ADVERTISEMENT

ತಡೆಗೋಡೆಗೆ ಬೈಕ್‌ ಡಿಕ್ಕಿ: ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:50 IST
Last Updated 7 ಜುಲೈ 2024, 15:50 IST
   

ಬೆಂಗಳೂರು: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಬಿಎಸ್‌ಎಫ್‌ ಕ್ಯಾಂಪ್‌ ಬಳಿ ಬೈಕ್‌ ಒಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಗಲೂರಿನಲ್ಲಿ ನೆಲೆಸಿದ್ದ ಮೊಹಮ್ಮದ್‌ ಸುಹೇಲ್‌(25) ಮೃತ ಸವಾರ. ಹಿಂಬದಿ ಸವಾರ ಅನಿರುದ್ಧ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.‌

ಕೇರಳದ ಮೊಹಮ್ಮದ್‌ ಸುಹೇಲ್‌ ಅವರು ಇಂಡಿಗೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಗರದ ಬಾಗಲೂರಿನಲ್ಲಿ ಸ್ನೇಹಿತ ಅನಿರುದ್ಧ್‌ ಜತೆಗೆ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದರು. ಶನಿವಾರ ರಾತ್ರಿ ಇಬ್ಬರೂ ಹುಣಸಮಾರನಹಳ್ಳಿಯಲ್ಲಿ ಊಟು ಮುಗಿಸಿಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದರು. ಬಿಎಸ್‌ಎಫ್‌ ಕ್ಯಾಂಪ್‌ ಬಳಿ ಬರುವಾಗ ನಿಯಂತ್ರಣ ತಪ್ಪಿದ ಬೈಕ್‌ ರಸ್ತೆಯ ಎಡಭಾಗದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ADVERTISEMENT

ಡಿಕ್ಕಿಯ ರಭಸಕ್ಕೆ ಸವಾರರಿಬ್ಬರೂ ಬೈಕ್‌ ಸಹಿತ ರಸ್ತೆಗೆ ಬಿದ್ದಿದ್ದರು. ಹೆಲ್ಮೆಟ್‌ ಧರಿಸದ ಕಾರಣ ಸವಾರ ಸುಹೇಲ್‌ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಸ್ಥಳೀಯರ ನೆರವಿನಿಂದ ಅವರನ್ನು ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭಾನುವಾರ ಮುಂಜಾನೆ ಸುಹೇಲ್‌ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಅನಿರುದ್ಧ್‌ ಅವರ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಅತಿವೇಗ, ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.