ಬೆಂಗಳೂರು: ಬಿಟ್‌ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ನಗರ ಪೊಲೀಸರು ಗನ್‌ಮ್ಯಾನ್ ಭದ್ರತೆ ಒದಗಿಸಿದ್ದಾರೆ.
ಬಿಟ್‌ಕಾಯಿನ್ ಹಗರಣದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿತ್ತು. ಶ್ರೀಕಿ ಬಂಧನ ಬಳಿಕ ನಡೆದ ವಿಚಾರಣೆ ವೇಳೆ ಪ್ರಮುಖ ರಾಜಕಾರಣಿಗಳು ಹಾಗೂ ಐಪಿಎಸ್ ಅಧಿಕಾರಿಗಳ ಹೆಸರನ್ನು ಆತ ಪ್ರಸ್ತಾಪಿಸಿದ್ದ. ಅದಾದ ಮೇಲೆ ಶ್ರೀಕಿಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ.
‘ಗನ್‌ಮ್ಯಾನ್ ಬೇಡವೆಂದು ಶ್ರೀಕಿ ಹೇಳಿದ್ದ. ಆದರೆ, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಗನ್‌ಮ್ಯಾನ್ ಭದ್ರತೆ ಒದಗಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
ಶ್ರೀಕಿಯನ್ನು ಬಳಸಿಕೊಂಡು ರಾಜಕಾರಣಿಗಳು ಬಿಟ್‌ಕಾಯಿನ್ ಹಗರಣ ಎಸಗಿರುವ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿದೆ. ಶ್ರೀಕಿ ಹೆಸರು ಹೇಳಿದ್ದ ಕೆಲವು ಹಿರಿಯ ಅಧಿಕಾರಿಗಳನ್ನೂ ಈಚೆಗೆ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಇನ್ನೂ ಕೆಲವರಿಗೆ ನೋಟಿಸ್ ನೀಡಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಶ್ರೀಕಿ ಬೆಂಗಳೂರಿನ ನಿವಾಸಿಯಾಗಿದ್ದು, 2014ರಿಂದ 2017ರ ವರೆಗೆ ವಿದೇಶದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದ್ದ. ಪದವಿ ಪಡೆದ ಬಳಿಕ ವೆಬ್‌ಸೈಟ್ ಹ್ಯಾಕ್ ಮಾಡಲು ಶುರುಮಾಡಿದ್ದ. ಆರಂಭದಲ್ಲಿ ಸಣ್ಣಪುಟ್ಟ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದಿದ್ದ ಈತ, ನಂತರ ದೊಡ್ಡ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದ. ವೆಬ್‌ಸೈಟ್ ಹ್ಯಾಕ್ ಮಾಡಿ ಬಿಟ್‌ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ.
ಡಾರ್ಕ್‌ವೆಬ್ ಮೂಲಕ ವಿದೇಶದಿಂದ ‘ಹೈಡ್ರೊ ಗಾಂಜಾ’ ತರಿಸಿದ್ದ ಆರೋಪದಡಿ ಶ್ರೀಕಿ ಹಾಗೂ ಇತರರ ವಿರುದ್ಧ ಕೆಂಪೇಗೌಡ ನಗರ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಶ್ರೀಕಿ ಹಾಗೂ ಇತರರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಈ ಪ್ರಕರಣದ ವಿಚಾರಣೆಯನ್ನು ಎಸ್‌ಐಟಿ ನಡೆಸುತ್ತಿದೆ.
ಶ್ರೀಕಿ ಕೃತ್ಯಕ್ಕೆ ಹಲವರು ಕೈಜೋಡಿಸಿದ್ದರು. ಕಳೆದ ವರ್ಷ ಶ್ರೀಕಿ ಸೇರಿದಂತೆ ಆತನ ಸಹಚರರ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆಸಿ ಕಂಪ್ಯೂಟರ್ ಸೇರಿದಂತೆ ಹಲವು ದಾಖಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.