ಬೆಂಗಳೂರು: ‘ಸೋನಿಯಾಗಾಂಧಿ 1979 ರಲ್ಲಿ ಪೌರತ್ವ ಪಡೆದಾಗ, ನಿಮ್ಮದು ಯಾವ ಧರ್ಮ ಎಂದು ಅವರಿಗೆ ಯಾರೂ ಕೇಳಿರಲಿಲ್ಲ. ಧರ್ಮದ ಆಧಾರದಲ್ಲಿ ತಾರತಮ್ಯವನ್ನೂ ಮಾಡಲಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.
ಪೌರತ್ವ ನೀಡುವ ವಿಚಾರದಲ್ಲಿ ಈ ದೇಶದಲ್ಲಿ ಧರ್ಮದ ಆಧಾರದಲ್ಲಿ ಹಿಂದೆಯೂ ತಾರತಮ್ಯ ಮಾಡಿಲ್ಲ, ಮುಂದೆಯೂ ಆಗುವುದಿಲ್ಲ ಎಂದು ಅವರು ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕುರಿತ ವಿಚಾರಗೋಷ್ಠಿಯಲ್ಲಿ ತಿಳಿಸಿದರು.
ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ವಿವಿಧ ದೇಶಗಳಿಂದ ಆಶ್ರಯ ಕೋರಿ ಬಂದ 600 ಜನರಿಗೆ ಪೌರತ್ವ ನೀಡಲಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ 130 ಕೋಟಿ ಜನರಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಕಾಂಗ್ರೆಸ್ ಸೇರಿದಂತೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರದ ಮೂಲಕ ಗೊಂದಲ ಹುಟ್ಟುಹಾಕುತ್ತಿವೆ’ ಎಂದು ಕಿಡಿಕಾರಿದರು.
‘ಇದೊಂದು ಮಾನವೀಯತೆಯ ಕಾಯ್ದೆಯಾಗಿದೆ. ಆದರೆ ಇದನ್ನು ವಿರೋಧಿಸುತ್ತಿರುವವರು ಜಾತಿ ವಿಷ ಬೀಜವನ್ನು ಬಿತ್ತುತ್ತಿದ್ದಾರೆ. ಈ ಕಾಯ್ದೆಗೆ ಹಿಂದೆ ನಾಲ್ಕು ಬಾರಿ ತಿದ್ದುಪಡಿಯಾಗಿದೆ. ಆಗ ಯಾರೂ ಅದರ ಬಗ್ಗೆ ಚರ್ಚೆ ಮಾಡಿಲ್ಲ’ ಎಂದರು.
‘ನೆರೆ ದೇಶಗಳಲ್ಲಿ ಅಲ್ಪಸಂಖ್ಯಾತರು ಮಾನ, ಪ್ರಾಣ ಉಳಿಸಿಕೊಳ್ಳಲು ಓಡಿ ಬರುತ್ತಿದ್ದಾರೆ. ಅವರಿಗೆ ಇಲ್ಲಿ ರಕ್ಷಣೆ ನೀಡಿ ಪೌರತ್ವ ನೀಡುವುದು ತಪ್ಪೇ? ನಮ್ಮ ರಾಜ್ಯದಲ್ಲೇ ಬಾಂಗ್ಲಾದಿಂದ ಓಡಿ ಬಂದ ಸಾವಿರಾರು ಜನರಿದ್ದಾರೆ. ಅವರಿಗೆ ಈವರೆಗೆ ಸರ್ಕಾರದ ಯಾವುದೇ ಕನಿಷ್ಠ ಸೌಲಭ್ಯಗಳೂ ಸಿಕ್ಕಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.
‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಮಾಯಕ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿಲ್ಲ. ಭಯೋತ್ಪಾದಕ ಮನಸ್ಥಿತಿಯವರು, ಚಿಂತಕರು, ಬುದ್ಧಿಜೀವಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಕೇರಳದಿಂದ ಬಂದ ಮೂಲಭೂತವಾದಿಗಳುಮಂಗಳೂರಿನಲ್ಲಿ ಗಲಭೆ ನಡೆಸಿದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪೌರತ್ವ ತಿದ್ದುಪಡಿ ಪರ ಬೃಹತ್ ಜನಾಂದೋಲನ
ರಾಜ್ಯದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಪರವಾಗಿ ಜನವರಿ 1 ರಿಂದ 15 ರವರೆಗೆ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದರು.
ಇದೇ 2 ರಂದು ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇದೇ ವಿಷಯವಾಗಿ ಮಾತನಾಡಲಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಬೃಹತ್ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು. ಇತರ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು, ವಿಧಾನಸಭಾ ಕ್ಷೇತ್ರಗಳಲ್ಲಿ ರ‍್ಯಾಲಿ ನಡೆಸಲಾಗುವುದು ಎಂದರು.
ರಾಜ್ಯದಿಂದ 1 ಕೋಟಿ ಜನರು, ಕಾಯ್ದೆಯ ಪರವಾಗಿ ಪ್ರಧಾನಿಯವರಿಗೆ ಪತ್ರ ಬರೆಯಲಿದ್ದಾರೆ. ಪ್ರತಿ ಬೂತ್‌ನಲ್ಲಿ 100 ಜನರನ್ನು ಸಂಪರ್ಕಿಸಿ ಅವರಿಗೆ ಈ ಕುರಿತ ಸತ್ಯಾಂಶವನ್ನು ವಿವರಿಸಲಾಗುವುದು ಎಂದು ಶೋಭಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.