ADVERTISEMENT

ಬಿಟ್‌ಕಾಯಿನ್‌: ಮತ್ತೊಬ್ಬ ಪೊಲೀಸ್ ಅಧಿಕಾರಿ ಬಂಧನ; ಒಟ್ಟು ಸಂಖ್ಯೆ 4ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 11:23 IST
Last Updated 7 ಅಕ್ಟೋಬರ್ 2024, 11:23 IST
<div class="paragraphs"><p>ಶ್ರೀಧರ ಪೂಜಾರ</p></div>

ಶ್ರೀಧರ ಪೂಜಾರ

   

ಬೆಂಗಳೂರು: ಬಿಟ್‌ಕಾಯಿನ್‌ ಅಕ್ರಮ ಪ್ರಕರಣದಲ್ಲಿ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖಾಧಿಕಾರಿಗಳು ಡಿವೈಎಸ್‌ಪಿ ಶ್ರೀಧರ್‌ ಕೆ.ಪೂಜಾರ್‌ (47) ಅವರನ್ನು ಸೋಮವಾರ ಬಂಧಿಸಿದರು.

ಸಿಐಡಿ ಕಚೇರಿಗೆ ಶ್ರೀಧರ್ ವಿಚಾರಣೆಗೆ ಬಂದಿದ್ದರು. ವಿಚಾರಣೆ ನಡೆಸಿದ ಬಳಿಕ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಬಂಧಿಸಿದರು. ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸಂಬಂಧ ಬಂಧಿಸಲಾಗಿದೆ.

ADVERTISEMENT

‘ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ಮೂರು ದಿನ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ’ ಎಂದು ಮೂಲಗಳು ತಿಳಿಸಿವೆ.

ಶ್ರೀಧರ್ ಅವರು ವಿಚಾರಣೆಗೆ ಸಹಕರಿಸದೇ ತಲೆಮರೆಸಿಕೊಂಡಿದ್ದರು. ನ್ಯಾಯಾಲಯವು ಘೋಷಿತ ಆರೋಪಿ ಎಂದು ವಾರಂಟ್​ ಜಾರಿ ಮಾಡಿತ್ತು.

ಎಸ್‌ಐಟಿ ತಂಡದ ತನಿಖಾಧಿಕಾರಿಯಾಗಿರುವ ಡಿವೈಎಸ್‌ಪಿ ಕೆ.ರವಿಶಂಕರ್ ಅವರು ನೀಡಿದ್ದ ದೂರಿನ ಮೇರೆಗೆ ಎಚ್‌ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್‌ ಸಿಇಒ ಕೆ.ಎಸ್.ಸಂತೋಷ್ ಕುಮಾರ್, ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ ಹಾಗೂ ಚಂದ್ರಾಧರ ಹಾಗೂ ಆಡುಗೋಡಿ ಟೆಕ್ನಿಕಲ್ ಸಪೋರ್ಟ್ ಸೆಂಟರ್‌ನ ಇನ್‌ಸ್ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು ಹಾಗೂ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್‌ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಹಿಂದೆ ಸಂತೋಷ್‌, ಡಿ.ಎಂ.ಪ್ರಶಾಂತ್ ಬಾಬು, ಚಂದ್ರಾಧರ ಹಾಗೂ ಲಕ್ಷ್ಮೀಕಾಂತಯ್ಯ ಅವರನ್ನು ಬಂಧಿಸಲಾಗಿತ್ತು. ಶ್ರೀಧರ್‌ ಅವರನ್ನು ಸೋಮವಾರ ಬಂಧಿಸಲಾಗಿದೆ. ಇದುವರೆಗೂ ಬಿಟ್‌ ಕಾಯಿನ್‌ ಪ್ರಕರಣದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳ ಬಂಧನ ಆದಂತಾಗಿದೆ.

‘ಬಿಟ್‌ಕಾಯಿನ್‌ ಅಕ್ರಮದ ತನಿಖೆ ನಡೆಸಿದ್ದ ಕೆಂಪೇಗೌಡ ನಗರ ಠಾಣೆ ಪೊಲೀಸರು, ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು. ಈ ಆರೋಪಿಗಳು ಡಾರ್ಕ್‌ವೆಬ್ ಮೂಲಕ ವಿದೇಶಗಳಿಂದ ಮಾದಕ ವಸ್ತುಗಳನ್ನು ತರಿಸುತ್ತಿದ್ದರು. ಅದಕ್ಕಾಗಿ ಕ್ರಿಪ್ಟೊ ಕರೆನ್ಸಿ ಮತ್ತು ಬಿಟ್‌ಕಾಯಿನ್ ಮೂಲಕ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ರಾಬಿನ್ ಖಂಡೇನ್‌ವಾಲ್ ಜೊತೆ ಸೇರಿಕೊಂಡು ಕೆಲ ಗೇಮ್ ಆ್ಯಪ್‌ಗಳನ್ನು ಹ್ಯಾಕ್ ಮಾಡಿ, ಅವುಗಳ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಹೆಚ್ಚಿನ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು. ತನಿಖೆ ವೇಳೆ ಸಿಸಿಬಿ ತನಿಖಾಧಿಕಾರಿಗಳು ಹಾಗೂ ಇತರರು ಅಕ್ರಮದಲ್ಲಿ ಶಾಮೀಲಾಗಿರುವುದು ಪತ್ತೆಯಾಗಿತ್ತು. ಕಾಟನ್‌ಪೇಟೆ ಠಾಣೆಗೆ ದೂರು ನೀಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ಆರೋಪಿಗಳಿಂದ ಪೆನ್‌ಡ್ರೈವ್‌, ಹಾರ್ಡ್‌ಡಿಸ್ಕ್‌, ಮ್ಯಾಕ್‌ಬುಕ್‌ಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಜಪ್ತಿ ಮಾಡಿಕೊಂಡಿದ್ದ ಸಾಧನಗಳನ್ನು ನಿಯಮಾನುಸಾರ ಸುರಕ್ಷಿತವಾಗಿಡದೇ ಅವುಗಳನ್ನು ಸ್ವತಃ ಬಳಕೆ ಮಾಡಿದ್ದರು. ಆ ಸಾಧನಗಳಲ್ಲಿ ಹೊಸ ಕಡತಗಳನ್ನು ಸೃಷ್ಟಿಸುವ ಮೂಲಕ ಸಾಕ್ಷ್ಯ ನಾಶ ಮಾಡಿದ್ದರು. ಒಳಸಂಚು ರೂಪಿಸಿ, ಸಾಕ್ಷ್ಯ ನಾಶ ಮಾಡಿರುವುದು ಎಸ್‌ಐಟಿ ತನಿಖೆ ವೇಳೆ ಪತ್ತೆಯಾಗಿತ್ತು. ಈ ಕಾರಣಕ್ಕಾಗಿ ಶ್ರೀಧರ್ ಅವರನ್ನು ಬಂಧಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದ ಶ್ರೀಧರ್‌

ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಶ್ರೀಧರ್ ಅವರು ತಲೆಮರೆಸಿಕೊಂಡಿದ್ದರು. ಫೆಬ್ರುವರಿ 27ರಂದು ನಗರದ ಸೆಂಟ್ರಲ್‌ ಕಾಲೇಜು ಬಳಿ ಶ್ರೀಧರ್‌ ಅವರಿದ್ದ ಮಾಹಿತಿ ಪಡೆದಿದ್ದ ತನಿಖಾಧಿಕಾರಿಗಳು ಬಂಧನಕ್ಕೆ ತೆರಳಿದ್ದರು. ಮೆಟ್ರೊ ನಿಲ್ದಾಣ ಬಳಿ ವಕೀಲರ ಜತೆಗೆ ಕಾರಿನಲ್ಲಿದ್ದ ಶ್ರೀಧರ್‌ ತನಿಖಾಧಿಕಾರಿಗಳನ್ನು ಕಂಡ ತಕ್ಷಣ ತಪ್ಪಿಸಿಕೊಂಡು ಪರಾರಿಯಾಗಲು ಮುಂದಾಗಿದ್ದರು. ಅವರನ್ನು ಹಿಡಿಯಲು ತನಿಖಾಧಿಕಾರಿಗಳು ಬೆನ್ನಟ್ಟಿದ್ದರು. ಕಾಫಿ ಬೋರ್ಡ್‌ ಸಿಗ್ನಲ್‌ ಬಳಿ ಶ್ರೀಧರ್ ಅವರನ್ನು ಹಿಡಿಯಲು ಮುಂದಾದಾಗ ಎಸ್‌ಐಟಿ ಅಧಿಕಾರಿಗಳ ಮೇಲೆಯೇ ಕಾರು ಹತ್ತಿಸಿ ಪರಾರಿ ಆಗಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಎಸ್‌ಐ ಭಾಸ್ಕರ್ ಗಾಯಗೊಂಡಿದ್ದರು. ಅಂದಿನಿಂದ ಶ್ರೀಧರ್ ತಲೆ ಮರೆಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.