ಬೆಂಗಳೂರು: ‘ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿರುವುದಕ್ಕೆ ಯಾವುದೇ ಆಧಾರ ಇಲ್ಲ. ಆದರೆ, ಹಗರಣವೆಂಬಂತೆ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ದೇಶದ ಭದ್ರತೆ ಜತೆ ಆಟವಾಡುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.
‘ಚಿಂತಕರ ವೇದಿಕೆ’ ಭಾನುವಾರ ಏರ್ಪಡಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಾಜಪೇಯಿಯವರು ವಿರೋಧ ಪಕ್ಷದಲ್ಲಿದ್ದಾಗ ಎಂದಿಗೂ ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸಲಿಲ್ಲ’ ಎಂದರು.
‘ರಾಷ್ಟ್ರದ ಹಿತವೇ ಮುಖ್ಯ ಎನ್ನುವ ಅಟಲ್ ಬಿಹಾರಿ ವಾಜಪೇಯಿ ಅವರ ಮಾದರಿಯ ರಾಜಕೀಯ ನಡೆ ಇಂದಿನ ದಿನಗಳಲ್ಲಿ ಹೆಚ್ಚು ಅನಿವಾರ್ಯ’ ಎಂದು ಅವರು ಪ್ರತಿಪಾದಿಸಿದರು.
‘ಅಧಿಕಾರದಲ್ಲಿ ಇದ್ದಾಗ ಅಥವಾ ವಿರೋಧ ಪಕ್ಷದಲ್ಲಿದ್ದಾಗ ಅವರು ಪಕ್ಷಾತೀತವಾಗಿ ನಡೆದುಕೊಳ್ಳುತ್ತಿದ್ದರು. ನೆಹರೂ ಮೃತಪಟ್ಟಾಗ ಸಂಸತ್ತಿನಲ್ಲಿ ನೆಹರು ಕುರಿತು ಅಟಲ್ ಅತ್ಯುತ್ತಮ ಭಾಷಣ ಮಾಡಿದರು. ಇಂದು ಅಂತಹ ಸಹನಶೀಲತೆಯ ರಾಜಕೀಯದ ಅಗತ್ಯವಿದೆ’ ಎಂದರು.
‘1980 ರಲ್ಲಿ ಬಿಜೆಪಿ ಸ್ಥಾಪನೆಯಾಯಿತು. 1984 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಕಡಿಮೆ ಸ್ಥಾನಗಳಿಗೆ ಕುಸಿಯಿತು. ಆದರೆ, ಇದರಿಂದ ವಾಜಪೇಯಿ ಅವರು ಅಧೀರರಾಗಲಿಲ್ಲ. ಸೋಲು ಮತ್ತು ಗೆಲುವನ್ನು ಸಮಚಿತ್ತದಿಂದ ತೆಗೆದುಕೊಳ್ಳುವ ಗುಣ ಅವರದ್ದಾಗಿತ್ತು’ ಎಂದು ರಾಮ್ ಮಾಧವ್ ತಿಳಿಸಿದರು.
‘ಅಟಲ್ ಅವರು ಪ್ರಧಾನಿ ಆಗಿದ್ದಾಗ ಸಂವಿಧಾನದ ಆಶಯಗಳು ಮತ್ತು ಹಕ್ಕುಗಳು ಸಮರ್ಪಕವಾಗಿ ಜಾರಿ ಆಗಿವೆಯೆ ಮತ್ತು ಅದರ ಪ್ರಯೋಜನಗಳು ಜನರಿಗೆ ತಲುಪಿವೆಯೆ ಎಂಬುದನ್ನು ಪರಿಶೀಲಿಸಲು ಸಂವಿಧಾನ ಪರಾಮರ್ಶೆಗೆ ಸಮಿತಿ ರಚಿಸಿದರು. ಆದರೆ, ಈ ಬಗ್ಗೆ ಅಪಪ್ರಚಾರ ಮತ್ತು ತಪ್ಪು ಮಾಹಿತಿಗಳನ್ನು ಹಬ್ಬಿಸುವ ಮೂಲಕ ಆ ಪ್ರಯತ್ನಕ್ಕೆ ಪ್ರತಿರೋಧ ವ್ಯಕ್ತವಾಗುವಂತೆ ಮಾಡಲಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.