ADVERTISEMENT

ಸಾಕ್ಷಾತ್‌ ಸಮೀಕ್ಷೆ – ವಿಜಯನಗರ ಕಾಂಗ್ರೆಸ್‌ ಭದ್ರಕೋಟೆಗೆ ಲಗ್ಗೆ ಇಡಲು ಬಿಜೆಪಿ ಕಸರತ್ತು

ವಿಜಯನಗರ ವಿಧಾನಸಭಾ ಕ್ಷೇತ್ರ: ಎಂ. ಕೃಷ್ಣಪ್ಪ– ಎಚ್‌. ರವೀಂದ್ರ ನೇರ ಹಣಾಹಣಿ

ಪ್ರಜಾವಾಣಿ ವಿಶೇಷ
Published 6 ಮೇ 2023, 20:35 IST
Last Updated 6 ಮೇ 2023, 20:35 IST
   

ವಿ.ಎಸ್‌. ಸುಬ್ರಹ್ಮಣ್ಯ

ಬೆಂಗಳೂರು: ಸತತ ಮೂರು ಚುನಾವಣೆಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ವಿಜಯನಗರ ವಿಧಾನಸಭಾ ಕ್ಷೇತ್ರ ಈ ಬಾರಿ ನೇರ ಹಣಾಹಣಿಗೆ ವೇದಿಕೆಯಾಗಿದೆ. ‘ಹ್ಯಾಟ್ರಿಕ್‌’ ಗೆಲುವಿನೊಂದಿಗೆ ಪ್ರಬಲ ಹಿಡಿತ ಸಾಧಿಸಿರುವ ಕಾಂಗ್ರೆಸ್‌ನ ಎಂ. ಕೃಷ್ಣಪ್ಪ ಎದುರು ಬಿಜೆಪಿಯ ಎಚ್‌. ರವೀಂದ್ರ ಮುಖಾಮುಖಿ ಪೈಪೋಟಿ ನಡೆಸುತ್ತಿದ್ದಾರೆ. ಗೆಲುವಿನ ಓಟ ಮುಂದುವರಿಸಲು ಕಾಂಗ್ರೆಸ್‌ ಹುರಿಯಾಳು ಹಟಕ್ಕೆ ಬಿದ್ದಿದ್ದರೆ, ಕಳೆದ ಬಾರಿ ಕಡಿಮೆ ಅಂತರದಲ್ಲಿ ಕೈಜಾರಿದ್ದ ಗೆಲುವನ್ನು ಕಸಿದುಕೊಳ್ಳಲು ಬಿಜೆಪಿ ಅಭ್ಯರ್ಥಿ ಶತಪ್ರಯತ್ನ ಮಾಡುತ್ತಿದ್ದಾರೆ.

ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಮಿಶ್ರಣವಾದ ವಿಜಯನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಬಾಹುಳ್ಯವಿದೆ. ಕುರುಬರು ಮತ್ತು ಮುಸ್ಲಿಮರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. 15 ವರ್ಷಗಳಿಂದ ಕಾಂಗ್ರೆಸ್‌ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ವಶ ಮಾಡಿಕೊಳ್ಳಲು ಬಿಜೆಪಿ ತರಹೇವಾರಿ ಕಸರತ್ತು ನಡೆಸುತ್ತಿದೆ.

ADVERTISEMENT

ಜೆಡಿಎಸ್‌ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆಮ್‌ ಆದ್ಮಿ ಪಕ್ಷದ ರಮೇಶ್‌ ಬೆಲ್ಲಮ್‌ಕೊಂಡ, ಬಹುಜನ ಸಮಾಜ ಪಕ್ಷದ ಗುಲ್ಶನ್‌ ಬಾನು, ಕರ್ನಾಟಕ ರಾಷ್ಟ್ರ ಸಮಿತಿಯ ನರಸಿಂಹ ರೆಡ್ಡಿ ಕೆ.ಎಲ್‌. ಸೇರಿದಂತೆ ಒಟ್ಟು 15 ಮಂದಿ ಕಣದಲ್ಲಿದ್ದಾರೆ. ಸಮಾಜವಾದಿ ಜನತಾ ಪಕ್ಷದಿಂದ (ಕರ್ನಾಟಕ) ಮತ್ತು ಪಕ್ಷೇತರರಾಗಿ ರವೀಂದ್ರ ಹೆಸರಿನ ಇಬ್ಬರು ಸ್ಪರ್ಧಿಸಿದ್ದಾರೆ. ಎಂ. ಕೃಷ್ಣಪ್ಪ ಹೆಸರಿನ ಪಕ್ಷೇತರರೊಬ್ಬರು ಕಣದಲ್ಲಿದ್ದಾರೆ.

2008ರ ಚುನಾವಣೆಯಲ್ಲಿ ಕೃಷ್ಣಪ್ಪ ಅವರು ಬಿಜೆಪಿಯ ಪ್ರಮೀಳಾ ನೇಸರ್ಗಿ ವಿರುದ್ಧ ಗೆಲುವು ಸಾಧಿಸಿದ್ದರು. 2013ರಲ್ಲಿ ಬಿಜೆಪಿಯ ವಿ. ಸೋಮಣ್ಣ ಅವರನ್ನು ಪರಾಭವಗೊಳಿಸಿದ್ದರು. 2018ರಲ್ಲಿ ಬಿಜೆಪಿಯ ಎಚ್‌.ರವೀಂದ್ರ ಎದುರು 2,775 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೃಷ್ಣಪ್ಪ ಮತ್ತು ರವೀಂದ್ರ ಈ ಚುನಾವಣೆಯಲ್ಲಿ ಮತ್ತೆ ಮುಖಾಮುಖಿಯಾಗಿದ್ದಾರೆ.

ವಿಜಯನಗರ ವಸತಿ ಸಚಿವ ವಿ. ಸೋಮಣ್ಣ ಅವರು ಪ್ರತಿನಿಧಿಸುತ್ತಿದ್ದ ಹಿಂದಿನ ಬಿನ್ನಿಪೇಟೆ ಕ್ಷೇತ್ರದ ಭಾಗವಾಗಿತ್ತು. ಇಲ್ಲಿ ಸೋಮಣ್ಣ ಕೂಡ ಹಿಡಿತ ಹೊಂದಿದ್ದರು. ಈ ಕ್ಷೇತ್ರವೂ ಕೃಷ್ಣಪ್ಪ ಮತ್ತು ಸೋಮಣ್ಣ ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿಯ ಕಣವಾಗಿತ್ತು. ಬಿಜೆಪಿ ವರಿಷ್ಠರ ಆಣತಿಯಂತೆ ವರುಣ ಹಾಗೂ ಚಾಮರಾಜನಗರದತ್ತ ಸೋಮಣ್ಣ ವಲಸೆ ಹೋಗಿರುವುದು ವಿಜಯನಗರ ಕ್ಷೇತ್ರದ ಮೇಲೂ ತುಸು ಪ್ರಭಾವ ಬೀರಿದೆ.

‘ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಕಾನೂನು, ಸುವ್ಯವಸ್ಥೆ ಕುಸಿಯಲು ಅವಕಾಶ ನೀಡಿಲ್ಲ. ಶಾಸಕನ ಸ್ಥಾನವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿಲ್ಲ’ ಎಂದು ಹೇಳುವ ಕೃಷ್ಣಪ್ಪ, ನಾಲ್ಕನೇ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕೋವಿಡ್‌ ಸಂಕಷ್ಟದ ಕಾಲವೂ ಸೇರಿದಂತೆ ವೈಯಕ್ತಿಕವಾಗಿ ಜನರಿಗೆ ನೀಡಿದ ನೆರವು ಚುನಾವಣೆಯಲ್ಲಿ ಅನುಕೂಲಕ್ಕೆ ಬರಬಹುದು ಎಂಬುದು ಅವರ ನಿರೀಕ್ಷೆ.

ಸುಸಜ್ಜಿತ ಪಾಲಿಕೆ ಬಜಾರ್‌ ಮತ್ತು ಈಜು ಕೊಳಗಳ ನಿರ್ಮಾಣ ಸೇರಿದಂತೆ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ಹಿಡಿದು ಮತ ಕೇಳುತ್ತಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮೂಲಕ ಕುರುಬರು ಹಾಗೂ ಒಕ್ಕಲಿಗರ ಮತಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ.

‘ಕ್ಷೇತ್ರದಲ್ಲಿ 15 ವರ್ಷದಿಂದ ಅಭಿವೃದ್ಧಿಯೇ ಆಗಿಲ್ಲ. ಈ ಬಾರಿ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಕೊಡಿ’ ಎಂದು ರವೀಂದ್ರ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದಾರೆ. ಸ್ವತಃ ತಾವು ಹಾಗೂ ಮಗಳು ಮಹಾಲಕ್ಷ್ಮಿ ಬಿಬಿಎಂಪಿ ಸದಸ್ಯರಾಗಿ ಮಾಡಿದ ಕೆಲಸ ಮತ ಗಳಿಕೆಗೆ ನೆರವಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಲ್ಲಿ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಕೂಡ ನಡೆದಿದೆ. ಇದರಿಂದ ಗೆಲುವಿನ ದಡ ಸೇರಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

ಜೆಡಿಎಸ್‌ ಅಭ್ಯರ್ಥಿ 2018ರ ಚುನಾವಣೆಯಲ್ಲಿ 8,174 ಮತ ಪಡೆದಿದ್ದರು. ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್‌ ಅವರು ಕೃಷ್ಣಪ್ಪ ಸಹೋದರನ ಕುಟುಂಬದ ರೇವತಿ ಅವರನ್ನು ವರಿಸಿದ್ದಾರೆ. ಆ ಬಳಿಕ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಅದು ಕೂಡ ಈ ಕ್ಷೇತ್ರದ ಚುನಾವಣೆ ಮೇಲೆ ಪ್ರಭಾವ ಬೀರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.