ADVERTISEMENT

60.6 ಬಿಟ್ ಕಾಯಿನ್ ಕದ್ದಿದ್ದ ಶ್ರೀಕಿ ಸೆರೆ: ಎಸ್‌ಐಟಿ ತನಿಖೆಗೆ ಮಹತ್ವದ ತಿರುವು

ಅಂದು ₹ 1.45 ಕೋಟಿ, ಇಂದು ₹ 32.48 ಕೋಟಿ ಮೌಲ್ಯ

​ಪ್ರಜಾವಾಣಿ ವಾರ್ತೆ
Published 7 ಮೇ 2024, 23:50 IST
Last Updated 7 ಮೇ 2024, 23:50 IST
ಶ್ರೀಕಿ
ಶ್ರೀಕಿ   

ಬೆಂಗಳೂರು: ‘ಬಿಟ್ ಕಾಯಿನ್ ಅಕ್ರಮ’ ಸಂಬಂಧ ಎಸ್‌ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳು ನಡೆಸುತ್ತಿರುವ ತನಿಖೆಯು ಮಹತ್ವದ ತಿರುವು ಪಡೆದುಕೊಂಡಿದ್ದು, ಅಂತರರಾಷ್ಟ್ರೀಯ ಹ್ಯಾಕರ್ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (29) ಎಸಗಿದ್ದ ಕೃತ್ಯಕ್ಕೆ ಮೊದಲ ಬಾರಿಗೆ ತಾಂತ್ರಿಕ ಪುರಾವೆಯನ್ನು ಪತ್ತೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತುಮಕೂರಿನಲ್ಲಿರುವ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್‌ ಕಾಯಿನ್‌ಗಳನ್ನು (ಸದ್ಯದ ಮಾರುಕಟ್ಟೆ ಮೌಲ್ಯ ₹32.48 ಕೋಟಿ ಮೌಲ್ಯ) ಶ್ರೀಕಿ ಕಳ್ಳತನ ಮಾಡಿದ್ದನೆಂಬುದನ್ನು ತಾಂತ್ರಿಕವಾಗಿ ಪತ್ತೆ ಮಾಡಿರುವ ಎಸ್‌ಐಟಿ ಅಧಿಕಾರಿಗಳು, ಆತನನ್ನು ಮಂಗಳವಾರ ಬಂಧಿಸಿದ್ದಾರೆ.

‘ಆರೋಪಿ ಶ್ರೀಕಿ, 2017ರಲ್ಲಿ ಕೃತ್ಯ ಎಸಗಿದ್ದ. ಈ ಸಂಬಂಧ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿ ನಿರ್ದೇಶಕ ಬಿ.ವಿ. ಹರೀಶ್ ಅವರು ತುಮಕೂರಿನ ನ್ಯೂ ಎಕ್ಸ್‌ಟೆನ್ಶನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡು ಪುರಾವೆಗಳನ್ನು ಪರಿಶೀಲಿಸಿದಾಗ, ಶ್ರೀಕಿಯೇ ಆರೋಪಿ ಎಂಬುದು ಗೊತ್ತಾಗಿದೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪ್ರಕರಣದ ವಿಚಾರಣೆಗೂ ಕೆಲವು ಬಾರಿ ಶ್ರೀಕಿ ಗೈರಾಗಿದ್ದ. ತಲೆಮರೆಸಿಕೊಂಡು ಸುತ್ತಾಡುತ್ತಿದ್ದ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್‌ವೊಂದರಲ್ಲಿ ಆತ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದೇ ಹೋಟೆಲ್‌ನಲ್ಲಿಯೇ ಆತನನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಹೇಳಿದರು.

‘ಶ್ರೀಕಿ ಬಿಟ್ ಕಾಯಿನ್‌ ಕದ್ದಿದ್ದನೆಂಬುದಕ್ಕೆ ಇದುವರೆಗೂ ಸೂಕ್ತ ಪುರಾವೆ ಸಿಕ್ಕಿರಲಿಲ್ಲ. ತುಮಕೂರು ಪ್ರಕರಣದಲ್ಲಿ ಮೊದಲ ಪುರಾವೆ ಲಭ್ಯವಾಗಿದೆ. ಉಳಿದಂತೆ, ಇತರೆ ಪ್ರಕರಣಗಳಲ್ಲಿ ಪುರಾವೆ ಸಂಗ್ರಹಿಸುವ ಕೆಲಸ ಮುಂದುವರಿದಿದೆ. ಅದು ಯಶಸ್ವಿಯಾದರೆ, ಇದೊಂದು ರಾಜ್ಯದ ದೊಡ್ಡ ಹಗರಣ ಎನಿಸಿಕೊಳ್ಳಲಿದೆ’ ಎಂದು ತಿಳಿಸಿದರು.

ಹಲವರಿಗೆ ನೋಟಿಸ್ ಸಾಧ್ಯತೆ
ಶ್ರೀಕಿ ದೋಚಿದ್ದ ಬಿಟ್‌ ಕಾಯಿನ್‌ಗಳ ಪೈಕಿ ಹಲವು ಬಿಟ್‌ ಕಾಯಿನ್‌ಗಳನ್ನು ಬೇರೆಯವರು ಪಡೆದುಕೊಂಡಿರುವ ಮಾಹಿತಿ ಇದೆ. ಶ್ರೀಕಿಯ ಸ್ನೇಹಿತರು ಪರಿಚಯಸ್ಥರಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ವಿವಿಧ ಖಾತೆಗಳಿಗೆ ಹಣ ವರ್ಗಾವಣೆ

‘ಬೆಂಗಳೂರು ಜಯನಗರದ ಶ್ರೀಕಿ  ಹ್ಯಾಕಿಂಗ್‌ನಲ್ಲಿ ನಿಪುಣ. ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯು ಬಿಟ್‌ ಕಾಯಿನ್ ವಿನಿಮಯ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. 2017ರ ಜೂನ್ 23ರಂದು ಕಂಪನಿಯ ಸರ್ವರ್ ಹ್ಯಾಕ್ ಮಾಡಿದ್ದ’ ಎಂದು ಅಧಿಕಾರಿ ತಿಳಿಸಿದರು. ‘ಎರಡು ಪ್ರತ್ಯೇಕ ಕ್ರಿಪ್ಟೊ ಖಾತೆಗಳ ವಿಳಾಸಗಳನ್ನು ಬಳಸಿಕೊಂಡು ಆರೋಪಿ ಕೃತ್ಯ ಎಸಗಿದ್ದ. ಒಂದು ವಿಳಾಸಕ್ಕೆ 1 ಬಿಟ್ ಕಾಯಿನ್ ಹಾಗೂ ಮತ್ತೊಂದು ವಿಳಾಸಕ್ಕೆ 59.6 ಬಿಟ್ ಕಾಯಿನ್‌ಗಳನ್ನು ಆರೋಪಿ ವರ್ಗಾಯಿಸಿಕೊಂಡಿದ್ದ’ ಎಂದು ಹೇಳಿದರು. ‘60.6 ಬಿಟ್ ಕಾಯಿನ್‌ಗಳ ಪೈಕಿ ಕೆಲ ಬಿಟ್‌ ಕಾಯಿನ್‌ಗಳಲ್ಲಿ ಕೆಲ ಏಜೆನ್ಸಿಗಳ ಮೂಲಕ ರೂಪಾಯಿಗೆ ಬದಲಾಯಿಸಿಕೊಂಡಿದ್ದ. ಹೋಟೆಲ್‌ ಬಿಲ್ ಪಾವತಿಸಲು ವಿಮಾನ ಟಿಕೆಟ್ ಕಾಯ್ದಿರಿಸಲು ಊಟದ ಬಿಲ್ ಪಾವತಿಸಲು ಹಾಗೂ ಇತರೆ ವೆಚ್ಚಕ್ಕೆಂದು ಇದೇ ಹಣವನ್ನು ಆರೋಪಿ ಬಳಸಿಕೊಂಡಿದ್ದ. ಜೊತೆಗೆ ಹಲವರ ಖಾತೆಗಳಿಗೂ ಹಣ ವರ್ಗಾಯಿಸಿರುವುದು ಸದ್ಯಕ್ಕೆ ಗೊತ್ತಾಗಿದೆ. ಈ ಬಗ್ಗೆ ಮತ್ತಷ್ಟು ಪುರಾವೆಗಳನ್ನು ಸಂಗ್ರಹಿಸಬೇಕಿದೆ’ ಎಂದು ಅಧಿಕಾರಿ ವಿವರಿಸಿದರು. ‘2017ರಲ್ಲಿ 60.6 ಬಿಟ್‌ ಕಾಯಿನ್‌ಗಳ ಮೌಲ್ಯ ₹ 1.14 ಕೋಟಿ ಇತ್ತು. ಅದೇ ಅವಧಿಯಲ್ಲಿ ಆರೋಪಿ ಬೆಂಗಳೂರು ಹಾಗೂ ಇತರೆ ನಗರಗಳ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದ. ಅಲ್ಲಿಯ ಬಿಲ್ ಪಾವತಿಸಲು ಬಿಟ್ ಕಾಯಿನ್ ಬಳಕೆ ಮಾಡಿರುವ ಮಾಹಿತಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.