ಬೆಂಗಳೂರು: ‘ಸಂವಿಧಾನದೊಂದಿಗೆ ನೇರವಾಗಿ ಸಂಘರ್ಷಕ್ಕೆ ಇಳಿದಿರುವ ಆರ್‌ಎಸ್‌ಎಸ್‌ನ ಚಟುವಟಿಕೆಯಲ್ಲಿ ಭಾಗವಹಿಸಲು ಸರ್ಕಾರಿ ನೌಕರರಿಗೆ ಅವಕಾಶ ನೀಡಿರುವುದು ಸರಿಯೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸರ್ಕಾರಿ ನೌಕರರು ಸೇವೆ ಆರಂಭಿಸುವ ಮೊದಲು ‘ನಾನು ಭಾರತದ ಸಂವಿಧಾನಕ್ಕೆ ಬದ್ಧನಾಗಿರುತ್ತೇನೆ. ನಿಜವಾದ ನಿಷ್ಠೆಯನ್ನು ಹೊಂದಿದ್ದೇನೆ. ನನ್ನ ಕಚೇರಿಯ ಕರ್ತವ್ಯಗಳನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತೇನೆ’ ಎಂದು ಪ್ರತಿಜ್ಞೆ ಸ್ವೀಕರಿಸುತ್ತಾರೆ. ಅಂದರೆ, ಯಾವುದೇ ಧರ್ಮ, ಜಾತಿ, ಜನಾಂಗದ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂಬುದನ್ನು ಪ್ರಮಾಣವಚನ ತಿಳಿಸುತ್ತದೆ. ಆದರೆ, ಆರ್‌ಎಸ್‌ಎಸ್ ಹಿಂದೂ ರಾಷ್ಟ್ರ ನಿರ್ಮಾಣದ ಗುರಿಯನ್ನುಇಟ್ಟುಕೊಂಡಿದೆ. ಇದು ಸಂವಿಧಾನದ ನಿಷ್ಠೆಯನ್ನು ಹೇಗೆ ಖಾತ್ರಿಪಡಿಸುತ್ತದೆ’ ಎಂದು ಕೇಳಿದ್ದಾರೆ.
ದೇಣಿಗೆ ಮಾಹಿತಿ ಗೋಪ್ಯ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಿಗೆ ಬರುತ್ತಿರುವ ವಿದೇಶಿ ನಿಧಿ ಬಗ್ಗೆ ಆರ್‌ಎಸ್‌ಎಸ್ ಮಾಹಿತಿ ನೀಡುತ್ತಿಲ್ಲ. ಆರ್‌ಎಸ್‌ಎಸ್‌ಗೆ ಧನ ಸಹಾಯ ಎಲ್ಲಿಂದ ಬರುತ್ತದೆ ಎಂದು 2002ರಲ್ಲಿಯೇ ದೇಶದ ಪ್ರಮುಖ ಪತ್ರಿಕೆಗಳು ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್ ಅವರನ್ನು ಪ್ರಶ್ನಿಸಿದ್ದವು. ಅವರು ಸ್ಪಷ್ಟ ಉತ್ತರವನ್ನು ನೀಡಿರಲಿಲ್ಲ. ವಿದೇಶಿ ದೇಣಿಗೆ ಪಡೆಯುವಾಗ ದೇಶದ ಎಲ್ಲ ಕಾನೂನುಗಳನ್ನು ಅನುಸರಿಸಿದೆಯೇ? ಹಿಂದೆ ಪಡೆದಿರುವ ದೇಣಿಗೆ ಬಗ್ಗೆ ಭಾರತ ಸರ್ಕಾರಕ್ಕೆ ಮಾಹಿತಿ ನೀಡಿದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಸಾಂಸ್ಕೃತಿಕ ಸಂಘಟನೆ ಎಂದು ಬಿಂಬಿಸಿಕೊಂಡಿರುವ ಆರ್‌ಎಸ್‌ಎಸ್ ಡಾಲರ್ ಲೆಕ್ಕದಲ್ಲಿ ಅಮೆರಿಕದಿಂದ ಉದಾರ ದೇಣಿಗೆಯನ್ನು ಪಡೆದಿರುವ ಬಗ್ಗೆ ಭಾರತೀಯ ಸಂಶೋಧಕರು ಮತ್ತು ಅಮೆರಿಕದ ಶಿಕ್ಷಣ ತಜ್ಞರು ದಾಖಲಿಸಿದ್ದಾರೆ. ಅಮೆರಿಕದಲ್ಲಿರುವ ಹಿಂದೂ ಬಲಪಂಥೀಯ ಗುಂಪುಗಳು ಕೋವಿಡ್ ಸಮಯದಲ್ಲಿ 8.33 ಲಕ್ಷ ಡಾಲರ್ ಸಂಗ್ರಹಿಸಿ ನೀಡಿದ್ದವು‘ ಎಂದು ಅವರು ಅಂಕಿ ಅಂಶ ನೀಡಿದ್ದಾರೆ.
ಇಂಥ ಸಮಯದಲ್ಲಿ ಮಧ್ಯಪ್ರದೇಶದ ಹೈಕೋರ್ಟ್ ‘ಆರ್‌ಎಸ್‌ಎಸ್‌ನಂಥ ಅಂತರರಾಷ್ಟ್ರೀಯ ಖ್ಯಾತಿಯ ಸಂಘಟನೆಯನ್ನು ದೇಶದ ನಿಷೇಧಿತ ಸಂಘಟನೆಗಳ ಪಟ್ಟಿಯಲ್ಲಿ ಇರಿಸಿದ್ದ ತಪ್ಪನ್ನು ಕೇಂದ್ರ ಸರ್ಕಾರ ಸರಿಪಡಿಸಿಕೊಂಡಿರುವುದು ಸರಿಯಾದ ಕ್ರಮ’ ಎಂದು ಹೇಳಿದೆ. ಹೀಗಾದರೆ ಸರ್ಕಾರಿ ನೌಕರರು ಸಂವಿಧಾನಕ್ಕೆ ಬದ್ಧರಾಗಿರುತ್ತಾರೆಯೇ? ಒಂದು ಸಂಘಟನೆಯಾಗಿ ಆರ್‌ಎಸ್ಎಸ್ ಯಾರಿಗೂ ಜವಾಬ್ದಾರಿಯಲ್ಲ. ಆದರೆ, ಸಂಸದೀಯ ಪ್ರಜಾಪ್ರಭುತ್ವ ಎಲ್ಲದಕ್ಕೂ ಜವಾಬ್ದಾರಿ ಎಂದು ಬಿಕೆಸಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.