ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಸ್‌ಮಸ್ ಹಬ್ಬ ಆಚರಿಸಿರುವುದನ್ನು ಶ್ಲಾಘಿಸಿರುವ ಬೆಂಗಳೂರಿನ ಧರ್ಮ ಪ್ರಾಂತ್ಯದ ಆರ್ಚ್‌ಬಿಷಪ್ ಪೀಟರ್ ಮಚಾಡೊ ಅವರು, ‘ದೇಶದಾದ್ಯಂತ ಕ್ರೈಸ್ತ ಸಮುದಾಯವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೂ ಇದೇ ರೀತಿ ಸ್ಪಂದಿಸಿ’ ಎಂದು ಮನವಿ ಮಾಡಿದ್ದಾರೆ.
‘ಕರುಣೆ ಮತ್ತು ಸೇವೆ ಏಸುಕ್ರಿಸ್ತನ ಸಂದೇಶವಾಗಿತ್ತು ಎಂದು ಮೋದಿಯವರು ಹೇಳಿದ್ದಾರೆ. ಈ ಸಂದೇಶವನ್ನು ಅವರು ಸಕಾರಾತ್ಮಕವಾಗಿ ಮುಂದುವರಿಸಲು ಕ್ರೈಸ್ತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವತ್ತ ಕಾರ್ಯಪ್ರವೃತ್ತರಾಗಬೇಕು. ಕ್ರೈಸ್ತರ ವಿರುದ್ಧದ ದ್ವೇಷ ಭಾಷಣಗಳು, ಚರ್ಚ್‌ಗಳು ಹಾಗೂ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗಳನ್ನು ನಿಯಂತ್ರಿಸಬೇಕು. ದೇಶದ ವಿವಿಧ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ಕ್ರೈಸ್ತರನ್ನು ಸಾಂವಿಧಾನಿಕ ಹಕ್ಕುಗಳಿಂದ ವಂಚಿಸುವ ಕೆಲಸ ನಡೆಯುತ್ತಿದೆ. ಇಂಥ ಸಂದರ್ಭಗಳಲ್ಲಿ ಪ್ರಧಾನ ಮಂತ್ರಿ ಸಚಿವಾಲಯವು ಮಧ್ಯಪ್ರವೇಶಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ವಿನಂತಿಸಿದ್ದಾರೆ.
‘ಹೊತ್ತಿ ಉರಿಯುತ್ತಿರುವ ಮಣಿಪುರ ಸಮಸ್ಯೆಗೆ ಪ್ರಧಾನಿಯವರು ಶೀಘ್ರವೇ ಪರಿಹಾರ ಕಲ್ಪಿಸಬೇಕು. ಇದು ಜನಾಂಗೀಯ ಸಮಸ್ಯೆಯಾಗಿ ಕಂಡರೂ, ಅಲ್ಲಿನ ಕ್ರೈಸ್ತ ಸಮುದಾಯದವರ ಮೇಲೆ ಆಳವಾದ ಗಾಯವನ್ನುಂಟು ಮಾಡಿದೆ’ ಎಂದು ಅವರು ಹೇಳಿದ್ದಾರೆ.
‘ಕ್ರೈಸ್ತ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಲಿತ ಕ್ರೈಸ್ತರ ಮೀಸಲಾತಿ ಸಮಸ್ಯೆಯನ್ನು ಮುತ್ಸದ್ದಿತನದಿಂದ ಬಗೆಹರಿಸಬೇಕು. ಯಾವುದೇ ಸಮುದಾಯದಲ್ಲಿರುವ ದಲಿತರಿಗೆ ಸಮಾನ ಸ್ಥಾನಮಾನ ಕಲ್ಪಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.