ADVERTISEMENT

ಮೈತ್ರಿ ಬಲದಲ್ಲಿ ಸರ್ಕಾರ ರಚಿಸಬಹುದು: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:42 IST
Last Updated 22 ಜೂನ್ 2024, 15:42 IST
<div class="paragraphs"><p>ಎಚ್‌.ಡಿ.ಕುಮಾರಸ್ವಾಮಿ</p></div>

ಎಚ್‌.ಡಿ.ಕುಮಾರಸ್ವಾಮಿ

   

ಬೆಂಗಳೂರು: ‘ಹೆಚ್ಚು, ಕಡಿಮೆ ಎನ್ನುವ ಭಿನ್ನಾಭಿಪ್ರಾಯವಿಲ್ಲದೇ ಬಿಜೆಪಿ–ಜೆಡಿಎಸ್‌ ಮೈತ್ರಿ ಮುಂದುವರಿದರೆ ಭವಿಷ್ಯದ ದಿನಗಳಲ್ಲಿ 2006ರ ಮಾದರಿಯಲ್ಲೇ ಸರ್ಕಾರ ರಚಿಸುವ ಸಾಧ್ಯತೆ ನಮ್ಮೆದುರಿಗೆ ಇದೆ’ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರದ ನೂತನ ಸಚಿವರು ಮತ್ತು ಎನ್‌ಡಿಎ ಸಂಸದರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಆರಂಭವಾದ ಮೈತ್ರಿ ಮುಂದುವರಿಯಬೇಕು. ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಸೇರಿ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಮೈತ್ರಿ ಇರಬೇಕು. ಎರಡೂ ಪಕ್ಷಗಳೂ ಮುಕ್ತ ಮನಸ್ಸಿನಿಂದ ಸಾಗಬೇಕು. ಮೈತ್ರಿಕೂಟ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೂ ಸಜ್ಜಾಗಬೇಕು ಎಂದರು.

‘ನಮ್ಮಗಳ ಮಧ್ಯೆ ಯಾವುದೇ ಒಡಕು ಇರಬಾರದು. ಅಣ್ಣ, ತಮ್ಮಂದಿರ ರೀತಿಯಲ್ಲಿ ಇರಬೇಕು. ಒಗ್ಗಟ್ಟು ಮುರಿಯಲು ಯಾರೇ ಯತ್ನಿಸಿದರೂ ಕಿವಿ ಮೇಲೆ ಹಾಕಿಕೊಳ್ಳಬಾರದು’ ಎಂದು ಹೇಳಿದರು.

ಪರಿಚಯಿಸಿದ್ದು ಬಿಎಸ್‌ವೈ:

‘2006ರಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದರಿಂದ ಈ ನಾಡಿಗೆ ನನ್ನ ಪರಿಚಯ ಆಯಿತು. ಅದಕ್ಕೆ ಕಾರಣ ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು. ನನಗಿಂತ ಹಿರಿಯರಾದರೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಮುಕ್ತ ಸಹಕಾರ ನೀಡಿದ್ದರು’ ಎಂದರು.

ಬೆಲೆ ಏರಿಕೆಗೆ ಗ್ಯಾರಂಟಿ ಕಾರಣ: ‘ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಎಲ್ಲ ಉತ್ಪನ್ನಗಳ ಬೆಲೆ ಏರಿಕೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳೇ ಕಾರಣ’ ಎಂದು ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

‘ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಅದಕ್ಕಾಗಿ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ ಜನರನ್ನು ದೋಚುತ್ತಿದೆ’ ಎಂದರು.

ಹಿಂದೆ ಯಡಿಯೂರಪ್ಪ ಅವರಿಗೆ ನಾನು ಅಧಿಕಾರ ಹಸ್ತಾಂತರಿಸಬೇಕಿತ್ತು. ಕೆಲವರ ಕುತಂತ್ರದಿಂದ ಆಗಲಿಲ್ಲ. ಆಗ ನಮ್ಮ ಮೈತ್ರಿಕೂಟ ಅಧಿಕಾರದಲ್ಲಿ ಮುಂದುವರಿದಿದ್ದರೆ ಈಗ ಕಾಂಗ್ರೆಸ್‌ ಪಕ್ಷವೇ ರಾಜ್ಯದಲ್ಲಿ ಇರುತ್ತಿರಲಿಲ್ಲ.
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.