ADVERTISEMENT

ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡಾಯ: ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 16:30 IST
Last Updated 27 ಡಿಸೆಂಬರ್ 2023, 16:30 IST
<div class="paragraphs"><p> ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಎನ್‌.ಎಸ್‌. ನಂದೀಶ್‌ ರೆಡ್ಡಿ, ಪಿ. ರಾಜೀವ್‌, ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್‌ ಮತ್ತು ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್‌ ಸಭೆಯಲ್ಲಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ</p></div>

ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಎನ್‌.ಎಸ್‌. ನಂದೀಶ್‌ ರೆಡ್ಡಿ, ಪಿ. ರಾಜೀವ್‌, ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್‌ ಮತ್ತು ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್‌ ಸಭೆಯಲ್ಲಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ

   

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡಾಯ ಸಾರಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳು ಮೊದಲ ಸಭೆಯಲ್ಲೇ ಆಗ್ರಹಿಸಿದ್ದಾರೆ.

ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬುಧವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ ವರ್ತನೆ ಕುರಿತು ಹಲವು ಪದಾಧಿಕಾರಿಗಳು ಆಕ್ಷೇಪ ಎತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ವರಿಷ್ಠರಿಗೆ ಪತ್ರ ಬರೆಯುವಂತೆ ವಿಜಯೇಂದ್ರ ಅವರನ್ನು ಒತ್ತಾಯಿಸಿದ್ದಾರೆ.

ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಆರ್‌. ಅಶೋಕ ಅವರನ್ನು ನೇಮಕಗೊಳಿಸಿದ ಬಳಿಕ ಯತ್ನಾಳ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ‘ಕೋವಿಡ್‌ ಅವಧಿಯಲ್ಲಿ ಯಡಿಯೂರಪ್ಪ ₹ 40,000 ಕೋಟಿಯಷ್ಟು ಭ್ರಷ್ಟಾಚಾರ ನಡೆಸಿರುವ ದಾಖಲೆಗಳಿವೆ’ ಎಂದು ಮಂಗಳವಾರವಷ್ಟೆ ಹೇಳಿಕೆ ನೀಡಿದ್ದರು.

‘ಬುಧವಾರದ ಸಭೆಯಲ್ಲಿ ಯತ್ನಾಳ ಅವರ ನಡವಳಿಕೆ ಕುರಿತು ಪ್ರಸ್ತಾಪಿಸಿದ ಹಲವು ಪದಾಧಿಕಾರಿಗಳು, ಕ್ರಮಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದರು. ಪದೇ ಪದೇ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವುದರಿಂದ ಸಂಘಟನೆ ಕೆಲಸ ಮಾಡಲು ಕಷ್ಟವಾಗುತ್ತದೆ. ಈ ರೀತಿಯ ನಡವಳಿಕೆಗೆ ಕಡಿವಾಣ ಹಾಕದಿದ್ದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಪಕ್ಷದ ವರಿಷ್ಠರಿಗೆ ನೀವು ಪತ್ರ ಬರೆಯಿರಿ, ನಾವೆಲ್ಲರೂ ಸಹಿ ಮಾಡುತ್ತೇವೆ ಎಂಬುದಾಗಿ ಬಹುತೇಕ ಪದಾಧಿಕಾರಿಗಳು ವಿಜಯೇಂದ್ರ ಅವರನ್ನು ಒತ್ತಾಯಿಸಿದರು’ ಎಂದು ಮೂಲಗಳು ತಿಳಿಸಿವೆ.

ಪದಾಧಿಕಾರಿಗಳಾಗಿರುವ ಹಾಲಿ ಶಾಸಕರು, ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಯತ್ನಾಳ ಅವರಿಂದಾಗಿ ಬಿಜೆಪಿ ಅನುಭವಿಸಿದ ಮುಜುಗರದ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕಾದರೆ ಈ ರೀತಿ ಅಪಸ್ವರ ಎತ್ತುವವರ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವನ್ನು ಅವರು ಮುಂದಿಟ್ಟರು ಎಂದು ಮೂಲಗಳು ಹೇಳಿವೆ.

‘ಯತ್ನಾಳ ಕಾಂಗ್ರೆಸ್‌ ಪಕ್ಷದವರ ಜತೆ ಶಾಮೀಲಾಗಿ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಹೇಳಿಕೆ ನೀಡಿದ ತಕ್ಷಣ ಕಾಂಗ್ರೆಸ್‌ನವರು ಪ್ರತಿಕ್ರಿಯಿಸುತ್ತಾರೆ. ಇದೇ ಅವಕಾಶ ಬಳಸಿಕೊಂಡು ಯತ್ನಾಳ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ’ ಎಂದು ಕೆಲವು ಪದಾಧಿಕಾರಿಗಳು ದೂರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

‘ಯತ್ನಾಳ ಹೇಳಿಕೆ ಕುರಿತು ಸಭೆಯಲ್ಲಿ ಚರ್ಚೆಯಾಗಿದೆಯೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌, ‘ಪಕ್ಷದಲ್ಲಿನ ಇತ್ತೀಚಿನ ಎಲ್ಲ ಬೆಳವಣಿಗೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ಆ ಎಲ್ಲ ಮಾಹಿತಿಯನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪಕ್ಷದ ಘನತೆಗೆ ಚ್ಯುತಿ ಬರುವಂಥ ಚಟುವಟಿಕೆ, ಹೇಳಿಕೆಗಳನ್ನು ಸಹಿಸುವುದಿಲ್ಲ. ಆ ಬಗ್ಗೆ ಚರ್ಚೆ ಆಗಿದೆ. ಕೇಂದ್ರದ ನಾಯಕರು ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು.

‘ಒಳಗಿರುವವರೇ ಕುಲಗೆಡಿಸುತ್ತಾರೆ’

‘ಪಕ್ಷದ ಒಳಗಿರುವವರೇ ರಾಜ್ಯದಲ್ಲಿ ಬಿಜೆಪಿಯನ್ನು ಕುಲಗೆಡಿಸುತ್ತಾರೆ. ಹಿಂದೆ ಯಾವತ್ತೂ ಈ ರೀತಿಯ ಬೆಳವಣಿಗೆ ನಡೆದಿರಲಿಲ್ಲ. ಈ ಬಗ್ಗೆ ಪಕ್ಷದ ಕೇಂದ್ರ ನಾಯಕರು ಮಾತನಾಡದೇ ಇರುವುದು ದುರ್ದೈವದ ಸಂಗತಿ’ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು. ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು ‘ಪಕ್ಷದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರಿಗೆ ಬೀಗ ಹಾಕುವ ಕೆಲಸ ಆಗಬೇಕಿದೆ. ಕಾರ್ಯಕರ್ತರು ನಮ್ಮನ್ನು ಪ್ರಶ್ನಿಸುವ ಪರಿಸ್ಥಿತಿ ಉದ್ಭವಿಸಿದೆ. ಅದಕ್ಕೆ ಕಡಿವಾಣ ಹಾಕಬೇಕಿದೆ’ ಎಂದರು. ‘ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳ ನೇಮಕ ಕುರಿತು ಮಾಧ್ಯಮಗಳ ಮೂಲಕ ತಿಳಿಯಬೇಕಾಗಿ ಬಂದಿದ್ದು ಬೇಸರ ಮೂಡಿಸಿದೆ. ಪದಾಧಿಕಾರಿಗಳ ನೇಮಕದ ನಿಮಗೆ ಗೊತ್ತಿರಲಿಲ್ಲವೆ ಎಂದು ಕಡಬದಲ್ಲಿ ಕಾರ್ಯಕರ್ತರು ನನ್ನನ್ನು ಪ್ರಶ್ನಿಸಿದರು. ಅದಕ್ಕೆ ಏನು ಉತ್ತರ ಕೊಡಲಿ’ ಎಂದು ಕೇಳಿದರು.

‘ವಿಶ್ರಾಂತಿ ಇಲ್ಲದೆ ಕೆಲಸ ಮಾಡಿ’

‘ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಗುರಿಯೊಂದಿಗೆ ಕೆಲಸ ಮಾಡಬೇಕು. ಹಬ್ಬ ವಾರಾಂತ್ಯದ ಹೆಸರಿನಲ್ಲಿ ವಿಶ್ರಾಂತಿ ಪಡೆಯುವುದನ್ನು ಬದಿಗಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಚಿಸಿದರು. ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ‘ಲೋಕಸಭಾ ಚುನಾವಣೆ ಕೆಲವೇ ತಿಂಗಳುಗಳು ಇರುವಾಗ ನಮಗೆ ಪಕ್ಷ ಸಂಘಟನೆಯ ಜವಾಬ್ದಾರಿ ಸಿಕ್ಕಿದೆ. ಇದು ಅತ್ಯಂತ ಸವಾಲಿನ ಕಾಲ. ಎಲ್ಲರೂ ಹೊಣೆ ಅರಿತು ಕೆಲಸ ಮಾಡಬೇಕು’ ಎಂದರು. ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಮೈತ್ರಿಕೂಟವು ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವಿನ ಗುರಿ ಹೊಂದಿದೆ. ಅದನ್ನು ಸಾಧಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಬಲಗೊಳಿಸಬೇಕು. ಪ್ರತಿಸ್ಪರ್ಧಿಗಳನ್ನು ಹಗುರವಾಗಿ ಪರಿಗಣಿಸಬಾರದು. ಎಲ್ಲ ಸವಾಲುಗಳನ್ನು ಎದುರಿಸುವುದಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನ ಪರಿಷತ್‌ ಚುನಾವಣೆಗೆ ತಯಾರಿ ಆರಂಭಿಸಬೇಕು ಎಂದರು.

ಪದಾಧಿಕಾರಿಗಳ ನೇಮಕಕ್ಕೆ 60 ಮಂದಿ ವೀಕ್ಷಕರು

ಬಿಜೆಪಿ ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಾತಿ ಕುರಿತು ವರದಿ ಪಡೆಯಲು 60 ಮಂದಿ ಪ್ರಮುಖರ ತಂಡವನ್ನು ನಿಯೋಜಿಸಲು ಬುಧವಾರ ನಡೆದ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯ ಬಳಿಕ ವಿವರ ನೀಡಿದ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ‘ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಗೆ ಸಂಭವನೀಯರ ಪಟ್ಟಿ ಸಿದ್ಧಪಡಿಸಲು 60 ಜನರ ತಂಡ ಎರಡು ದಿನಗಳ ಕಾಲ ರಾಜ್ಯದಾದ್ಯಂತ ಪ್ರವಾಸ ಮಾಡಲಿದೆ’ ಎಂದರು. ಜಿಲ್ಲಾ ಘಟಕಗಳ ಹಾಲಿ ಅಧ್ಯಕ್ಷರು ಸಂಸದರು ಶಾಸಕರು ಮಾಜಿ ಶಾಸಕರು ಹಿರಿಯ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸಲಾಗುವುದು. ಆ ಬಳಿಕ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು. ಎಲ್ಲ ಹಂತದ ಮುಖಂಡರು ಮತ್ತು ಕಾರ್ಯಕರ್ತರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ರಾಜ್ಯ ಘಟಕದ ಅಧ್ಯಕ್ಷರು ಸೂಚಿಸಿದ್ದಾರೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ ಮತ್ತು ನಮೋ ಆ್ಯಪ್‌ಗಳಲ್ಲಿ ಪದಾಧಿಕಾರಿಗಳಿಗೆ ಕೆಲಸ ಹಂಚಿಕೆ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.