ADVERTISEMENT

ಸೊಳ್ಳೆಗಿಂತ ಬಿಜೆಪಿಯ ಸುಳ್ಳು ನಿಯಂತ್ರಣವಾಗಬೇಕು: ಸಚಿವ ದಿನೇಶ್‌ ಗುಂಡುರಾವ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:44 IST
Last Updated 8 ಜುಲೈ 2024, 15:44 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಬೆಂಗಳೂರು: ಡೆಂಗಿ ಹರಡುವ ಸೊಳ್ಳೆಗಳಿಗಿಂತಲೂ ಮೊದಲು ಡೆಂಗಿ ಬಗ್ಗೆ ಬಿಜೆಪಿಯವರು ಹರಡುವ ಸುಳ್ಳು ನಿಯಂತ್ರಣವಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಡೆಂಗಿ ಬಗ್ಗೆ ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಜೊತೆಗೆ ಚರ್ಚೆ ನಡೆಸಿದ್ದೇನೆ. ಅವರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಆದರೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡೆಂಗಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟು ನಮ್ಮ ಜೊತೆ ಕೈಜೋಡಿಸಿ ಡೆಂಗಿ ನಿಯಂತ್ರಣಕ್ಕೆ ಸಹಕಾರ ನೀಡಲಿ’ ಎಂದು ಸಲಹೆ ನೀಡಿದರು.

ತುರ್ತು ಸ್ಥಿತಿ ಘೋಷಿಸುವ ಅಗತ್ಯವಿಲ್ಲ: ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿ ಡೆಂಗಿ ಬಗ್ಗೆ ಚರ್ಚಿಸಲಾಯಿತು. ವೈದ್ಯಕೀಯ ತುರ್ತುಪರಿಸ್ಥಿತಿ ಘೋಷಣೆ ಮಾಡುವಂತೆ ಅಲ್ಲಿ ವಿರೋಧ ಪಕ್ಷದವರು ಸಲಹೆ ನೀಡಿದರು. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ಹಾಸಿಗೆ, ಔಷಧಗಳಿಗೆ ಕೊರತೆ ಇಲ್ಲ. ಡೆಂಗಿ ನಿಯಂತ್ರಣದಲ್ಲಿದೆ. ಮಳೆಗಾಲ ಇನ್ನೂ ಎರಡು ತಿಂಗಳು ಇರುವುದರಿಂದ ಈ ಅವಧಿಯಲ್ಲಿ ಜರನು ಹೆಚ್ಚು ಜಾಗರೂಕರಾಗಿರಬೇಕು ಎಂದು ದಿನೇಶ್‌ ತಿಳಿಸಿದರು.

ADVERTISEMENT

ಮನೆಯ ಸುತ್ತಮುತ್ತಲು ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ಕೂಡ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.‌ ಪ್ರತಿ ಶುಕ್ರವಾರ ಅಭಿಯಾನದ ರೀತಿಯಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನ ನಾಶ ಪಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬರುವ ಸ್ಥಳಗಳಲ್ಲಿ ‘ಫೀವರ್ ಕ್ಲಿನಿಕ್’ ತೆರೆದು, ಟೆಸ್ಟಿಂಗ್ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳೊಂದಿಗೂ ಸಭೆ ನಡೆಸಲಾಗಿದೆ ಎಂದರು.

ಈಜಿದರೆ ತಪ್ಪೇನು?
‘ಈಜು ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ನಾನು ಸರ್ಕಾರಿ ಈಜುಕೊಳಕ್ಕೆ ಹೋಗಿ ಈಜಿದರೆ ತಪ್ಪೇನು? ಬಿಜೆಪಿ ಮುಖಂಡರು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ದಿನೇಶ್ ಗುಂಡೂರಾವ್‌ ಸಮರ್ಥಿಸಿಕೊಂಡರು. ‘ಬಿಜೆಪಿಯವರು ಮೋಜು ಮಸ್ತಿ ಮಾಡುತ್ತಾರಲ್ಲ. ನಿನ್ನೆ ನೆಲಮಂಗಲದಲ್ಲಿ ಅಭಿನಂದನಾ ಸಮಾರಂಭದಲ್ಲಿ ಏನೇನೋ ಹಂಚಿದರಲ್ಲ. ಅದೇ ರೀತಿ ಈಜು ಕೂಡ ಅಂತಂದುಕೊಂಡಿರಬೇಕು. ನಾನು ರೆಸಾರ್ಟ್‌ಗೆ ಹೋಗಿದ್ದಲ್ಲ. ಮಂಗಳೂರು ಪ್ರವಾಸದಲ್ಲಿದ್ದ ನಾನು ಬೆಳಿಗ್ಗೆ 6ಕ್ಕೆ ಅಲ್ಲಿನ ಸರ್ಕಾರಿ ಈಜುಕೊಳಕ್ಕೆ ಹೋಗಿದ್ದೆ. ಆನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.