ಬೆಂಗಳೂರು: ಬಾಲಕಿಯೊಬ್ಬರನ್ನು ಅಕ್ರಮವಾಗಿ ದತ್ತು ಪಡೆದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟ ಆರೋಪದಡಿ ರೀಲ್ಸ್ ಸ್ಟಾರ್ ಹಾಗೂ ಕಿರುತೆರೆ ನಟಿ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಬಾಲಕಿ ದತ್ತು ಸಂಬಂಧ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿ ದೂರು ನೀಡಿದ್ದರು. ಬಾಲನ್ಯಾಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು, ಸೋನು ಗೌಡ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರುತ್ತೇವೆ’ ಎಂದು ಪೊಲೀಸರು ಹೇಳಿದರು.
‘ರಾಯಚೂರಿನ ದಂಪತಿಯ ಮಗಳನ್ನು ಅಕ್ರಮವಾಗಿ ದತ್ತು ಪಡೆದಿದ್ದ ಸೋನು ಗೌಡ, ತನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ಬಾಲಕಿ ಜೊತೆ ರೀಲ್ಸ್ ವಿಡಿಯೊ ಸಹ ಮಾಡುತ್ತಿದ್ದರು. ಕಾನೂನು ಬದ್ಧವಾಗಿಯೇ ಬಾಲಕಿಯನ್ನು ದತ್ತು ಪಡೆಯುತ್ತಿರುವುದಾಗಿ' ಸೋನುಗೌಡ ಹೇಳಿಕೊಂಡಿದ್ದರು.
ವಿಡಿಯೊ ಗಮನಿಸಿದ್ದ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದರು. ಮಕ್ಕಳ ದತ್ತು ಸಂಬಂಧ ಕಾಯ್ದೆ ಜಾರಿಯಲ್ಲಿದ್ದು, ಅದರ ನಿಯಮಗಳನ್ನು ಸೋನುಗೌಡ ಪಾಲಿಸಿಲ್ಲವೆಂಬುದು ಗೊತ್ತಾಗಿತ್ತು. ಹೀಗಾಗಿ, ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರು.
‘ಮಕ್ಕಳ ದತ್ತು ಪಡೆಯಬೇಕಾದರೆ ಮೊದಲಿಗೆ ಅರ್ಜಿ ಸಲ್ಲಿಸಬೇಕು. ದತ್ತು ಸ್ವೀಕಾರಕ್ಕೆ ಸರದಿ ಪ್ರಕಾರ ಮಕ್ಕಳನ್ನು ನಿಗದಿಪಡಿಸಲಾಗಿರುತ್ತದೆ. ಸರದಿ ಪ್ರಕಾರವೇ ಮಕ್ಕಳನ್ನು ದತ್ತು ಪಡೆಯಬೇಕು. ಜೊತೆಗೆ, ಮಗುವಿನ ಫೋಟೊ ಹಾಗೂ ವಿಡಿಯೊವನ್ನು ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಬಾರದು. ಈ ಎಲ್ಲ ನಿಯಮಗಳನ್ನು ಸೋನುಗೌಡ ಉಲ್ಲಂಘಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.
ಬಾಲಕಿ ಹೆಸರಿನಲ್ಲಿ ಹಣ ಸಂಪಾದನೆ:
‘ಬಾಲಕಿಯನ್ನು ಮುಂದಿಟ್ಟುಕೊಂಡು ವಿಡಿಯೊ ಮಾಡಿ ಸೋನುಗೌಡ ಹಣ ಸಂಪಾದಿಸುತ್ತಿರುವ ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಾಲಕಿಯಿಂದ ಬಂದ ಹಣವನ್ನು ಪೋಷಕರಿಗೆ ನೀಡುತ್ತೇನೆ’ ಎಂದು ಸೋನುಗೌಡ ಅವರೇ ವಿಡಿಯೊದಲ್ಲಿ ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.