ಬೆಂಗಳೂರು: ನಗರದ ವಿವಿಧ ಅಪಾರ್ಟ್‌ಮೆಂಟ್, ಮನೆಗಳ ಎದುರು ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡುವ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನ್ಯೂ ಗುರಪ್ಪನಪಾಳ್ಯದ ನಿವಾಸಿ ಸಮೀರುದ್ದೀನ್(22), ಬಿಟಿಎಂ ಎರಡನೇ ಹಂತದ ನಿವಾಸಿ ಪಿ.ಆದೀಶ್(21), ಬೇಗೂರಿನ ಶಾಬಾದ್ ಖಾನ್(27), ಮೈಲಸಂದ್ರದ ಹನುಮೇಶ್(19), ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲ್ಲೂಕಿನ ಸರ್ಜಾಪುರದ ನಿವಾಸಿ ಎಂ.ಚಂದನ್(19) ಹಾಗೂ ಆಡುಗೋಡಿಯ ಅಂಬೇಡ್ಕರ್ ನಗರದ ಬೃಂದಾವನ ಗಾರ್ಡನ್ ನಿವಾಸಿ ಆರ್. ಅಶೋಕ್ ಬಂಧಿತ ಆರೋಪಿಗಳು. ಎಲ್ಲರೂ ಸ್ನೇಹಿತರಾಗಿದ್ದರೂ ಒಟ್ಟಾಗಿ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಬಂಧಿತರಿಂದ ₹11.60 ಲಕ್ಷ ಮೌಲ್ಯದ ವಿವಿಧ ಕಂಪನಿಯ 29 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಠಾಣಾ ವ್ಯಾಪ್ತಿಯ ಬಿಳೇಕಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಎದುರು ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನ ನಿಲುಗಡೆ ಮಾಡಿ ಕೀ ಅನ್ನು ಅಲ್ಲೇ ಬಿಟ್ಟು ತೆರಳಿದ್ದರು. ವಾಪಸ್ ಬಂದು ನೋಡಿದಾಗ ಸ್ಥಳದಲ್ಲಿ ದ್ವಿಚಕ್ರ ವಾಹನ ಇರಲಿಲ್ಲ. ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳ ಬಂಧನದಿಂದ ಮೈಕೋ ಲೇಔಟ್, ಮಡಿವಾಳ, ಎಸ್‌ಜಿ ಪಾಳ್ಯ, ತಿಲಕ್‌ನಗರ, ಜೆ.ಪಿ. ನಗರ, ತಲಘಟ್ಟಪುರ, ಪುಟ್ಟೇನಹಳ್ಳಿ, ಬೇಗೂರು, ಎಚ್.ಎಸ್.ಆರ್. ಲೇಔಟ್, ಎಸ್.ಜೆ. ಪಾರ್ಕ್, ಕಗ್ಗಲಿಪುರ, ಸರ್ಜಾಪುರ ಸೇರಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 17 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆ ಆಗಿವೆ’ ಎಂದು ಪೊಲೀಸರು ಹೇಳಿದರು.
ವ್ಹೀಲಿಗೆ ಬಳಕೆ: ಕಳ್ಳತನ ಮಾಡಿದ ದ್ವಿಚಕ್ರ ವಾಹನಗಳನ್ನು ವ್ಹೀಲಿ ಮಾಡಲು ಆರೋಪಿಗಳು ಬಳಸುತ್ತಿದ್ದರು. ಇನ್ನೂ ಕೆಲವು ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.