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ (34) ಅವರನ್ನು ಕಗ್ಗಲೀಪುರ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಬಂಧಿಸಿದ್ದು, ಆರೋಪಿಯನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ವರ್ತೂರು ನಿವಾಸಿ ಸಂತೋಷ್, ಕಲರ್ಸ್ ಕನ್ನಡ ವಾಹಿನಿಯ 10ನೇ ಆವೃತ್ತಿಯ ‘ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಬೆಂಗಳೂರು ಹೊರವಲಯದಲ್ಲಿರುವ ‘ಬಿಗ್‌ಬಾಸ್‌’ ಮನೆಗೆ ಭಾನುವಾರ ಸಂಜೆ ಹೋಗಿದ್ದ ವಲಯ ಅರಣ್ಯಾಧಿಕಾರಿ ಗೋವಿಂದರಾಜು ನೇತೃತ್ವದ ತಂಡ, ಸಂತೋಷ್ ಅವರನ್ನು ಬಂಧಿಸಿದೆ.

‘ಹುಲಿಯ ಎರಡು ಉಗುರು ಒಳಗೊಂಡಿದ್ದ ಚಿನ್ನದ ಲಾಕೆಟ್‌ನ್ನು ಸಂತೋಷ್ ಧರಿಸಿದ್ದರು. ಹುಲಿಯನ್ನು ಕೊಂದು ಅದರಿಂದ ಉಗುರು ತೆಗೆದು ಮಾರಾಟ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸಂತೋಷ್‌ನನ್ನು ಬಂಧಿಸಲಾಗಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ಹೇಳಿವೆ.

ADVERTISEMENT

‘ಆರೋಪಿಯಿಂದ ಹುಲಿ ಉಗುರುಗಳನ್ನು ಜಪ್ತಿ ಮಾಡಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜೊತೆಗೆ, ಉಗುರು ಬಗ್ಗೆ ಸಂತೋಷ್ ಹೇಳಿಕೆ ಪಡೆಯಲಾಗಿದೆ. ಇದೊಂದು ಜಾಮೀನು ರಹಿತ ಪ್ರಕರಣ. ಆರೋಪಿಗೆ ನ್ಯಾಯಾಂಗ ಬಂಧನವಾಗಿದ್ದು, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಿಟ್ಟು ಬರಲಾಗಿದೆ’ ಎಂದು ತಿಳಿಸಿವೆ.

ಜಾಮೀನು ಕೋರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಂತೋಷ್ ಅರ್ಜಿ ಸಲ್ಲಿಸಿದ್ದಾರೆ.

ತಮಿಳುನಾಡಿನಲ್ಲಿ ಖರೀದಿ: ‘ಮೂರು ವರ್ಷಗಳ ಹಿಂದೆ ತಮಿಳುನಾಡು ಹೊಸೂರು ಬಳಿಯ ಗ್ರಾಮವೊಂದರ ವ್ಯಕ್ತಿಯೊಬ್ಬರಿಂದ ₹ 20 ಸಾವಿರಕ್ಕೆ ಎರಡು ಉಗುರುಗಳನ್ನು ಖರೀದಿಸಿದ್ದೆ. ವರ್ತೂರಿನ ಚಿನ್ನ ವ್ಯಾಪಾರಿಯೊಬ್ಬರು ಉಗುರಿಗೆ ತಕ್ಕಂತೆ ಲಾಕೆಟ್ ಮಾಡಿಕೊಟ್ಟಿದ್ದರು. ಹುಲಿ ಉಗುರು ಧರಿಸುವುದು ಅಪರಾಧವೆಂಬುದು ನನಗೆ ಗೊತ್ತಿರಲಿಲ್ಲ’ ಎಂದು ಸಂತೋಷ್ ಹೇಳಿಕೆ ನೀಡಿರುವುದಾಗಿ ಗೊತ್ತಾಗಿದೆ.

‘ಆರೋಪಿ ಹೇಳಿಕೆ ನಿಜವೆಂದು ಹೇಳಲಾಗದು. ಹುಲಿಯನ್ನು ಬೇಟೆಯಾಡಿ ಕೊಂದಿರುವ ಅನುಮಾನ ದಟ್ಟವಾಗಿದೆ. ತನಿಖೆಯಿಂದ ನಿಜಾಂಶ ತಿಳಿಯಬೇಕಿದೆ. ಸಂತೋಷ್ ಹಾಗೂ ಇತರರ ಮೇಲಿನ ಆರೋಪ ಸಾಬೀತಾದರೆ, 7 ವರ್ಷಗಳ ಜೈಲು ಹಾಗೂ ₹5 ಲಕ್ಷದಿಂದ ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ’ ಎಂದು ಮೂಲಗಳು ಹೇಳಿವೆ.

ಜಪ್ತಿ ಮಾಡಲಾದ ಹುಲಿ ಉಗುರುಗಳು ಹಾಗೂ ಚಿನ್ನದ ಲಾಕೆಟ್

‘ಚಿನ್ನದ ವ್ಯಾಪಾರಿ ಸ್ನೇಹಿತನಿಗೆ ನೋಟಿಸ್’

‘ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸಂತೋಷ್ ಸ್ನೇಹಿತ ಹಾಗೂ ಚಿನ್ನದ ವ್ಯಾಪಾರಿಗೆ ನೋಟಿಸ್ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ. ‘ಹುಲಿ ಉಗುರು ನೀಡಿದ್ದ ವ್ಯಕ್ತಿ ಹೆಸರು ಗೊತ್ತಿಲ್ಲವೆಂದು ಸಂತೋಷ್ ಹೇಳುತ್ತಿದ್ದಾನೆ. ಹೀಗಾಗಿ ಸ್ನೇಹಿತನನ್ನು ವಿಚಾರಣೆ ನಡೆಸಬೇಕಿದೆ. ಜೊತೆಗೆ ಚಿನ್ನದ ಲಾಕೆಟ್ ಮಾಡಿಕೊಟ್ಟ ವ್ಯಾಪಾರಿಯ ಹೇಳಿಕೆ ಸಹ ಪಡೆಯಬೇಕಿದೆ’ ಎಂದು ಹೇಳಿವೆ.

‘ದರ್ಶನ್, ರಾಕ್‌ಲೈನ್‌ ಕೊರಳಲ್ಲೂ ಉಗುರು’

ನಟ ದರ್ಶನ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಅವರು ಸಹ ಕೊರಳಿನಲ್ಲಿ ಹುಲಿ ಉಗುರಿನ ಲಾಕೆಟ್‌ ಧರಿಸುತ್ತಾರೆಂದು ಹೇಳಲಾಗುತ್ತಿದ್ದು ಅವರಿಬ್ಬರ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ‘ಸಂತೋಷ್ ಹಲವು ವರ್ಷಗಳಿಂದ ಲಾಕೆಟ್ ಧರಿಸಿದ್ದಾರೆ. ಆದರೆ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಹುಲಿ ಉಗುರು ಧರಿಸಿದ್ದಾರೆ ಎನ್ನಲಾದ ದರ್ಶನ್ ರಾಕ್‌ಲೈನ್ ವೆಂಕಟೇಶ್‌ ಅವರನ್ನೂ ವಿಚಾರಣೆ ನಡೆಸಿ’ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.