ADVERTISEMENT

ದೆಹಲಿ, ಜಾರ್ಖಂಡ್ ಮಾದರಿ ಜಾರಿಗೆ ಇ.ಡಿ.ಯತ್ನ: ಎ.ಎಸ್. ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 19:16 IST
Last Updated 18 ಜುಲೈ 2024, 19:16 IST
ಎ.ಎಸ್. ಪೊನ್ನಣ್ಣ
ಎ.ಎಸ್. ಪೊನ್ನಣ್ಣ   

ಬೆಂಗಳೂರು: ‘ದೆಹಲಿ, ಜಾರ್ಖಂಡ್‌ ಮುಖ್ಯಮಂತ್ರಿಗಳನ್ನು ಬಂಧಿಸಿದ ಮಾದರಿಯಲ್ಲೇ  ಜಾರಿ ನಿರ್ದೇಶನಾಲಯ (ಇ.ಡಿ) ಕರ್ನಾಟಕದಲ್ಲೂ ಯತ್ನ ನಡೆಸುತ್ತಿದೆ’ ಎಂದು ಕಾಂಗ್ರೆಸ್‌ನ ಎ.ಎಸ್‌. ಪೊನ್ನಣ್ಣ ಆರೋಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ವಿಧಾನಸಭೆಯಲ್ಲಿ ಗುರುವಾರ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೂ ಮುಖ್ಯಮಂತ್ರಿಯವರಿಗೂ ಏನು ಸಂಬಂಧವಿದೆ? ಸತ್ಯವನ್ನು ಮುಚ್ಚಿಟ್ಟು ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಹಗರಣದ ಹೆಸರಿನಲ್ಲಿ ಮುಖ್ಯಮಂತ್ರಿ, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಆಗುತ್ತಿದೆ’ ಎಂದರು.

2014ರ ಮೊದಲು ಇ.ಡಿ ದಾಖಲಿಸಿದ್ದ ಪ್ರಕರಣದಲ್ಲಿ ಶೇಕಡ 47 ವಿರೋಧ ಪಕ್ಷಗಳ ನಾಯಕರಿಗೆ ಸಂಬಂಧಿಸಿದ್ದರೆ, ಶೇ 57ರಷ್ಟು ಪ್ರಕರಣಗಳು ಆಡಳಿತ ಪಕ್ಷದವರ ವಿರುದ್ಧವೇ ಇದ್ದವು. ಈಗ ಶೇ 90ರಷ್ಟು ಪ್ರಕರಣಗಳು ವಿರೋಧ ಪಕ್ಷದವರನ್ನೇ ಗುರಿಯಾಗಿಸಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೋರೇನ್‌ ಬಂಧಿಸಿದಂತೆ ಕರ್ನಾಟಕದಲ್ಲೂ ಇ.ಡಿ ಸಾಗುತ್ತಿದೆ ಎಂದು ದೂರಿದರು.

ADVERTISEMENT

‘ಹಗರಣದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್‌ಐಟಿ) ನೇಮಿಸಿದೆ. ಸಿಬಿಐ ಕೂಡ ಎಫ್‌ಐಆರ್‌ ದಾಖಲಿಸಿದೆ. ಈಗ ಇ.ಡಿ ತನಿಖೆಯೂ ಆರಂಭವಾಗಿದೆ. ಎಸ್‌ಐಟಿ ಬೃಹತ್‌ ಮೊತ್ತವನ್ನು ವಶಪಡಿಸಿಕೊಂಡಿದ್ದು, ಚೆನ್ನಾಗಿಯೇ ತನಿಖೆ ನಡೆಸುತ್ತಿದೆ. ಇ.ಡಿ ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡಿ ರಾಜಕೀಯ ಮಾಡುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.