ADVERTISEMENT

ವಸತಿ, ನಿವೇಶನ ರಹಿತರ ಸಮೀಕ್ಷೆ: ಜಮೀರ್ ಅಹಮದ್ ಖಾನ್

ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 16:03 IST
Last Updated 11 ಸೆಪ್ಟೆಂಬರ್ 2024, 16:03 IST
ನಗರದ ಹಜ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸನ್ಮಾನಿಸಲಾಯಿತು
ನಗರದ ಹಜ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸನ್ಮಾನಿಸಲಾಯಿತು   

ಬೆಂಗಳೂರು: ರಾಜ್ಯದಲ್ಲಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಬುಧವಾರ ಆಯೋಜಿಸಿದ್ದ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಪ್ರತಿ ಕುಟುಂಬಕ್ಕೂ ಸೂರು ಕಲ್ಪಿಸುವುದು ನಮ್ಮ ಸರ್ಕಾರ ದ ಸಂಕಲ್ಪ. ಈಗಾಗಲೇ 2.32 ಲಕ್ಷ ಬಡವರಿಗೆ ಮನೆ ಕಟ್ಟಿಕೊಡುವ ಕ್ರಾಂತಿ ಕಾರಕ ನಿರ್ಧಾರ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಿಗೆ ನೀಡ ಬೇಕಿದ್ದ ಅನುದಾನವನ್ನು ಬಿಜೆಪಿ ನೇತೃತ್ವದ ಸರ್ಕಾರ ಕಡಿತಗೊಳಿಸಿತ್ತು. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರ ಕೂಡ ಹಲವು ಯೋಜನೆಗಳನ್ನು ಕೈಬಿಟ್ಟಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಅನುದಾನ ಒದಗಿಸಲಾಗಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ₹ 3,200 ಕೋಟಿ ಒದಗಿಸಿದೆ. ಅದರಲ್ಲಿ ₹ 1,400 ಕೋಟಿ ಶಿಕ್ಷಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಇದರಿಂದ ಸಮುದಾಯದ ಲಕ್ಷಾಂತರ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣ ಪಡೆಯುವಂತಾಗಿದೆ. ವಿದೇಶದಲ್ಲಿ ವ್ಯಾಸಂಗಕ್ಕೆ ಹೋಗುವಂತಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಲು ತರಬೇತಿ ಪಡೆಯುವಂತಾಗಿದೆ ಎಂದು ವಿವರಿಸಿದರು.

ಹಜ್ ಯಾತ್ರಿಗಳ ಸೇವೆ ಸಲ್ಲಿಸಿದ ಸ್ವಯಂ ಸೇವಕರನ್ನು ವೈಯಕ್ತಿಕವಾಗಿ ಉಮ್ರಾ ಯಾತ್ರೆಗೆ ಕಳುಹಿಸಲಾಗುತ್ತಿದ್ದು, ಈ ಬಾರಿಯೂ 220 ಮಂದಿಗೆ ಯಾತ್ರೆಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ‘ಜಮೀರ್ ಅಹಮದ್ ಖಾನ್ ಸಮುದಾಯದ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಎಲ್ಲರನ್ನು ವಿಶ್ವಾಸದಿಂದ ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸಮುದಾಯ ಒಗ್ಗಟ್ಟಾಗಿದ್ದರೆ ಅದೇ ಶಕ್ತಿ’ ಎಂದರು.

ಮೌಲಾನಾ ಮಕ್ಸುದ್ ಇಮ್ರಾನ್, ಹಜ್‌ ಸಚಿವ ರಹೀಮ್ ಖಾನ್, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಾಸಕರಾದ ಇಕ್ಬಾಲ್ ಹುಸೇನ್, ಅಬ್ದುಲ್ ಜಬ್ಬಾರ್, ಐವನ್ ಡಿಸೋಜ, ಬಿಲ್ಕಿಸ್ ಬಾನು, ವಕ್ಫ್‌ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ. ಅಲ್ತಾಫ್ ಖಾನ್, ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್, ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.

177 ಆಟೋ ರಿಕ್ಷಾ 68 ಟ್ಯಾಕ್ಸಿ, 30 ಗೂಡ್ಸ್ ವಾಹನಗಳು ಸೇರಿದಂತೆ 579 ಫಲಾನುಭವಿಗಳಿಗೆ ₹ 7.86 ಕೋಟಿ ಮೊತ್ತದ ಸವಲತ್ತು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.