ADVERTISEMENT

BJP–JDS ಒಂದಾಗಿ ಕಾಂಗ್ರೆಸ್‌ ಸೊಕ್ಕು ಮುರಿಯುತ್ತೇವೆ: ಬಿ.ವೈ. ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:27 IST
Last Updated 22 ಜೂನ್ 2024, 15:27 IST
<div class="paragraphs"><p>ಬಿಜೆಪಿ ರಾಜ್ಯ ಘಟಕದ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವರಾದ ವಿ. ಸೋಮಣ್ಣ, ಎಚ್‌.ಡಿ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಸನ್ಮಾನಿಸಲಾಯಿತು. </p></div>

ಬಿಜೆಪಿ ರಾಜ್ಯ ಘಟಕದ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವರಾದ ವಿ. ಸೋಮಣ್ಣ, ಎಚ್‌.ಡಿ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಸನ್ಮಾನಿಸಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ವಿಧಾನಮಂಡಲದ ಒಳಗೆ ಮತ್ತು ಹೊರಗೆ ಬಿಜೆಪಿ–ಜೆಡಿಎಸ್‌ ಒಂದಾಗಿ ಕಾಂಗ್ರೆಸ್‌ನ ಸೊಕ್ಕು ಮುರಿಯುತ್ತೇವೆ. ಮುಂದಿನ ನಾಲ್ಕು ವರ್ಷ ಈ ಹೋರಾಟ ಮುಂದುವರಿಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಹೇಳಿದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕೇಂದ್ರದ ನೂತನ ಸಚಿವರು, ಎನ್‌ಡಿಎ ಸಂಸದರ ಅಭಿನಂದನಾ ಸಮಾರಂಭದಲ್ಲಿ ಅವರು, ‘ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದೆ’ ಎಂದರು.

ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿಯ ಭದ್ರಕೋಟೆ ಎಂಬುದು ಲೋಕಸಭಾ ಚುನಾವಣೆಯಲ್ಲೂ ಸಾಬೀತಾಗಿದೆ. ಕಾಂಗ್ರೆಸ್ ಒಂಬತ್ತು ಕ್ಷೇತ್ರಗಳಲ್ಲಿ ಗೆದ್ದಿರಬಹುದು. ಆದರೆ, 145 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ ಸಿಕ್ಕಿದೆ. ಇದು ಜನತೆ ಕಾಂಗ್ರೆಸ್‌ ಸರ್ಕಾರವನ್ನು ತಿರಸ್ಕರಿಸುವುದಕ್ಕೆ ಸಾಕ್ಷಿ ಎಂದು ಹೇಳಿದರು.

ಕರ್ನಾಟಕ ಕಾಂಗ್ರೆಸ್‌ನ ದುರಾಡಳಿತದಿಂದ ಹಿನ್ನಡೆ ಅನುಭವಿಸುತ್ತಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಲಾಗುತ್ತಿದೆ. ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಕಾಂಗ್ರೆಸ್‌ ಶಾಸಕ ಸಿ.ಎಸ್‌.ನಾಡಗೌಡರು ರಾಜಕೀಯ ನಿವೃತ್ತಿಯ ಮಾತನಾಡಿದ್ದಾರೆ. ಇದು ರಾಜ್ಯದ ದುಸ್ಥಿತಿಗೆ ನಿದರ್ಶನ ಎಂದರು.

ಜನರ ಬಳಿ ಹೋಗಿ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರ‍ಪ್ಪ, ‘ಕಾಂಗ್ರೆಸ್‌ ಎಂದರೆ ಸುಳ್ಳು ಗ್ಯಾರಂಟಿ, ಭ್ರಷ್ಟಾಚಾರ, ದುರಾಡಳಿತ ಮತ್ತು ಅಭಿವೃದ್ಧಿ ವಿರೋಧಿ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು. ಇದಕ್ಕಾಗಿ ಮುಖಂಡರು ಮತ್ತು ಕಾರ್ಯಕರ್ತರು ಜನರ ಬಳಿ ಹೋಗಿ’ ಎಂದು ಕರೆ ನೀಡಿದರು.

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಮಾತನಾಡಿದರು. ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ, ಮಾಜಿ ಸಂಸದ ಡಿ.ವಿ.ಸದಾನಂದ ಗೌಡ, ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು, ಪರಿಷತ್‌ ಸದಸ್ಯರು ಇದ್ದರು.

ಕೆಲಸಕ್ಕೆ ಬಾರದವರನ್ನು ಕಿತ್ತುಹಾಕಿ: ಸೋಮಣ್ಣ

‘ನೀವು ಯುವಕ ಇದ್ದೀರಿ. ಇನ್ನಾದರೂ ಪಕ್ಷದಲ್ಲಿರುವ ಕೆಲಸಕ್ಕೆ ಬಾರದವರನ್ನು ಕಿತ್ತು ಹಾಕಿ’ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ವಿಜಯೇಂದ್ರ ಅವರನ್ನು ವೇದಿಕೆಯಲ್ಲೇ ಆಗ್ರಹಿಸಿದರು.

‘ಯಾರೋ ಮಾಡಿದ ಪಾಪಕ್ಕೆ ಯಾರನ್ನೋ ಗುರಿ ಮಾಡಬೇಡಿ. ಸರಿಯಾಗಿ ಗುರುತಿಸಿ. ದಾವಣಗೆರೆಯಲ್ಲಿ ಸೋತಿದ್ದೇವೆ ನಾವು. ಸೋಮಣ್ಣ ಸೋಲುತ್ತಾನೆ ಎಂದು ಹೇಳುತ್ತಾ ಇದ್ದರು. ಜೆಡಿಎಸ್‌ನ ಸಹಕಾರ ಮತ್ತು ಬಿಜೆಪಿಯ ಹೊಂದಾಣಿಕೆಯಿಂದ ಗೆದ್ದಿದ್ದೇನೆ’ ಎಂದರು.

‘ರಾಜ್ಯ ಸರ್ಕಾರ ಎಷ್ಟು ತಿಂಗಳಿರಲಿದೆಯೊ ಗೊತ್ತಿಲ್ಲ. ಅದನ್ನು ಕುಮಾರಸ್ವಾಮಿ ಅವರೇ ಹೇಳಬೇಕು’ ಎಂದು ವೇದಿಕೆಯಲ್ಲಿದ್ದ ಅವರತ್ತ ನೋಡಿದರು.

‘ಟಿಕೆಟ್‌ ಹಂಚಿಕೆಯಲ್ಲಿ ವ್ಯತ್ಯಾಸ’

ಸೋಮಣ್ಣ ಮಾತಿಗೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಬಿ.ಎಸ್‌. ಯಡಿಯೂರಪ್ಪ ‘ನಾವು ಇನ್ನೂ ಎರಡು–ಮೂರು ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು. ಆದರೆ ಟಿಕೆಟ್‌ ನೀಡುವುದರದಲ್ಲಿ ವ್ಯತ್ಯಾಸ ಆಯಿತು’ ಎಂದರು.

ಚುನಾವಣೆ ಘೋಷಿಸಿ: ಅಶೋಕ ಸವಾಲು

‘ಗ್ಯಾರಂಟಿ ಯೋಜನೆಗಳಿಂದ ಜನರು ಸಂತೃಪ್ತರಾಗಿದ್ದಾರೆ ಎಂದು ಹೇಳುವ ಕಾಂಗ್ರೆಸ್‌ ಸರ್ಕಾರಕ್ಕೆ ದಮ್ಮು ತಾಕತ್ತು ಇದ್ದರೆ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆ ಘೋಷಿಸಲಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಸವಾಲು ಹಾಕಿದರು.

ಬಿಜೆಪಿ ರಾಜ್ಯ ಘಟಕದ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಸಚಿವರು ಮತ್ತು ಎನ್‌ಡಿಎ ಸಂಸದರ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು ಗಹನವಾಗಿ ಚರ್ಚೆಯಲ್ಲಿ ತೊಡಗಿದ್ದ ದೃಶ್ಯ – ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.